ಎ.22: ಬಿಜೆಪಿಯ ಜನಾಕ್ರೋಶ ಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್‌ ವತಿಯಿಂದ  ದ.ಕ., ಉಡುಪಿಯಲ್ಲಿ ಪ್ರತಿಭಟನೆ : ಐವನ್ ಡಿಸೋಜ

Spread the love

ಎ.22: ಬಿಜೆಪಿಯ ಜನಾಕ್ರೋಶ ಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್‌ ವತಿಯಿಂದ  ದ.ಕ., ಉಡುಪಿಯಲ್ಲಿ ಪ್ರತಿಭಟನೆ : ಐವನ್ ಡಿಸೋಜ

ಮಂಗಳೂರು : ಬಿಜೆಪಿಯ ಜನಾಕ್ರೋಶ ಯಾತ್ರೆಗೆ ತಕ್ಕ ಉತ್ತರ ನೀಡಲು ಹಾಗೂ ಬೆಲೆ ಏರಿಕೆಗೆ ನೇರ ಕಾರಣವಾದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವತಿಯಿಂದ ರಾಜ್ಯಾದ್ಯಂತ ಎ.18ರಿಂದ ಪ್ರತಿಭಟನೆ ಆಯೋಜಿಸಲಾಗಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಎ.22ರಂದು ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯ ವಸ್ತಗಳು ಸೇರಿದಂತೆ ಎಲ್ಲ ಬಗೆಯ ಬೆಲೆ ಏರಿಕೆ ಆಗಲು ಕೇಂದ್ರ ಸರ್ಕಾರದ ನೀತಿಗಳೇ ನೇರ ಕಾರಣ. ಇದು ಗೊತ್ತಿದ್ದೂ ರಾಜ್ಯದಲ್ಲಿ ತಾವು ಜೀವಂತ ಇದ್ದೇವೆ ಅಂತ ತೋರಿಸಿಕೊಡಲು ಬಿಜೆಪಿ ಜನಾಕ್ರೋಶ ಯಾತ್ರೆ ಮಾಡಿದೆ. ಬಿಜೆಪಿಯವರಿಗೆ ಧೈರ್ಯ ಇದ್ದರೆ ಬೆಲೆ ಏರಿಕೆ ಯಾರು ಮಾಡಿದ್ದು, ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ನಿಜವಾದ ಜನಾಕ್ರೋಶ ಇರೋದೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ. ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದೀಗ ಅಡುಗೆ ಅನಿಲಕ್ಕೂ 50 ರೂ. ಹೆಚ್ಚಿಸಿ ಬರೆ ಎಳೆದಿದೆ. ಆದರೆ ತಾವು ಯಾರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಬಿಜೆಪಿಯವರಿಗೇ ಗೊತ್ತಿಲ್ಲ ಎಂದು ಟೀಕಿಸಿದರು.

ಪಶು ಆಹಾರ, ರಸಗೊಬ್ಬರ ದರ ಏರಿಕೆ ಮಾಡಿದ್ದು, ಅಗತ್ಯ ವಸ್ತುಗಳಿಗೂ ಜಿಎಸ್‌ಟಿ ಏರಿಕೆ ಮಾಡಿದ್ದು ಕೇಂದ್ರ ಸರಕಾರ. ಆದರೆ ರಾಜ್ಯ ಕಾಂಗ್ರೆಸ್ ಸರಕಾರ ಯಾವುದೇ ಅಗತ್ಯ ವಸ್ತುಗಳ ಮೇಲೆ ಒಂದು ಪೈಸೆ ತೆರಿಗೆಯನ್ನೂ ಹೆಚ್ಚಿಸಿಲ್ಲ. ಲೀಟರ್ ಹಾಲಿಗೆ ಏರಿಕೆ ಮಾಡಿ 4 ರೂ. ನೇರವಾಗಿ ರೈತರ ಖಾತೆಗೆ ಹೋಗುತ್ತಿದೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಇಲ್ಲದಿರುತ್ತಿದ್ದರೆ, ಕೇಂದ್ರ ಸರ್ಕಾರ ಮಾಡಿದ ಬೆಲೆ ಏರಿಕೆ ತಾಳಲಾರದೆ ಜನ ತತ್ತರಿಸುತ್ತಿದ್ದರು ಎಂದರು.

ಬೆಲೆ ಏರಿಕೆಗೆ ನೇರವಾಗಿ ಕೇಂದ್ರ ಸರ್ಕಾರ ಕಾರಣ ಎಂದೂ ಗೊತ್ತಿದ್ದರೂ ಬಿಜೆಪಿಯವರು ಬಾಯಿ ತೆರೆಯುತ್ತಿಲ್ಲ. ಬೆಲೆ ಏರಿಕೆ ಕಡಿಮೆ ಮಾಡಿ ಎಂದು ಕೇಂದ್ರ ಸರಕಾರವನ್ನು ಕೇಳಲು ಬಿಜೆಪಿ ಎಂಪಿಗಳು, ಸಚಿವರಿಗೆ ಧೈರ್ಯ ಇಲ್ಲ. ಕೇಂದ್ರ ಸರ್ಕಾರ ಕೂಡಲೆ ಕಾರ್ಯಪ್ರವೃತ್ತವಾಗಿ ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರಬೇಕು ಎಂದು ಐವನ್ ಆಗ್ರಹಿಸಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಜಯಪ್ರಕಾಶ್ ಹೆಗ್ಡೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ, ಅವರು ಜಾತಿ ಗಣತಿಯ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಅಂದು ಜಾತಿ ಗಣತಿಯನ್ನು ನಾವೇ ಮಾಡುತ್ತೇವೆ ಎಂದು ಹೇಳುತ್ತಿದ್ದ ಬಿಜೆಪಿಯವರು ಇಂದು ಕಾಂಗ್ರೆಸ್ ಸರಕಾರ ವರದಿಯನ್ನು ಸ್ವೀಕಾರ ಮಾಡುವಾಗ ವಿರೋಧ ಮಾಡುತ್ತಿದ್ದಾರೆ. ವರದಿಯಲ್ಲಿರುವ ಸತ್ಯಾಂಶ ಜನರಿಗೆ ತಿಳಿಯಬಾರದು, ತಿಳಿದರೆ ತಮಗೇ ತೊಂದರೆ ಎಂದು ಬಿಜೆಪಿಯವರಿಗೆ ಹೆದರಿಕೆ ಇದೆ. ಜಾತಿ ಗಣತಿ ಮಾಡಿದ್ದು ಸರಿಯೋ ತಪ್ಪೋ ಎಂಬುದನ್ನು ನೇರವಾಗಿ ಹೇಳಲು ಬಿಜೆಪಿಯವರಿಗೆ ಧೈರ್ಯ ಇಲ್ಲ ಎಂದರು.

ಕಾಂಗ್ರೆಸ್ ಮುಖಂಡರಾದ ನಾಗೇಂದ್ರ, ಪ್ರೇಮ್ ಮತ್ತಿತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments