ಉಡುಪಿ: ಕಾಪು ಕಡಲತೀರದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಏಪ್ರಿಲ್ ಮಾಹೆಯಲ್ಲಿ ಬೀಚ್ ಉತ್ಸವ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.
ಅವರು ಶನಿವಾರ ಸಂಜೆ ಕಾಪು ಬೀಚ್ ನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಡುಪಿ, ಪ್ರವಾಸೋದ್ಯಮ ಇಲಾಖೆ ಉಡುಪಿ ಹಾಗೂ ಅಸೋಸಿಯೇಷನ್ಸ್ ಆಫ್ ಕೋಸ್ಟಲ್ ಟೂರಿಸಂ ಉಡುಪಿ ಇವರ ಸಹಯೋಗದಲ್ಲಿ ಸುಗ್ಗಿ ಹುಗ್ಗಿ 2015-16 ಜಾನಪದ ಕಾರ್ಯಕ್ರಮ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ವರ್ಗದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಟ್ಯಾಕ್ಸಿ ವಿತರಣಾ ಕಾರ್ಯಕ್ರಮವನ್ನು ಚಂಡೆ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಾಕೃತಿಕ ಸಂಪನ್ಮೂಲಗಳಿದ್ದು, ಇವುಗಳಿಂದ ಪ್ರವಾಸೋದ್ಯಮದ ಬೆಳವಣಿಗೆಗೆ ಹೆಚ್ಚಿನ ಅವಕಾಶಗಳಿದೆ, ಇವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು , ಕೇರಳ ಮತ್ತು ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿದೆ, ಕಾಪು ಬೀಚ್ ಗೆ ಪ್ರವಾಸಿಗರನ್ನು ಆಕರ್ಷಿಸಲು ಏಪ್ರಿಲ್ ತಿಂಗಳಿನಲ್ಲಿ ಬೀಚ್ ಉತ್ಸವ ನಡೆಸಲು ನಿರ್ಧರಿಸಲಾಗಿದ್ದು, ಮೋಹನ ಆಳ್ವಾ ಅವರ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ, ಹಾಗೂ ಪ್ರತಿ ವರ್ಷ ಸಹ ಈ ಉತ್ಸವ ನಡೆಸಲಾಗುವುದು ಅಲ್ಲದೇ ಕಾಪು ಬೀಚ್ ಪರಿಸರದಲ್ಲಿ 87 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಸುಗ್ಗಿ ಹುಗ್ಗಿಯಂತ ಹ ಕಾರ್ಯಕ್ರಮಗಳಿಂದ ಕನ್ನಡ ನಾಡಿನ ಇತಿಹಾಸ , ಪರಂಪರೆ, ಸಂಸ್ಕøತಿಯನ್ನು ಬಿಂಬಿಸುವ ಕೆಲಸ ನಡೆಯುತ್ತಿದೆ ಹಾಗೂ ಇತರೇ ಜಿಲ್ಲೆಗಳ ಸಾಂಸ್ಕøತಿಕ ಪರಂಪರೆಯ ದರ್ಶನ ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದರು.
ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ವರ್ಗದ 17 ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಟ್ಯಾಕ್ಸಿಗಳನ್ನು ಸಚಿವರು ವಿತರಿಸಿದರು.
ಸುಗ್ಗಿ ಹುಗ್ಗಿ ಕಾರ್ಯಕ್ರಮದಲ್ಲಿ, ಸದಾನಂದ ಕೋಡಿಬೆಂಗ್ರೆ ತಂಡದವರಿಂದ ಡೊಳ್ಳು ಕುಣಿತ, ವಸಂತ ಕೋಲ್ಯಾ ಮಂಗಳೂರು ಅವರಿಂದ ಚಂಡೆ ವಾದನ, ಲಕ್ಷ್ಮಿ ಸಿದ್ದಿ ಮತ್ತು ತಂಡ ಯಲ್ಲಾಪುರ ಅವರಿಂದ ಪುಗಡಿ-ಡಮಾಮಿ ನೃತ್ಯ, ಪ್ರಸಾದ್ ಮತ್ತು ತಂಡ ಮಲ್ಪೆ ಅವರಿಂದ ವೀರಗಾಸೆ ಕುಣಿತ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷರು ಹಾಗೂ ಕಾಪು ಸಿ.ಎ ಬ್ಯಾಂಕ್ ನ ಅಧ್ಯಕ್ಷ ದಿವಾಕರ ಶೆಟ್ಟಿ, ಅಸೋಸಿಯೇಷನ್ಸ್ ಆಫ್ ಕೋಸ್ಟಲ್ ಟೂರಿಸಂ ನ ಅಧ್ಯಕ್ಷ ಮನೋಹರ್ ಶೆಟ್ಟಿ, ದೇವಿಪ್ರಸಾದ್ ಕನ್ಸ್‍ಟ್ರಕ್ಷನ್ ಪ್ರೈ.ಲಿ ಕಾಪು/ಬೆಂಗಳೂರು ಇಲ್ಲಿನ ಆಡಳಿತ ನಿರ್ದೇಶಕ ಕೆ ವಾಸುದೇವ ಶೆಟ್ಟಿ, ಕಾಪು ಬೀಚ್ ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ. ದೇವದಾಸ ಪೈ ಸ್ವಾಗತಿಸಿದರು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್ ವಂದಿಸಿದರು. ಕಲಾವಿದ ಶಂಕರ್ ದಾಸ್ ನಿರೂಪಿಸಿದರು.