Home Mangalorean News Kannada News ಒಳಕಾಡು ಮನೆಯಲ್ಲಿ ₹ 22 ಲಕ್ಷ ಕಳವು – ಇಬ್ಬರ ಬಂಧನ

ಒಳಕಾಡು ಮನೆಯಲ್ಲಿ ₹ 22 ಲಕ್ಷ ಕಳವು – ಇಬ್ಬರ ಬಂಧನ

Spread the love

ಒಳಕಾಡು ಮನೆಯಲ್ಲಿ ₹ 22 ಲಕ್ಷ ಕಳವು – ಇಬ್ಬರ ಬಂಧನ

ಉಡುಪಿ: ಒಳಕಾಡಿನ ಹರಿಶ್ಚಂದ್ರ ಮಾರ್ಗದಲ್ಲಿರುವ ಮನೆಯಲ್ಲಿ ₹ 22 ಲಕ್ಷ ಹಾಗೂ ಅರ್ಧ ಕೆ.ಜಿ ಬೆಳ್ಳಿಯನ್ನು ಕಳವು ಮಾಡಿದ ಆರೋಪದ ಮೇಲೆ ಇಬ್ಬರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮುಂಬೈ ಸಾಂಗ್ಲಿ ನಿವಾಸಿ ಅತುಲ್ ಬಾಗ್ನೆ ಮತ್ತು ಸಂದೀಪ್ ಚಂದ್ರಕಾಂತ್ ಎಂದು ಗುರುತಿಸಲಾಗಿದೆ.

ಸುನಂದ ಮಾಣಿಕ್ಯ ಪಾಟೀಲ್ ಎಂಬವರು ಮಧ್ಯಾಹ್ನ ಮುಕುಂದಕೃಪಾ ಶಾಲೆಗೆ ಮಕ್ಕಳಿಗೆ ಟಿಫಿನ್ ಕೊಡಲು ತನ್ನ ಉಡುಪಿ ತಾಲೂಕು ಒಳಕಾಡು ಹರಿಶ್ಚಂದ್ರಮಾರ್ಗದಲ್ಲಿರುವ ಭಗವತಿ ಕೃಪಾ ಹೆಸರಿನ ಮನೆಗೆ ಬೀಗ ಹಾಕಿ ಹೋಗಿದ್ದು, ಸುಮಾರು 1:00 ಗಂಟೆಗೆ ವಾಪಾಸು ಬಂದು ಮನೆಯ ಬಾಗಿಲಿನ ಬೀಗವನ್ನು ತೆರೆಯಲು ಹೋದಾಗ ತೆಗೆಯಲು ಬರದಿದ್ದು, ನಂತರ ಸುನಂದ ಮಾಣಿಕ್ಯ ಪಾಟೀಲ್ ರವರು ನೋಡಲಾಗಿ ಬಾಗಿಲಿನ ಬೀಗವನ್ನು ಮುರಿದಿರುವುದು ಕಂಡು ಬಂದಿದ್ದು, ಅಡುಗೆ ಮನೆಗೆ ಹೋಗಿ ನೋಡಲಾಗಿ ಪಾತ್ರೆಗಳು ಚೆಲ್ಲಾಪಿಲ್ಲಿಯಾಗಿದ್ದು ಡಬ್ಬಗಳಲ್ಲಿದ್ದ 22,00,000 ಲಕ್ಷ ಹಣ ಮತ್ತು ಸುಮಾರು 30,000 ಮೌಲ್ಯದ ಅರ್ಧ ಕೆಜಿ ಬೆಳ್ಳಿಯು ಕಳವು ಆಗಿದ್ದು ಕಂಡುಬಂದಿದೆ. ಕಳವು ಸಂಬಂಧ ಸಾಂಗ್ಲಿಯ ಅತುಲ್ ಬಾಗ್ನೆ ಎಂಬುವರ ವಿರುದ್ಧ ಸುನಂದಾ ದೂರು ನೀಡಿದ್ದರು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ  ನಿಶಾ ಜೇಮ್ಸ್ ರವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕುಮಾರಚಂದ್ರ ಮತ್ತು ಉಡುಪಿ ಉಪವಿಭಾಗದ ಡಿವೈಎಸ್‌ಪಿ ಶ್ರೀ ಟಿ.ಆರ್.ಜೈಶಂಕರ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ಸಿಬ್ಬಂದಿಯವರು, ಬೈಂದೂರು ಪೊಲೀಸ್ ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಿಯವರೊಂದಿಗೆ ಪ್ರಕರಣದ ಒಂದನೇ ಆರೋಪಿ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ವಾಸಿ ಅತುಲ್ ಮಹಾದೇವ್ ಬಾಗ್ನೆ (24 ವರ್ಷ) ಎಂಬಾತನನ್ನು ಗೋವಾ ರಾಜ್ಯದ ಮಡಗಾಂವ್ ರೈಲ್ವೇ ನಿಲ್ಡಾಣದಲ್ಲಿ ಆರ್.ಪಿ.ಎಫ್. ಇನ್ಸ್ಪೆಕ್ಟರ್ ಶ್ರೀ ರಣೀತ್ ಮರಾಂಡಿ ಮತ್ತು ಕೊಂಕಣ ರೈಲ್ವೇ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಶೈಲೇಶ್ ನಾರ್ವೇಕರ್ವರ ಸಹಾಯದಿಂದ ಅದೇ ದಿನ ರಾತ್ರಿ ಬಂಧಿಸಿದ್ದು, 2ನೇ ಆರೋಪಿ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ವಾಸಿ ಸಂದೀಪ್ ಚಂದ್ರಕಾಂತ್ ಶಿಂಧೆ (25 ವರ್ಷ) ಎಂಬವನನ್ನು   ಬೈಂದೂರು ರೈಲ್ವೇ ನಿಲ್ಡಾಣದಲ್ಲಿ ಬಂಧಿಸಿ, ಬಂಧಿತರಿಂದ ರೂಪಾಯಿ 21,84,500/- ನಗದು ಹಾಗೂ ಅರ್ಧ ಕೆ.ಜಿ. ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ನ್ಯಾಯಾಲಯಕ್ಕೆ ದಿನಾಂಕ ಹಾಜರುಪಡಿಸಿದ್ದು,  ನ್ಯಾಯಾಲಯವು ಆರೋಪಿಗಳನ್ನು 3 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಬಂಧಿತರಲ್ಲಿ ಒಂದನೇ ಆರೋಪಿಯಾದ ಅತುಲ್ ಮಹಾದೇವ್ ಬಾಗ್ನೆ ಎಂಬಾತನು ಸುಮಾರು 4-5 ತಿಂಗಳ ಹಿಂದೆ 2 ತಿಂಗಳುಗಳ ಕಾಲ ಪಿರ್ಯಾದುದಾರರ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ನಂತರ ಆತನ ಅಪ್ರಮಾಣಿಕತನಕ್ಕೆ ಕೆಲಸದಿಂದ ಬಿಡುಗಡೆಗೊಳಿಸಲಾಗಿತ್ತು. ಆರೋಪಿತರಿಬ್ಬರು ಸಾಂಗ್ಲಿಯಲ್ಲಿ ಸ್ನೇಹಿತರಾಗಿದ್ದು, ಸಾಂಗ್ಲಿಯಲ್ಲಿಯೇ ಈ ಬಗ್ಗೆ ಯೋಜನೆ ನಡೆಸಿ, 2 ದಿನ ಮುಂಚೆಯೇ ಉಡುಪಿಗೆ ಆಗಮಿಸಿ, ಲಾಡ್ಜ್ ನಲ್ಲಿ ರೂಂ ಮಾಡಿ, ಸಂದರ್ಭ ನೋಡಿ ಕೃತ್ಯ ಎಸಗಿದ್ದಾಗಿದೆ.

ಪ್ರಕರಣವು ದಾಖಲಾಗಿ 24 ಘಂಟೆಯ ಒಳಗೆ ಭೇಧಿಸಿದ್ದಕ್ಕಾಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರು ಪತ್ತೆ ತಂಡಕ್ಕೆ ನಗದು ಪಾರಿತೋಷಕವನ್ನು ನೀಡಿ ಗೌರವಿಸಿರುತ್ತಾರೆ.


Spread the love

Exit mobile version