ಐದು ವರ್ಷ ಜನರ ಕಾರ್ಯಕರ್ತನಾಗಿರುವೆ – ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ
ಮಂಗಳೂರು: ‘ಈ ಲೋಕಸಭಾ ಚುನಾವಣೆಯಲ್ಲಿ ನನಗೊಂದು ಅವಕಾಶ ಕೊಡಿ. ಮುಂದಿನ ಐದು ವರ್ಷ ಜಿಲ್ಲೆಯ ಎಲ್ಲ ಜನರ ಕಾರ್ಯಕರ್ತನಾಗಿ ದುಡಿಯುತ್ತೇನೆ’ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಭರವಸೆ ನೀಡಿದರು.
ಸೋಮವಾರ ನಾಮಪತ್ರ ಸಲ್ಲಿಕೆಗೂ ಮೊದಲು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಪುರಭವನದಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಮುಂದಿನ 25 ದಿನ ನನಗಾಗಿ ಸಮಯ ಕೊಡಿ. ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಕಳುಹಿಸಿ. ಮುಂದಿನ ಐದು ವರ್ಷಗಳ ಕಾಲ ನಿಮ್ಮ ನಾಯಕನಾಗಿ ಅಲ್ಲ, ಕಾರ್ಯಕರ್ತನಾಗಿ ನಿಮ್ಮೊಂದಿಗೆ ಇರುವೆ. ಜಿಲ್ಲೆಯ ಯುವಜನರ ಧ್ವನಿಯನ್ನು ಸಂಸತ್ತಿನಲ್ಲಿ ಮೊಳಗಿಸುವೆ’ ಎಂದರು.
27 ವರ್ಷದಿಂದ ಇಲ್ಲಿ ಬಿಜೆಪಿಗೆ ಅವಕಾಶ ಸಿಕ್ಕಿದೆ. ಈಗ ಬದಲಾವಣೆ ಅನಿವಾರ್ಯವಾಗಿದೆ. ಜಿಲ್ಲೆಗೆ ಜಾತ್ಯತೀತ, ಸೌಹಾರ್ದದ ರಾಜಕಾರಣ ಬೇಕಿದೆ. ಒಂದು ಕಾಲದಲ್ಲಿ ಸೌಹಾರ್ದದ ಕೊಂಡಿಯಾಗಿದ್ದ ಈ ಜಿಲ್ಲೆಯನ್ನು ಮತ್ತೆ ಅದೇ ಹಾದಿಗೆ ತರಬೇಕಿದೆ. ಬ್ರಹ್ಮಶ್ರೀ ನಾರಾಯಣ ಗುರು, ಭಗವಾನ್ ಶ್ರೀರಾಮಚಂದ್ರ, ಮುಹಮ್ಮದ್ ಪೈಗಂಬರ್, ಏಸು ಕ್ರಿಸ್ತರ ಆಶಯಗಳನ್ನು ಮುಂದಿಟ್ಟುಕೊಂಡು ಜಿಲ್ಲೆಯನ್ನು ಕಟ್ಟಬೇಕಿದೆ. ಇದನ್ನು ಸಾಕಾರಗೊಳಿಸುವುದಕ್ಕಾಗಿ ಜಿಲ್ಲೆಯ ಜನರು ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
‘ಜಿಲ್ಲೆಯಲ್ಲಿ 152 ಪದವಿ ಕಾಲೇಜುಗಳು, 13 ಎಂಜಿನಿಯರಿಂಗ್ ಕಾಲೇಜು, ಎಂಟು ವೈದ್ಯಕೀಯ ಕಾಲೇಜುಗಳು ಸೇರಿದಂತೆ ನೂರಾರು ಶಿಕ್ಷಣ ಸಂಸ್ಥೆಗಳಿವೆ. ಆದರೆ, ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಜಿಲ್ಲೆಯ ಯುವಜನರು ಉದ್ಯೋಗ ಅರಸಿಕೊಂಡು ವಲಸೆ ಹೋಗುತ್ತಿದ್ದಾರೆ. ನಾನು ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗಾಗಿ ಕೆಲಸ ಮಾಡುವೆ. ಯುವಜನರು ಇಲ್ಲಿಯೇ ಉದ್ಯೋಗ ಪಡೆದು, ವಯಸ್ಸಾದ ತಮ್ಮ ಪೋಷಕರ ಜೊತೆಗಿರಲು ಅವಕಾಶ ಕಲ್ಪಿಸುವೆ’ ಎಂದು ಭರವಸೆ ನೀಡಿದರು.
ಸಚಿವ ಯು.ಟಿ.ಖಾದರ್ ಮಾತನಾಡಿ, ‘ಹತ್ತು ವರ್ಷಗಳಿಂದ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡದ ನಿಷ್ಕ್ರಿಯ ಸಂಸದರನ್ನು ನಿವೃತ್ತಿಗೊಳಿಸುವ ಕಾಲ ಈಗ ಬಂದಿದೆ. ಮಿಥುನ್ ಅವರಂತಹ ಯುವ ಮುಖವನ್ನು ಕಾಂಗ್ರೆಸ್ ಹೈಕಮಾಂಡ್ ನಮಗೆ ನೀಡಿದೆ. ಅವರನ್ನು ಗೆಲ್ಲಿಸುವ ಮೂಲಕ ರಾಹುಲ್ ಗಾಂಧಿಯವರನ್ನು ಪ್ರಧಾನಿ ಹುದ್ದೆಗೇರಿಸಲು ಕೊಡುಗೆ ನೀಡಬೇಕಿದೆ’ ಎಂದರು.
ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹಬ್ಬಿಸಿ ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದವರು ಬಲ ಪಂಥದವರೂ ಅಲ್ಲ, ಎಡ ಪಂಥದವರೂ ಅಲ್ಲ. ನೇರ ಪಂಥದವರು. ಹತ್ತು ವರ್ಷ ಯಾವ ಕೆಲಸವನ್ನೂ ಮಾಡದ ನಳಿನ್‌ಕುಮಾರ್ ಕಟೀಲ್, ಚುನಾವಣೆ ಹೊಸ್ತಿಲಿನಲ್ಲಿ ಹಲವು ಕಡೆ ಭೂಮಿಪೂಜೆ ಮಾಡಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್– ಜೆಡಿಎಸ್ ಜಿಲ್ಲಾ ಜಂಟಿ ಚುನಾವಣಾ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ ಮಾತನಾಡಿ, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆನಗಲ್ ಶಿವರಾಯರಿಂದ ಜನಾರ್ದನ ಪೂಜಾರಿಯವರೆಗೆ ಜವಾಬ್ದಾರಿಯುತ ವ್ಯಕ್ತಿಗಳು ಸಂಸದರಾಗಿದ್ದರು. ಬಂದರು, ವಿಮಾನ ನಿಲ್ದಾಣ, ಎನ್‌ಐಟಿಕೆಯಂತಹ ಯೋಜನೆಗಳನ್ನು ತಂದಿದ್ದರು. ಈಗ ನಮ್ಮಲ್ಲಿ ಇರುವುದು ಕಳಪೆ ಸಂಸದರು ಎಂದು ಬಿಜೆಪಿ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಶ್ವೇತಪತ್ರ ಹೊರಡಿಸಲಿ’ ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ‘ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಸಂಸದರೇ ಇಲ್ಲ ಎಂಬ ಸ್ಥಿತಿ ಇದೆ’ ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಜೆಡಿಎಸ್ ಮುಖಂಡರಾದ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ರಾಜ್ಯಸಭೆಯ ಮಾಜಿ ಸದಸ್ಯ ಬಿ.ಇಬ್ರಾಹಿಂ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಂ.ಮಸೂದ್, ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.