ಕಂಬಳ-ಕಾವೇರಿ ಅನ್ಯಾಯ ಪ್ರತಿಭಟಿಸಿ ದೆಹಲಿ ಕರ್ನಾಟಕ ಸಂಘದ ಪ್ರತಿಭಟನೆ
ನವದೆಹಲಿ: ರಾಜ್ಯದ ಮೇಲೆ ಆಗುವ ಅನ್ಯಾಯವನ್ನು ಖಂಡಿಸಲು ರಾಷ್ಟ್ರ ರಾಜಧಾನಿಯಲ್ಲಿ ಕನ್ನಡಿಗರ ಬೃಹತ್ ಪ್ರಮಾಣದಲ್ಲಿ ಒಟ್ಟು ಸೇರಿ ತಮ್ಮ ಧ್ವನಿಯನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಬೇಕು ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಹೇಳಿದ್ದಾರೆ.
ರಾಜ್ಯ ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ಅವಕಾಶ ನೀಡಬೇಕು, ಕಾವೇರಿಯಲ್ಲಿ ರಾಜ್ಯಕ್ಕೆ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ದೆಹಲಿ ಕರ್ನಾಟಕ ಸಂಘದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಇಂದು ಕಂಬಳವನ್ನು ನಿಷೇಧಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇನ್ನಿತರ ಗ್ರಾಮೀಣ ಕ್ರೀಡೆಗಳ ಮೇಲೆಯೂ ನಿಷೇಧದ ತೂಗುಗತ್ತಿ ತೂಗಬಹುದು. ಆದ್ದರಿಂದ ಕನ್ನಡಿಗರು ಈಗಲೇ ಎಚ್ಚೆತ್ತು ಕಂಬಳದ ಮೇಲಿನ ನಿಷೇಧವನ್ನು ರದ್ದು ಪಡಿಸಲು ಶ್ರಮಿಸಬೇಕು ಎಂದು ವಸಂತ ಶೆಟ್ಟಿ ಬೆಳ್ಳಾರೆ ಆಗ್ರಹಿಸಿದರು.
ಜಲ್ಲಿಕಟ್ಟಿನ ಮೇಲಿದ್ದ ನಿಷೇಧವನ್ನು ತೆರವುಗೊಳಿಸಲು ದೆಹಲಿಯಲ್ಲಿದ್ದ ತಮಿಳರು ಕೂಡ ಹೋರಾಡಿದ್ದಾರೆ. ರಾಜ್ಯದ ನೆಲ, ಜಲ, ಭಾಷೆ ಮತ್ತು ಸಾಂಸ್ಕøತಿಕ ಚಹರೆಗೆ ಅನ್ಯಾಯವಾದಾಗ ಇದೇ ಮಾದರಿಯಲಿ ್ಲದೆಹಲಿ ಕನ್ನಡಿಗರು ಒಗ್ಗಟ್ದಾಗಿ ಹೋರಾಡಬೇಕು ಎಂದು ಕರೆ ಇತ್ತರು.
ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು, ಸಾಹಿತಿಗಳು, ಕಲಾವಿದರು ಮತ್ತು ಕನ್ನಡ ಪರ ಸಂಘಟನೆಗಳು ಪಕ್ಷಬೇಧ ಮರೆತು ರಾಜ್ಯದ ನೆಲ, ಜಲ ಮತ್ತು ಸಂಸ್ಕøತಿಯ ವಿಷಯದಲ್ಲಿ ಒಂದಾಗಬೇಕು. ಒಂದಾಗಿ ಪ್ರತಿಭಟಿಸಿದಾಗ ಸರ್ಕಾರಗಳು ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುತ್ತವೆ. ಇದಕ್ಕೆ ಜಲ್ಲಿ ಕಟ್ಟುವಿಗಾಗಿನ ತಮಿಳರ ಹೋರಾಟ ಒಂದು ನಿದರ್ಶನವಾಗಿದೆ ಎಂದರು.
ಇತ್ತೀಚೆಗೆ ಕಾವೇರಿಗಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಉಪವಾಸ ಸತ್ಯಾಗ್ರಹ ಕೈಗೊಂಡಾಗ ಕರ್ನಾಟಕ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟು ತೋರಿಸಿದ್ದು, ಸುಪ್ರೀಂಕೋರ್ಟ್‍ನ ಆದೇಶವಿದ್ದರೂ ಕಾವೇರಿ ನಿರ್ವಹಣಾ ಮಂಡಳಿ ರಚನೆ ಆಗಬಾರದು ಎಂದು ಖುದ್ದು ಕೇಂದ್ರ ಸರ್ಕಾರವೇ ಸುಪ್ರೀಂಕೋರ್ಟ್‍ಗೆ ತಿಳಿಸುವಂತೆ ಆಯಿತು ಎಂದು ಬೆಳ್ಳಾರೆ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ನಾವು ಯಾವುದೆ ಸರ್ಕಾರದ ಪರವಾಗಿ ಅಥವಾ ವಿರುದ್ಧವಾಗಿ ಹೋರಾಟ ಮಾಡುತ್ತಿಲ್ಲ. ಸರ್ಕಾರಗಳಲ್ಲಿರುವ ನ್ಯೂನತೆಯನ್ನು ಸರಿಪಡಿಸಿ, ನಮ್ಮ ರಾಜ್ಯದ ಹಿತಾಸಕ್ತಿ ಅಡಕವಾಗಿರುವ ವಿಷಯಗಳಲ್ಲಿ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂಬ ಒತ್ತಡ ಸೃಷ್ಟಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಕನ್ನಡಿಗರಿಗೆ ಅನ್ಯಾಯವಾದಾಗ ದೆಹಲಿ ಕರ್ನಾಟಕ ಸಂಘವೇ ದೆಹಲಿ ಮಟ್ಟದಲ್ಲಿ ಮುಂಚೂಣಿಯಲ್ಲಿ ನಿಂತು ಪ್ರತಿಭಟನೆ ನಡೆಸುವ ಭರವಸೆಯನ್ನು ವಸಂತ ಶೆಟ್ಟಿ ಬೆಳ್ಳಾರೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಆಶಾಲತಾ ಎಂ, ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾಗರಾಜ, ಪದಾಧಿಕಾರಿಗಳಾದ ಟಿ. ಪಿ.ಬೆಳ್ಳಿಯಪ್ಪ, ಜಮುನಾ ಸಿ.ಮಠದ, ಕೆಎಸ್‍ಜಿ ಶೆಟ್ಟಿ, ಸಖಾರಾಮ ಉಪ್ಪೂರು, ಪೂಜಾಪಿ.ರಾವ್, ಡಾ.ಎಂ.ಎಸ್. ಶಶಿಕುಮಾರ್, ಬಾಬುರಾಜ್ ಪೂಜಾರಿ, ಸುಮಿತಾ ಮುರಗೋಡ ಸೇರಿದಂತೆ ದೆಹಲಿಯ ನೂರಾರು ಕನ್ನಡಿಗರು ಉಪಸ್ಥಿತರಿದ್ದರು.