ಐವನ್ ಡಿಸೋಜ ನೇತೃತ್ವದಲ್ಲಿ ಸರ್ವ ಧರ್ಮಗಳ ದೀಪಾವಳಿ ಆಚರಣೆ

Spread the love

ಐವನ್ ಡಿಸೋಜ ನೇತೃತ್ವದಲ್ಲಿ ಸರ್ವ ಧರ್ಮಗಳ ದೀಪಾವಳಿ ಆಚರಣೆ

ಮಂಗಳೂರು: ರಾಜ್ಯ ಸರಕಾರದ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ನೇತೃತ್ವದಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಬುಧವಾರ ನಗರದ ಪುರಭವನದಲ್ಲಿ ಸರ್ವ ಧರ್ಮಗಳ ಸಂಗಮ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ದೀಪಾವಳಿ ಹಬ್ಬ ಸರ್ವಧರ್ಮಗಳನ್ನು ಒಗ್ಗೂಡಿಸುವ ಹಬ್ಬವಾಗಿದೆ. ಹೇಗೆ ದೀಪಗಳು ತನ್ನ ಬೆಳಕನ್ನು ಎಲ್ಲರಿಗೂ ಸಮಾನವಾಗಿ ಹಂಚುವಂತೆ ನಾವೂ ಕೂಡ ಪ್ರತಿಯೊಬ್ಬರನ್ನು ಸಮಾನವಾಗಿ ಪ್ರೀತಿಸಬೇಕು. ಎಲ್ಲಾ ಧರ್ಮಗಳು ಒಗ್ಗಟ್ಟಿನ ಮಂತ್ರವನ್ನು ನಮಗೆ ಕಲಿಸುತ್ತೇವೆ ಅಂತೆಯೇ ಅದೆ ಶಾಂತಿ ಏಕತೆ ಹಾಗೂ ಪ್ರೀತಿಯ ಸಂದೇಶವನ್ನು ಸಮಾಜಕ್ಕೆ ನೀಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ ದ್ವೇಷದಿಂದ ಜಗತ್ತನ್ನು ಎಂದೂ ಆಳಲು ಸಾಧ್ಯವಿಲ್ಲ ಆದರೆ ಅದನ್ನು ಪ್ರೀತಿಯಿಂದ ಮಾತ್ರ ಸಾಧ್ಯ. ದೇವರು-ಧರ್ಮಕ್ಕಾಗಿ ಜಗಳವಾಡುವುದು ಮನುಷ್ಯತ್ವವಲ್ಲ, ಮನುಷ್ಯ ದ್ವೇಷಿಯು ಧರ್ಮ ದ್ವೇಷಿಯೂ ಆಗಿದ್ದಾನೆ. ದ್ವೇಷ ಅಳಿಸಲು ಮನುಷ್ಯ ಮನುಷ್ಯರ ನಡುವೆ ಪರಸ್ಪರ ವಿಶ್ವಾಸ ಮೂಡಿಸುವ ಅಗತ್ಯವಿದೆ. ವಿಶ್ವಾಸವಿಲ್ಲದಿದ್ದರೆ ಬದುಕು ಅಸಾಧ್ಯ. ಇಂತಹ ಪ್ರೀತಿ-ವಿಶ್ವಾಸ ಮೂಡಿಸಲು ಅಪನಂಬಿಕೆಯನ್ನು ದೂರ ಮಾಡಬೇಕಾಗಿದೆ. ಕೆಲವು ಮಂದಿ ಜಿಲ್ಲೆಯ ಶಾಂತಿಯನ್ನು ಕದಡಿಸುವ ಕೆಲಸಕ್ಕೆ ಕೈ ಹಾಕುವುದರ ಮೂಲಕ ಜನರ ಮಧ್ಯೆ ಬಿರುಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.  ಕೋಮು ಪ್ರಚೋದಿತ ಮಾತುಗಳನ್ನಾಡಿ ಧರ್ಮದ ಹೆಸರಿನಲ್ಲಿ ಜನನಾಯಕರಾಗಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿಯ ನಾಯಕರಾಗುವ ಬದಲು ಜನರ ಸೇವೆ ಮಾಡಿ ಜನನಾಯಕರಾಗಿ ಗುರುತಿಸಿಕೊಳ್ಳಬೇಕು ಎಂದು ಹೇಳಿದರು.

ಸಿಎಸ್ ಐ ಧರ್ಮಧ್ಯಕ್ಷ ರೆ.ಡಾ. ಮೋಹನ್ ಮನೋರಾಜ್ ಮಾತನಾಡಿ, ದೀಪಾವಳಿ ಹಬ್ಬ ಪ್ರತಿಯೊಬ್ಬರಿಗೂ ಪ್ರೀತಿ, ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುತ್ತದೆ. ಪ್ರತಿಯೊಬ್ಬರು ಅಸೂಯೆ, ಕೋಮು ಸಂಘರ್ಷದ ವಿರುದ್ದ ನಿಲ್ಲಬೇಕಾಗಿದೆ. ಪ್ರತಿಯೊಬ್ಬರು ಪರಸ್ಪರ ಬೆರೆತು ಬಾಳುವುದರೊಂದಿಗೆ ಪರಸ್ಪರ ಪ್ರೀತಿಸುವ ಕೆಲಸ ಮಾಡಿದಾಗ ಸಮಾಜದಲ್ಲಿ ಸೌಹಾರ್ದತೆ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಮನಾಪ ಮೇಯರ್ ಕವಿತಾ ಸನೀಲ್, ಉಪಮೇಯರ್ ರಜನೀಶ್, ಮುಸ್ಲಿಂ ಸೆಂಟ್ರಲ್ ಕಮಿಟಿ ಇದರ ಅಧ್ಯಕ್ಷ ಕೆ.ಎಸ್. ಮಸೂದ್ ಹಾಗೂ ಇತರರು ಭಾಗವಹಿಸಿದ್ದರು.


Spread the love