ಕಂದಾಯ ಸಚಿವ ಆರ್ ಅಶೋಕ್ ರಿಂದ ಬ್ರಹ್ಮಾವರ ಮಿನಿ ವಿಧಾನಸೌಧದ ಶಿಲಾನ್ಯಾಸ
ಉಡುಪಿ: ಕರ್ನಾಟಕ ಸರ್ಕಾರ ಕಂದಾಯ ಇಲಾಖೆ ಹಾಗೂ ಉಡುಪಿ ಜಿಲ್ಲಾಡಳಿದ ಸಹಭಾಗಿತ್ವದಲ್ಲಿ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಎನ್.ಎಚ್ 66 ಬಳಿ ಮಿನಿ ವಿಧಾನ ಸೌಧದ ಶಿಲಾನ್ಯಾಸ ಕಾರ್ಯಕ್ರಮವು ಬುಧವಾರ ಕರ್ನಾಟಕ ಸರ್ಕಾರದ ಕಂದಾಯ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ನಡೆಯಿತು.
ಬ್ರಹ್ಮಾವರ ತಾಲೂಕು, ವಾರಂಬಳ್ಳಿ ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಮಿನಿ ವಿಧಾನಸೌಧವು 10 ಕೋಟಿ ವೆಚ್ಚದಲ್ಲಿ 2.8 ಎಕರೆ ಜಾಗದಲ್ಲಿ ನಿರ್ಮಾಣಗೊಳ್ಳಿದೆ. ನೆಲಮಹಡಿ, ಮೊದಲ ಮಹಡಿ, ಟೆರೆಸ್ ಸೇರಿದಂತೆ ಒಟ್ಟು ಕಟ್ಟಡದ ವಿಸ್ತೀರ್ಣ 2657.00 ಚದರ ಮೀಟರ್ ಇರಲಿದೆ. ನೆಲಮಹಡಿಯಲ್ಲಿ ತಹಶೀಲ್ದಾರರ ಕಚೇರಿ, 20 ಜನ ಸಾಮಥ್ರ್ಯದ ಕೋರ್ಟ್ ಹಾಲ್, ನಮ್ಮ ಪಡಸಾಲೆ/ಭೂಮಿ ಶಾಖೆ/ಸಕಾಲ, ಚುನಾವಣೆ ಸ್ಟ್ರಾಂಗ್‍ರೂಮ್, ಉಪ ಖಜಾನೆ ಕಚೇರಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಇ.ವಿ.ಎಂ. ದಾಸ್ತಾನು ಕೊಠಡಿ, ರೆಕಾರ್ಡ್ ಕೊಠಡಿಗಳು, ಶೌಚಾಲಯಗಳನ್ನು ಹೊಂದಿದೆ. ಮೊದಲನೇ ಮಹಡಿಯಲ್ಲಿ ಶಾಸಕರ ಕಚೇರಿ, ಉಪ ನೋಂದಾವಣಾಧಿಕಾರಿಗಳ ಕಚೇರಿ, ಚುನಾವಣೆ ಶಾಖೆ, 130 ಜನ ಸಾಮಥ್ರ್ಯದ ಸಭಾಂಗಣ, ಎಡಿಎಲ್‍ಆರ್/ ಸರ್ವೇಯರ್ಸ್ ಶಾಖೆ, ಸಹಾಯಕ ಆಯುಕ್ತರ ಕಚೇರಿ(ಎಸಿ ಟ್ರಿಬ್ಯೂನಲ್), ರೆಕಾರ್ಡ್ ಕೊಠಡಿಗಳು, ಶೌಚಾಲಯಗಳನ್ನು ಒಳಗೊಂಡಿದೆ.
ನೂತನ ಮಿನಿ ವಿದಾನ ಸೌಧ ಕಟ್ಟಡ ಸುಸಜ್ಜಿತ ಸೌಲಭ್ಯಗಳನ್ನು ಒಳಗೊಂಡಿದ್ದು, ಒಳಾಂಗಣ ಪಿಠೋಪಕರಣಗಳಿಗಾಗಿ 60 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ನೀರಿನ ವ್ಯವಸ್ಥೆಗಾಗಿ 1 ಕೊಳವೆ ಬಾವಿ, 15 ಸಾವಿರ ಲೀಟರ್ ಸಾಮಥ್ರ್ಯದ ಸಂಪ್ ಟ್ಯಾಂಕ್, 10 ಸಾವಿರ ಲೀಟರ್ ಸಾಮಥ್ರ್ಯದ ಒ.ಹೆಚ್.ಟಿ, 100 ಕೆವಿಎ ಸಾಮಥ್ರ್ಯದ ಟ್ರಾನ್ಸ್ ಫಾರ್ಮರ್, 62.5 ಕೆವಿಎ ಸಾಮಥ್ರ್ಯದ ಡೀಸೆಲ್ ಜನರೇಟರ್, 1 (8 ಪ್ಯಾಸೆಂಜರ್) ಲಿಫ್ಟ್ ಸಹಿತ ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡಿದೆ.
ಕಾರ್ಯಕ್ರಮದಲ್ಲಿ ವಸತಿ, ರೇಷ್ಮೆ ಮತ್ತು ತೋಟಗಾರಿಕಾ ಸಚಿವ ವಿ. ಸೋಮಣ್ಣ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ರಘಪತಿ ಭಟ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಜಿಲ್ಲಾಧಿಕಾರಿ ಜಿ ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ- ಉಪವಿಭಾಗ ಸಹಾಯಕ ಆಯುಕ್ತ ಕೆ. ರಾಜು, ಬ್ರಹ್ಮಾವರ ತಾಲೂಕು ತಹಶೀಲ್ದಾರ ಕಿರಣ ಜಿ ಗೌರಯ್ಯ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಭುಜಂಗ ಶೆಟ್ಟಿ, ರಾಜ್ಯ ಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆಯ ಪ್ರತಿನಿಧಿಗಳು ಮತ್ತಿತರರು ಹಾಜರಿದ್ದರು.