ಒಂದೇ ದಿನ ದತ್ತಜಯಂತಿ- ಈದ್ ಮಿಲಾದ್ ಶಾಂತಿ ಕಾಪಾಡಲು ಎಸ್ಪಿ ಅಣ್ಣಾಮಲೈಯಿಂದ ಕಾರ್ಟೂನ್ ಜಾಗೃತಿ
ಚಿಕ್ಕಮಗಳೂರು: ಚಿಕ್ಕಮಗಳೂರು ಹೇಳಿ ಕೇಳಿ ಒಂದು ಕಾಲದಲ್ಲಿ ಕೋಮು ಸೂಕ್ಷ ಪ್ರದೇಶ ಅಲ್ಲದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಹೇಳಿ ಮಾಡಿದ ಸ್ಥಳವೆಂದು ಹೆಸರು ಪಡೆದಿತ್ತು. ಒಂದು ವರ್ಷದ ಹಿಂದ ಉಡುಪಿ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆಯಾಗಿ ಹೋದವರೇ ಸೂಪರ್ ಕಾಪ್ ಸಿಂಗಮ್ ಎಸ್ಪಿ ಅಣ್ಣಾಮಲೈ. ಅಣ್ಣಾಮಲೈ ಅವರು ಚಿಕ್ಕಮಗಳೂರಿನ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿ ಮೊದಲು ಮಾಡಿದ ಕೆಲಸವೆಂದರೆ ಎಲ್ಲ ಧರ್ಮಗಳೊಂದಿಗೆ ಸಾಮರಸ್ಯ ಮೂಡಿಸುವುದು. ಹಲವಾರು ಅನೈತಿಕ ದಂಧೆಗಳಿಗೆ, ಕೋಮುಗಲಭೆಗಳಿಗೆ ಪುಲ್ ಸ್ಟಾಪ್ ಹಾಕಿದ್ದರು. ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಘರ್ಷಣೆಗೆ ಕಾರಣವಾಗಿದ್ದ ಬಾಬಾ ಬುಡಾನ್ ಗಿರಿಯ ದತ್ತ ಜಯಂತಿ ವಿವಾದ ಇಂದು ನಿನ್ನೆಯದಲ್ಲ. ಕಳೆದ ವರ್ಷ ಸಸೂತ್ರವಾಗಿ ದತ್ತ ಜಯಂತಿಯನ್ನು ಮಾಡಿ ಮುಗಿಸಿದ ಎಸ್ಪಿ ಅಣ್ಣಾಮಲೈ ನೇತೃತ್ವದ ಚಿಕ್ಕಮಗಳೂರು ಪೋಲಿಸರು ಈ ವರ್ಷ ಕೂಡ ವಿನೂತನ ಯೋಜನೆ ಹಾಕಿಕೊಂಡಿದ್ದಾರೆ.
ದತ್ತ ಜಯಂತಿ ಹಾಗೂ ಈದ್-ಮಿಲಾದ್ ಒಂದೇ ದಿನ ಬಂದಿರೋದ್ರಿಂದ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಹೊಸ ಪ್ರಯತ್ನಕ್ಕೆ ಮುಂದಾಗಿದೆ.
ಈಶ್ವರ್ ಅಲ್ಲಾ ತೇರೋ ನಾಮ್, ಸಬಕೋ ಸನ್ಮತಿ ದೇ ಭಗವಾನ್ ಎಂದು ಮಹಾತ್ಮ ಗಾಂಧಿಜೀ ಹಿಂದೂ ಹಾಗೂ ಮುಸ್ಲಿಂ ಯುವಕರನ್ನು ತಬ್ಬಿಕೊಂಡಿರೋ ಕಾರ್ಟೂನ್ ಸೇರಿದಂತೆ, ನೀವು ಪರಿಶೀಲಿಸದೆ ಫಾವರ್ಡ್ ಮಾಡೋ ಒಂದೊಂದು ಸಂದೇಶ ಕೂಡ ಮಾರಕಾಯುಧಗಳಷ್ಟೇ ಅಪಾಯಕಾರಿ ಹಾಗೂ ದೇಶ ಗೆಲ್ಲೋದಕ್ಕೆ ಮತೀಯ ಪಾರ್ಟ್ನ ರ್‍ಶಿಪ್ ಬೇಕು ಎಂಬ ಸಂದೇಶಗಳುಳ್ಳ ಬೋರ್ಡ್ ಮಾಡಿಸಿ ಚಿಕ್ಕಮಗಳೂರು ನಗರದ ಪ್ರಮುಖ ಭಾಗಗಳಲ್ಲಿ ಹಾಕಲಾಗಿದೆ. ಈ ಕಾರ್ಟೂನುಗಳನ್ನು ದೇಶದ ಹೆಸರಾಂತ ಕಾರ್ಟೂನಿಸ್ಟ್ ಆಗಿರುವ ಸತೀಶ್ ಆಚಾರ್ಯ ನಿರ್ಮಿಸಿದ್ದು ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ತಮ್ಮ ಸೇವೆಯನ್ನು ಕಾರ್ಟೂನ್ ಮೂಲಕ ನೀಡಿದ್ದಾರೆ.
ಒಬ್ಬರು ಎಸ್ಪಿ, ಮೂರು ಮಂದಿ ಎಎಸ್ಪಿ, 10 ಡಿವೈಎಸ್ಪಿಗಳು, 30 ಸರ್ಕಲ್ ಇನ್ಸ್‌ಪೆಕ್ಟರ್‌ಗಳು, ಇನ್ಸ್‌ಪೆಕ್ಟರ್‌ಗಳು, 134 ಪಿಎಸೈಗಳು, 227 ಎಎಸೈಗಳು, ಎರಡು ಸಾವಿರ ಪೊಲೀಸರು, 20 ಡಿಎಆರ್ ತುಕಡಿ, 16 ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಸುಮಾರು ನಾಲ್ಕು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲಾದ್ಯಂತ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಶಾಂತಿ ಸಭೆ ನಡೆಸಲಾಗಿದೆ. ಶೋಭಾಯಾತ್ರೆ ಹಿನ್ನೆಲೆಯಲ್ಲಿ ಈದ್ ಮಿಲಾದ್ ಮೆರವಣಿಗೆಯನ್ನು ಬೆಳಗ್ಗೆಯೇ ನಡೆಸುವಂತೆ ಮನವೊಲಿಸಲಾಗಿದೆ. ಕಾನೂನು ಸುವ್ಯವಸ್ಥೆ ನಿರ್ವಹಿಸಲು ಅನುಕೂಲವಾಗುವಂತೆ ಚೆಕ್ ಪೋಸ್ಟ್‌ಗಳಲ್ಲಿ 48 ಕಾರ‍್ಯಕಾರಿ ದಂಡಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಎಲ್ಲ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್‌ಗಳು ಕೇಂದ್ರ ಸ್ಥಾನದಲ್ಲಿರುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ದತ್ತಜಯಂತಿ ಹಿನ್ನೆಲೆಯಲ್ಲಿ ನ.30ರ ಮಧ್ಯರಾತ್ರಿಯಿಂದ ಡಿಸೆಂಬರ್ 3ರ ಮಧ್ಯರಾತ್ರಿವರೆಗೆ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಜಿಲ್ಲೆಯ ಗಡಿ ಬೇಲೂರು, ಭದ್ರಾವತಿ ಮತ್ತಿತರ ತಾಲೂಕುಗಳಲ್ಲೂ ಮದ್ಯ ಮಾರಾಟ ನಿಷೇಧಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಕರ್ನಾಟಕ ಪೊಲೀಸ್ ಆ್ಯಕ್ಟ್ನ ಕಲಂ 35 ಮತ್ತು 39ರಡಿ ಆಯೋಜಕರು ಶಾಂತಿ ಕಾಪಾಡುವ ಬಗ್ಗೆ ನಿರ್ದಿಷ್ಟ ನಿರ್ದೇಶನ ನೀಡಿ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ.
ಡಿ.2ರಂದು ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಬಸವನಹಳ್ಳಿ ಮುಖ್ಯರಸ್ತೆ, ಎಂ.ಜಿ.ರಸ್ತೆ, ಆಜಾದ್‌ಪಾರ್ಕ್, ಮಾರ್ಕೆಟ್ ರಸ್ತೆ, ಕೆ.ಎಂ.ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರ ಮತ್ತು ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.