ಐರಿನ್ ರೆಬೆಲ್ಲೊ ಇವರಿಗೆ 15 ನೇ ಕಲಾಕಾರ್ ಪುರಸ್ಕಾರ
ಕಾರ್ವಾಲ್ ಘರಾಣೆಂ ಮಾಂಡ್ ಸೊಭಾಣ್ ಸಹಕಾರದಲ್ಲಿ ನೀಡುವ 15 ನೇ ಸಾಲಿನ ಕಲಾಕಾರ್ ಪುರಸ್ಕಾರಕ್ಕೆ ಐರಿನ್ ರೆಬೆಲ್ಲೊ (ಡಿಕುನ್ಹ) ಆಯ್ಕೆಯಾಗಿದ್ದಾರೆ.
2019 ನವೆಂಬರ್ 03 ರಂದು ಭಾನುವಾರ ಸಂಜೆ 6.00 ಗಂಟೆಗೆ ಕಲಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂದೇಶ ಪ್ರತಿಷ್ಟಾನದ ನಿರ್ದೇಶಕರಾದ ವಂ ಫ್ರಾನ್ಸಿಸ್ ಆಸ್ಸಿಸಿ ಆಲ್ಮೇಡಾ ಪುರಸ್ಕಾರ ಪ್ರದಾನ ಮಾಡಲಿದ್ದಾರೆ.
ಐರಿನ್ರವರು ಕೊಂಕಣಿ ಮದುವೆ ಹಾಡುಗಳಾದ ವೋವಿಯೊ ವೇರ್ಸ್ ಬಗ್ಗೆ ಊರೂರುಗಳಲ್ಲಿ ಕಾರ್ಯಾಗಾರ ನಡೆಸಿ, ತರಬೇತಿ ನೀಡಿ, ಈ ಜನಪದ ಪ್ರಕಾರವನ್ನು ಉಳಿಸಿ, ಬೆಳೆಸುವ ಕೆಲಸವನ್ನು ಕಳೆದ 15 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ತನ್ನದೇ ತಂಡ ಕಟ್ಟಿಕೊಂಡು ಕ್ರೈಸ್ತರ ರೋಸ್ ಸಂಭ್ರಮಗಳಲ್ಲಿ ಹಾಡುತ್ತಾರೆ. ಈ ವಿಷಯದ ವಿಶೇಷÀÀ ಅಧ್ಯಯನ ನಡೆಸಿ `ಭಾಯ್ಲ್ಯಾನ್ ಆಯ್ಲೊ ವ್ಹೊರ್’ ಹಾಗೂ `ಆಪ್ರೊಸಾಚಿ ವಾಟ್ಲಿ’ ಎಂಬ ಎರಡು ಪುಸ್ತಕಗಳನ್ನು ಬರೆದಿರುತ್ತಾರೆ. ಹಲವಾರು ಸಂಘಟನೆಗಳಲ್ಲಿ ಅವರು ಸಕ್ರಿಯರಾಗಿದ್ದಾರೆ.
ಪುರಸ್ಕಾರವು ರೂ 25,000/-, ಸ್ಮರಣಿಕೆ, ಶಾಲು, ಫಲ-ಪುಷ್ಪ ಹಾಗೂ ಸನ್ಮಾನ ಪತ್ರ ಒಳಗೊಂಡಿದೆ. ನಂತರ 215 ನೇ, ತಿಂಗಳ ವೇದಿಕೆ ಸರಣಿಯಲ್ಲಿ, ಆಲ್ವಿನ್-ಅರುಣ್ ದಾಂತಿ ಸೋದರರಿಂದ `ಬಿಂದಾಸ್ 2.0’ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಕಲಾಕಾರ್ ಪುರಸ್ಕಾರ : ಸಂಗೀತ, ನಾಟಕ, ನೃತ್ಯ, ಜನಪದ ಹೀಗೆ ಕೊಂಕಣಿ ಪ್ರದರ್ಶನ ಕಲೆಯ ವಿವಿಧ ಪ್ರಕಾರಗಳ ಕರ್ನಾಟಕ ಮೂಲದ ಕಲಾವಿದರನ್ನು ಗೌರವಿಸಲು 2005 ರಲ್ಲಿ ಗೋವಾದ ಭಾಷಾ ತಜ್ಞ ಡಾ. ಪ್ರತಾಪ್ ನಾಯ್ಕ್ ಇವರು ತನ್ನ `ಕಾರ್ವಾಲ್ ಘರಾಣೆಂ’ ಕುಟುಂಬಿಕರ ಪರವಾಗಿ ಮಾಂಡ್ ಸೊಭಾಣ್ ಸಂಸ್ಥೆಯ ಆಶ್ರಯದಲ್ಲಿ ಈ ಪುರಸ್ಕಾರ ಸ್ಥಾಪಿಸಿದ್ದರು. ಇದುವರೆಗೆ ಅರುಣ್ರಾಜ್ ರೊಡ್ರಿಗಸ್ (ನಾಟಕ), ಜೊಯೆಲ್ ಪಿರೇರಾ (ಸಂಗೀತ), ಹ್ಯಾರಿ ಡಿಸೊಜಾ (ಬ್ರಾಸ್ಬ್ಯಾಂಡ್), ವಂ. ಚಾಲ್ರ್ಸ್ ವಾಸ್ (ಭಕ್ತಿ ಸಂಗೀತ), ಅನುರಾಧಾ ಧಾರೇಶ್ವರ್ (ಸಂಗೀತ), ಸಂತ ಭದ್ರಗಿರಿ ಅಚ್ಯುತದಾಸ್ (ಹರಿಕಥೆ), ಜೇಮ್ಸ್ ಲೊಪಿಸ್, ಹೊನ್ನಾವರ (ಬ್ರಾಸ್ಬ್ಯಾಂಡ್), ನೊರ್ಬರ್ಟ್ ಗೊನ್ಸಾಲ್ವಿಸ್ (ಸಂಗೀತ), ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ (ನಾಟಕ), ರೋಶನ್ ಡಿಸೋಜ (ಸಂಗೀತ), ಕ್ರಿಸ್ಟೋಫರ್ ಡಿಸೋಜ (ನಾಟಕ), ಆವಿಲ್ ಡಿಕ್ರೂಜ್ (ನೃತ್ಯ) ಎಂ. ಗೋಪಾಲ ಗೌಡ (ಜಾನಪದ) ಹಾಗೂ ಡೊಲ್ಲಾ ಮಂಗಳೂರು (ನಾಟಕ) ಇವರಿಗೆ ಈ ಪುರಸ್ಕಾರ ನೀಡಲಾಗಿದೆ.