ಎ.ಪಿ.ಎಂ.ಸಿ ಆವರಣದಲ್ಲಿ ಮೂಲಭೂತ ಸೌಕರ್ಯದ ಕೊರತೆ – ಶಾಸಕ ಐವಾನ್, ಖಾದರ್ ಪರಿಶೀಲನೆ
ಮಂಗಳೂರು: ಈವರೆಗೂ ನಗರದ ಸೆಂಟ್ರಲ್ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಹಣ್ಣು ಮತ್ತು ತರಕಾರಿ ಸಗಟು ಮಾರಾಟ ಬುಧವಾರದಿಂದ ಬೈಕಂಪಾಡಿಯ ಕೃಷ್ಟಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್ ಆವರಣಕ್ಕೆ ಸ್ಥಳಾಂತರ ವಾಗಿದೆ. ಮೊದಲ ದಿನವೇ ಹಲವು ವರ್ತಕರು ಅಲ್ಲಿ ವಹಿವಾಟು ನಡೆಸಿದರು.
ಬುಧವಾರ ವಿಧಾನ ಪರಿಷತ್ ಸದಸ್ಯ ಐವಾನ್ ಡಿ’ಸೋಜಾ, ಮಾಜಿ ಸಚಿವ ಯು ಟಿ ಖಾದರ್ ಅವರು ಎಪಿ ಎಮ್ ಸಿ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಅವಲೋಕನ ಮಾಡಿದರು. ಈ ವೇಳೆ ವರ್ತಕರಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಸ್ಥಳಾಂತರ ಮಾಡಿರುವ ಕುರಿತು ವರ್ತಕರು ಶಾಸಕರುಗಳಲ್ಲಿ ಅಸಮಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮ್ಯಾಂಗಲೋರಿಯನ್ ಜೊತೆ ಮಾತನಾಡಿದ ಕೇಂದ್ರ ಮಾರುಕಟ್ಟೆ ವರ್ತಕರ ಸಂಘ ಅಧ್ಯಕ್ಷ ಮುಸ್ತಾಫ ಮಾತನಾಡಿ ಜಿಲ್ಲಾಡಳಿತ ಯಾವುದೇ ಪೂರ್ವ ತಯಾರಿ ನಡೆಸದೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ ಮಾರುಕಟ್ಟೆಯನ್ನು ಸ್ಥಳಾಂತರಗೊಳಿಸಲಾಗಿದೆ. ಇಲ್ಲಿ ಹಲವಾರು ಹಾವುಗಳಿದ್ದು ನಿನ್ನೆ ಒಂದು ಹಾವನ್ನು ವರ್ತಕರು ಕೊಂದಿದ್ದು ಅದರ ಅಂತ್ಯ ಸಂಸ್ಕಾರ ನಡೆಸಲು ರೂ 10000 ನೀಡುವಂತೆ ಕೆಲವರು ಒತ್ತಡ ಹೇರುತ್ತಿದ್ದಾರೆ. ಇಲ್ಲಿನ ಮಾರುಕಟ್ಟೆ ಹಾವುಗಳಿಂದ ತುಂಬಿದ್ದು ಅದನ್ನು ಸ್ವಚ್ಚಗೊಳಿಸದೆ ಇಲ್ಲಿಗೆ ಸ್ಥಳಾಂತರ ಮಾಡಿರುವುದು ಸರಿಯಲ್ಲ. ಜಿಲ್ಲಾಡಳಿತ ಈ ಬಗ್ಗೆ ಕೂಡಲೇ ಮಧ್ಯಪ್ರವೇಶಿಸಿ ವರ್ತಕರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಆಗ್ರಹಿಸಿದರು.
ಈ ವೇಳೆ ಎಪಿಎಂಸಿ ಅಧ್ಯಕ್ಷರು ಉಪಾಧ್ಯಕ್ಷರು ವರ್ತಕರ ಸಂಘದ ಅಧ್ಯಕ್ಷರು ಮೊದಲಾದವರು ಉಪಸ್ಥಿತರಿದ್ದರು