Home Mangalorean News Kannada News ಒಳ್ಳೆಯವರಾಗಿ ಮತ್ತು ಒಳ್ಳೆಯ ಕೆಲಸವನ್ನೇ ಮಾಡಿ : ಸುಮಿತ್ರಾ ಮಹಾಜನ್

ಒಳ್ಳೆಯವರಾಗಿ ಮತ್ತು ಒಳ್ಳೆಯ ಕೆಲಸವನ್ನೇ ಮಾಡಿ : ಸುಮಿತ್ರಾ ಮಹಾಜನ್

Spread the love

ಒಳ್ಳೆಯವರಾಗಿ ಮತ್ತು ಒಳ್ಳೆಯ ಕೆಲಸವನ್ನೇ ಮಾಡಿ : ಸುಮಿತ್ರಾ ಮಹಾಜನ್

ಉಜಿರೆ: ಒಳ್ಳೆಯವರಾಗಿ ಮತ್ತು ಒಳ್ಳೆಯ ಕೆಲಸವನ್ನೇ ಮಾಡಿ   ಇದೇ ಜೀವನ ಸಿದ್ಧಾಂತವಾಗಬೇಕು ಎಂದು ನಿಕಟಪೂರ್ವ ಲೋಕಸಭಾ ಅಧ್ಯಕ್ಷರಾದ ಸುಮಿತ್ರಾ ಮಹಾಜನ್ ಹೇಳಿದರು.

ಅವರು ಸೋಮವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸರ್ವಧರ್ಮ ಸಮ್ಮೇಳನದ 87ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ಒಳ್ಳೆಯ ವರ್ತನೆಯನ್ನು ಹೊಂದಿದಾಗ ಮಾತ್ರ ಇತರರೂ ಒಳ್ಳೆಯ ವ್ಯಕ್ತಿಗಳಾಗಿ ರೂಪಿಗೊಳ್ಳಲು ನಾವು ಆದರ್ಶ ವ್ಯಕ್ತಿಗಳಾಗಿ ನಮ್ಮ ವರ್ತನೆಯಿಂದ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ. ಧರ್ಮ ಮತ್ತು ಕರ್ತವ್ಯದಲ್ಲಿ ನಿವೃತ್ತಿ ಎಂಬುದು ಇಲ್ಲ. ಸತ್ಯ, ಪ್ರಾಮಾಣಿಕತೆ ಮತ್ತು ಸದಾಚಾರದಿಂದ ಮಾನವನೇ ಮಾಧವನಾಗಬಲ್ಲ ಎಂದು ಅವರು ಹೇಳಿದರು.

ಭಾರತೀಯರ ನಂಬಿಕೆ, ನಡವಳಿಕೆ, ಜೀವನ ಸಿದ್ಧಾಂತ, ನೈತಿಕತೆ ಹಾಗೂ ಜೀವನ ಮೌಲ್ಯಗಳು ವಿಶಿಷ್ಟವಾಗಿವೆ. ದೇಶದ ಹಿತ ಮತ್ತು ಪ್ರಗತಿಗಾಗಿ ಎಲ್ಲರೂ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಧರ್ಮ ಮತ್ತು ನೈತಿಕ ಹಿನ್ನೆಲೆಯಲ್ಲಿ ಭೌತಿಕ ಸಂಪತ್ತಿನ ಸಂಗ್ರಹ ಮಾಡಬೇಕು. ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಭಾವನೆಯಿಂದ ಸರಳ ಜೀವನ ನಡೆಸಬೇಕು. ಎಲ್ಲಾ ಕ್ಷೇತ್ರಗಳಲ್ಲಿ ನಿಷ್ಠೆ ಮತ್ತು ನೈತಿಕತೆ ಇದ್ದಾಗ ಸ್ವ-ಪರ ಹಿತ ಸಾಧನೆಯೊಂದಿಗೆ ದೇಶದ ಪ್ರಗತಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ ಇಸ್ಕಾನ್‍ನ ಹಿರಿಯ ವಿದ್ವಾಂಸ ಗೌರ್ ಗೋಪಾಲದಾಸ್ ಮಾತನಾಡಿ, ಭಾರತದ ಆಧ್ಯಾತ್ಮ ಮತ್ತು ಧಾರ್ಮಿಕ ಸಿದ್ಧಾಂತ ನಮಗೆ ಬದುಕುವ ಕಲೆಯನ್ನು ಕಲಿಸುತ್ತದೆ. ಭಾರತದ ಧರ್ಮ, ಸಂಸ್ಕøತಿ, ಆಚಾರ-ವಿಚಾರದ ಅನುಷ್ಠಾನದಿಂದ ಜೀವನ ಪಾವನವಾಗುತ್ತದೆ. ಸುಖ, ಶಾಂತಿ, ನೆಮ್ಮದಿ ಮತ್ತು ಸಂತೋಷ ಸಿಗುತ್ತದೆ. ವಿದೇಶಿಯರು ಕೂಡಾ ಭಾರತೀಯ ಧರ್ಮ, ಜೀವನ ಶೈಲಿ, ಕಲೆ, ಸಂಸ್ಕøತಿ ಮತ್ತು ಆಧ್ಯಾತ್ಮದಿಂದ ಆಕರ್ಷಿತರಾಗಿ ಶಾಂತಿ-ನೆಮ್ಮದಿ ಪಡೆಯಲು ಭಾರತಕ್ಕೆ ಬರುತ್ತಾರೆ ಎಂದು ಅವರು ಹೇಳಿದರು.

ವಿಮಾನಯಾನದಂತೆ ಹುಟ್ಟು ಮತ್ತು ಸಾವು ನಮ್ಮ ಅಧೀನದಲ್ಲಿ ಇಲ್ಲ. ಆದುದರಿಂದ ಬದುಕಿನಲ್ಲಿ ನಮಗೆ ಸಿಕ್ಕಿದ ಅವಕಾಶದ ಸದುಪಯೋಗ ಪಡೆದು, ಪ್ರೀತಿ-ವಿಶ್ವಾಸದಿಂದ ತ್ಯಾಗ ಮತ್ತು ಸೇವಾ ಮನೋಭಾವದಿಂದ ಉತ್ತಮ ಸಂವಹನ ಕಲೆಯೊಂದಿಗೆ ಎಲ್ಲರೊಂದಿಗೂ ಮುಕ್ತವಾಗಿ ಬೆರೆತು ಸೌಹಾರ್ದಯುತ ಜೀವನ ನಡೆಸಬೇಕು. “ಐಸ್ ಕ್ರೀಂ” ನಂತೆ ಬದುಕಿನಲ್ಲಿ ಕರಗಿ ಹೋಗದೆ ಮೇಣದ ಬತ್ತಿಯಂತೆ ತಾನೂ ಕರಗಿ ಇತರರ ಬದುಕಿಗೂ ಬೆಳಕನ್ನು ನೀಡುವ ದೀಪಗಳಾಗಬೇಕು. ದ್ವೀಪಗಳಾಗಬಾರದು ಎಂದು ಅವರು ಸಲಹೆ ನೀಡಿದರು.

ಬದುಕು ಎಂಬುದೇ ಸಂಘರ್ಷವಾಗಿದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ಅವರು ಸಲಹೆ ನೀಡಿದರು. ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಆದುದರಿಂದ ದೈಹಿಕ ಆರೋಗ್ಯಕ್ಕೆ ಗಮನ ಕೊಟ್ಟಂತೆ ಮಾನಸಿಕ ಆರೋಗ್ಯಕ್ಕೂ ಗಮನ ಕೊಡಬೇಕು ಎಂದು ಅವರು ಕಿವಿ ಮಾತು ಹೇಳಿದರು.

ಜೀವನ ಮತ್ತು ಧರ್ಮದ ಬಗ್ಯೆ ಮೈಸೂರಿನ ಫೋಕಸ್ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಡಿ.ಟಿ. ರಾಮಾನುಜಮ್ ಮಾತನಾಡಿ, ಜೀವನದಲ್ಲಿ ನೈತಿಕತೆ ಮುಖ್ಯವಾಗಿದೆ. ಧರ್ಮದ ಪಾಲನೆಯೊಂದಿಗೆ ಬದುಕಿನ ನೈಜತೆಯನ್ನು ತಿಳಿದುಕೊಳ್ಳಬೇಕು. ಮಾನವೀಯ ಮೌಲ್ಯಗಳೊಂದಿಗೆ ಆಶಾವಾದಿಗಳಾಗಿ ಉತ್ಸಾಹದಿಂದ ಸಾರ್ಥಕ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.

“ರಾಜಕೀಯ ಮತ್ತು ಭಾರತೀಯ” ದ ಬಗ್ಯೆ ಮಂಗಳೂರಿನ ಕದ್ರಿ ನವನೀತ ಶೆಟ್ಟಿ ಮಾತನಾಡಿ, ರಾಜಕೀಯದಲ್ಲಿ ಪ್ರಾಮಾಣಿಕತೆ ಮತ್ತು ನೈತಿಕತೆ ಕಾಪಾಡಬೇಕು ಎಂದು ಸಲಹೆ ನೀಡಿದರು.

ಮಹಾತ್ಮಾ ಗಾಂಧೀಜಿ ಬಗ್ಯೆ ಮಾತನಾಡಿದ ಬೊಳುವಾರ್ ಮಹಮ್ಮದ್ ಕುಂಞ, ಸತ್ಯ ಮತ್ತು ಅಹಿಂಸೆಯ ಪಾಲನೆಯೊಂದಿಗೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಗಾಂಧೀಜಿಯವರ ಜೀವನ ಸಿದ್ಧಾಂತ ಸಾರ್ವಕಾಲಿಕ ಮೌಲ್ಯ ಹೊಂದಿದೆ. ಅವರ ಆದರ್ಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅನುಷ್ಠಾನಗೊಳಿಸಬೇಕು. ಸರಳ ಜೀವನ ಮತ್ತು ಉನ್ನತ ಚಿಂತನೆ ನಮ್ಮ ಬದುಕಿನ ಧ್ಯೇಯವಾಗಿರಬೇಕು ಎಂದು ಅವರು ಸಲಹೆ ನೀಡಿದರು.

ಸರ್ವಧರ್ಮಗಳ ಮೂಲ ಉದ್ದೇಶ ಲೋಕ ಕಲ್ಯಾಣ: ಡಿ. ವೀರೇಂದ್ರ ಹೆಗ್ಗಡೆ
ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತ ಭಾಷಣ ಮಾಡಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಲೋಕ ಕಲ್ಯಾಣವೇ ಸರ್ವಧರ್ಮಗಳ ಮೂಲ ಉದ್ದೇಶವಾಗಿದೆ. ಸಮಕಾಲೀನ ಸಮಾಜದ ಆಗು ಹೋಗುಗಳಿಗೆ ಲಯಬದ್ಧವಾಗಿ ಸ್ಪಂದಿಸಿ ಧಾರ್ಮಿಕ ವಿಚಾರಗಳ ವಿಮರ್ಶೆಗಳೊಂದಿಗೆ ವಿವೇಕ, ಕ್ಷಮೆ, ಸಹಾನುಭೂತಿ, ಶ್ರದ್ಧೆ, ಪ್ರೀತಿ-ವಿಶ್ವಾಸ ಹಾಗೂ ಸತ್ಯವನ್ನೊಳಗೊಂಡ ನಡತೆಯ ನಾಗರಿಕತೆಯೇ ಧರ್ಮದ ಮೂಲ ಜೀವದ್ರವ್ಯವಾಗಿದೆ ಎಂದು ಅವರು ಹೇಳಿದರು.

ಜಗತ್ತಿನ ಪ್ರಾಚೀನ ಧರ್ಮಗಳಾದ ಜೈನ ಧರ್ಮ ಹಿಂದೂ ಧರ್ಮ, ಕ್ರೈಸ್ತ, ಇಸ್ಲಾಂ ಹಾಗೂ ಬೌದ್ಧ ಧರ್ಮಗಳು ಸಾಮರಸ್ಯ ಮತ್ತು ಸಮನ್ವಯ ಧೋರಣೆಯ ಮೂಲಕ ಇಡೀ ಪ್ರಪಂಚಕ್ಕೆ ಅಮೂಲ್ಯ ಸಂದೇಶವನ್ನು ನೀಡಿವೆ. ಪ್ರತಿಯೊಂದು ಕ್ರಿಯೆ, ವ್ಯವಹಾರ, ಆಚರಣೆಯೂ ಸತ್ಯ, ನಿಷ್ಠೆಗಳಿಂದ ಇದ್ದರೆ ಅದು ಧರ್ಮ. ಈ ದಾರಿ ತಪ್ಪಿದರೆ ಅದು ಅಧರ್ಮವಾಗುತ್ತದೆ. ಧರ್ಮ ಮತ್ತು ಸೇವೆಗಳು ಜೊತೆಯಾಗಿ ಸಾಗಬೇಕು. “ಬದುಕು ಮತ್ತು ಇತರರನ್ನು ಬದುಕಲು ಬಿಡಬೇಕು” ಎಂಬುದು ಜೈನಧರ್ಮದ ಸಾರವಾಗಿದೆ.

ಜಗತ್ತನ್ನು ಮರೆತು ಆತ್ಮೋದ್ಧಾರವನ್ನು ಮಾಡಲಾರೆವು. ನಮ್ಮನ್ನು ಮರೆತು ಜಗದ ಉದ್ಧಾರ ಮಾಡಲಾರೆವು. ನಾವೇ ಸ್ವತಃ ಏಳಬೇಕು, ಇತರರನ್ನು ಜಾಗೃತರನ್ನಾಗಿ ಮಾಡಬೇಕು. ಅದುವೇ ಧರ್ಮದ ತಿರುಳು.

ರಾಜಕೀಯದಲ್ಲಿ ಧರ್ಮ ಇರಲೇ ಬೇಕು ಆಗ ಮಾತ್ರ ಎಲ್ಲರ ಪ್ರೀತಿ-ವಿಶ್ವಾಸ ಗಳಿಸಬಹುದು ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.

ಎ.ಪಿ.ಎಂ.ಸಿ. ಅಧ್ಯಕ್ಷ ಕೇಶವ ಗೌಡ ಬೆಳಾಲು ಧನ್ಯವಾದವಿತ್ತರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಕಂಚಿಮಾರುಕಟ್ಟೆ ಉತ್ಸವ ನಡೆಯಿತು.


Spread the love

Exit mobile version