Home Mangalorean News Kannada News ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಲಿ ; ಕೋಟ ಶ್ರೀನಿವಾಸ ಪೂಜಾರಿ 

ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಲಿ ; ಕೋಟ ಶ್ರೀನಿವಾಸ ಪೂಜಾರಿ 

Spread the love

ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಲಿ ; ಕೋಟ ಶ್ರೀನಿವಾಸ ಪೂಜಾರಿ 

ಉಡುಪಿ: ‘ರಾಜ್ಯದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ಬಡವರು, ಶ್ರೀಮಂತರ ಮಕ್ಕಳು ಒಟ್ಟಾಗಿ ಕಲಿಯುವ ವಾತಾವರಣ ನಿರ್ಮಾಣವಾಗಬೇಕು’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶುಕ್ರವಾರ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಹಮ್ಮಿಕೊಂಡಿದ್ದ 12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

‘ರಾಜ್ಯ ಸರ್ಕಾರ 1 ಸಾವಿರ ಇಂಗ್ಲಿಷ್‌ ಶಾಲೆಗಳನ್ನು ತೆರೆಯಲು ಹೊರಟಿದೆ. ಇದನ್ನು ವಿರೋಧಿಸಿದರೆ ಬಡವರು ಮಾತ್ರ ಸರ್ಕಾರಿ ಶಾಲೆಯಲ್ಲಿ ಕಲಿಯಬೇಕೆ, ಇಂಗ್ಲಿಷ್‌ ಕಲಿಯಬಾರದೆ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಸರ್ಕಾರದ ನಿರ್ಧಾರ ಬೆಂಬಲಿಸಿದರೆ, ಕನ್ನಡಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಈ ಕಂದಕವನ್ನು ಸರಿಪಡಿಸಲು ಏಕರೀತಿಯ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕು’ ಎಂದರು.

‘ರಾಜಕಾರಣಿಗಳ ಮಾಲೀಕತ್ವದಲ್ಲಿ ಬಹುತೇಕ ಶಿಕ್ಷಣ ಸಂಸ್ಥೆಗಳು ನಡೆಯುತ್ತಿರುವಾಗ ಏಕರೂಪದ ಶಿಕ್ಷಣ ಜಾರಿ ಕಷ್ಟಸಾಧ್ಯ. ಆದರೂ, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ, ಕನ್ನಡಪರ ಹೋರಾಟಗಳಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಸದಾ ಪ್ರತಿಧ್ವನಿಸುತ್ತಿರಲಿ’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಆಶಯ ನುಡಿಗಳನ್ನಾಡಿ, ‘ಸರ್ಕಾರಿ ಶಾಲೆಗಳನ್ನು ಬಲಪಡಿಸಲು, ಹೊಸದಾಗಿ ಆಂಗ್ಲ ಶಾಲೆಗಳನ್ನು ತೆರೆಯುವ ಅಗತ್ಯವಿಲ್ಲ. ಇಂಗ್ಲಿಷ್‌ ಶಿಕ್ಷಕರನ್ನು ನೇಮಕ ಮಾಡಿ, ಮಕ್ಕಳಿಗೆ ಇಂಗ್ಲಿಷ್‌ ಕಲಿಸಿದರೆ ಸಾಕು’ ಎಂದು ಅಭಿಪ್ರಾಯಪಟ್ಟರು.

ಮಕ್ಕಳಲ್ಲಿ, ಯುವಕರಲ್ಲಿ ಓದುವ ಆಸಕ್ತಿಯನ್ನು ಬೆಳೆಸಬೇಕಾಗಿದೆ. ಓದುವ ಸಂಸ್ಕೃತಿಯಿಂದ ವ್ಯಕ್ತಿತ್ವ ವಿಕಸನವಾಗಲಿದೆ. ಮಕ್ಕಳಿಗೆ ಸಾಹಿತ್ಯ ಬರೆಯುವಂತೆ ಪ್ರೋತ್ಸಾಹ ನೀಡಬೇಕಿದೆ. ತಾಳೆಗರಿಯ ಸಂರಕ್ಷಣೆ ಹಾಗೂ ಪುಸ್ತಕ ದಾನ ಅಭಿಯಾನಗಳು ನಿರಂತರವಾಗಿ ನಡೆಯಬೇಕು ಎಂದರು.

ಸಮ್ಮೇಳನಾಧ್ಯಕ್ಷ ಡಾ.ಗಣನಾಥ್ ಎಕ್ಕಾರು ಉಪಸ್ಥಿತರಿದ್ದರು. ಡಾ.ನಿಕೇತನ ಅವರ ‘ಬೊಗಸೆಯಲ್ಲಿ ಸಾಗರ’ ಹಾಗೂ ಸಚ್ಚಿದಾನಂದ ಅವರ ‘ತುಳುವರ ನಾಡು–ನುಡಿ’ ಪುಸ್ತಕವನ್ನು ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಉಪೇಂದ್ರ ಸೋಮಯಾಜಿ ಬಿಡುಗಡೆಗೊಳಿಸಿದರು.

ನಗರಸಭಾ ಸದಸ್ಯರಾದ ಹರೀಶ್ ಶೆಟ್ಟಿ, ರಶ್ಮಿ ಚಿತ್ತರಂಜನ್‌, ಲಯನ್ಸ್ ಭವನದ ಅಧ್ಯಕ್ಷ ರಾಜಗೋಪಾಲ್‌, ಕಸಾಪ ಗೌರವ ಕಾರ್ಯದರ್ಶಿ ಪೂರ್ಣಿಮಾ ಜನಾರ್ಧನ್ ಕಾರ್ಯಕ್ರಮ ನಿರೂಪಿಸಿದರು. ಗಿರಿಜಾ ಹೆಗ್ಡೆ ಗಾಂವ್ಕರ್ ವಂದಿಸಿದರು.


Spread the love

Exit mobile version