ಕಟಪಾಡಿ ಕೆಸರು ಗದ್ದೆಯಲ್ಲಿ ಆಡಿ ಕುಣಿದು ಸಂಭ್ರಮಿಸಿದ ಐಸಿವೈಎಮ್ ಯುವಜನರು
- 29 ಚರ್ಚುಗಳ 750 ಕ್ಕೂ ಅಧಿಕ ಕ್ರೈಸ್ತ ಯುವಜನರು ಭಾಗಿ
- ಕೊಳಲಗಿರಿಗೆ ಸಮಗ್ರ ಪ್ರಶಸ್ತಿ; ಶಂಕರಪುರ, ಅತ್ತೂರು ರನ್ನರ್ಸ್
- ಐಸಿವೈಎಮ್ ಕಟಪಾಡಿ ವತಿಯಿಂದ ಯುವ ಒಗ್ಗಟ್ಟು ಕ್ರೀಡಾಕೂಟ ಆಯೋಜನೆ
ಚಿತ್ರಗಳು: ಫ್ಲೋಯ್ಡ್ ಡಿ’ಸೋಜಾ, ಶಿರ್ವ
ಉಡುಪಿ: ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಭಾರತೀಯ ಕೆಥೊಲಿಕ್ ಯುವ ಸಂಚಾಲನ ಸಂತ ವಿನ್ಸೆಂಟ್ ಡಿ’ ಪಾವ್ಲ್ ದೇವಾಲಯ ಕಟಪಾಡಿ ಇವರು ಉಡುಪಿ ವಲಯ ಐಸಿವೈಎಮ್ ಸಹಕಾರದೊಂದಿಗೆ ಕಟಪಾಡಿ ಚೊಕ್ಕಾಡಿ ಬಳಿಯ ಗದ್ದೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಯುವಜನರಿಗಾಗಿ ಆಯೋಜಿಸಿದ ಗದ್ದೆಯಲ್ಲಿ ಯುವ ಒಗ್ಗಟ್ಟು ಕ್ರೀಡಾಕೂಟ ಯುವಜನರಿಗೆ ಮನೋರಂಜನೆ ನೀಡುವುದರೊಂದಿಗೆ ರೋಮಾಂಚಕ ಅನುಭವ ನೀಡಲು ಕಾರಣವಾಯಿತು.
ಭಾನುವಾರ ಬೆಳಿಗ್ಗೆ ಕಟಪಾಡಿ ಗ್ರಾಮಪಂಚಾಯತಿನ ಅಧ್ಯಕ್ಷೆ ಜೂಲಿಯೆಟ್ ವೀರಾ ಡಿ’ಸೋಜಾ ಅವರು ಕಟಪಾಡಿ ಚರ್ಚಿನಿಂದ ಚೊಕ್ಕಾಡಿ ಗದ್ದೆಯ ತನಕ ಆಯೋಜಿಸಿದ ವರ್ಣರಂಜಿತ ಮೆರವಣಿಗೆಗೆ ಚಾಲನೆ ನೀಡಿದರೆ, ಸ್ಪರ್ದೆಗಳಿಗೆ ಅಧಿಕೃತ ಉದ್ಘಾಟನೆಯನ್ನು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಶ್ರೇಷ್ಠಗುರುಗಳಾದ ವಂ ಬ್ಯಾಪ್ಟಿಸ್ ಮಿನೇಜಸ್ ಅವರ ಅಧ್ಯಕ್ಷತೆಯಲ್ಲಿ ಕಾಪು ಶಾಸಕ ವಿನಯಕುಮಾರ್ ಸೊರಕೆ ಚಾಲನೆ ನೀಡಿದರು. ಈ ವೇಳೆ ಅದಾನಿ ಯುಪಿಸಿಎಲ್ ಇದರ ಜಂಟಿ ನಿರ್ದೇಶಕರಾದ ಕಿಶೋರ್ ಆಳ್ವಾ, ಕಟಪಾಡಿ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಲೆಸ್ಲಿ ಸುವಾರಿಸ್, ಕಾರ್ಯದರ್ಶಿ ಕ್ಯಾಥರಿನ್ ರೊಡ್ರಿಗಸ್, ಮಾಜಿ ಜಿಪಂ ಸದಸ್ಯೆ ಐಡಾಗಿಬ್ಬಾ ಡಿಸೋಜಾ, ವಂ. ಲಾರೆನ್ಸ್ ಕುಟಿನ್ಹಾ, ವಂ. ಎಡ್ವಿನ್ ಡಿಸೋಜಾ, ಶರ್ಲಿನ್ ಡೆಸಾ, ವಂ. ಟೆರೆನ್ಸ್, ಸಿ. ಟೆರ್ಸಿಟಾ, ಆಗ್ನೆಲ್ ಡಿ’ಸಿಲ್ಲಾ ಹಾಗೂ ಇತರರು ಅವರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ವಿನಯ್ ಕುಮಾರ್ ಸೊರಕೆ ಇಂದಿನ ಆಧುನಿಕ ಯುವಜನತೆಗೆ ಸಾಂಪ್ರದಾಯಿಕ ಆಟಗಳ ಪರಿಚಯದೊಂದಿಗೆ ಯುವಜನತೆ ಕೃಷಿಯತ್ತ ಆಕರ್ಷಿಸಲು ಇಂತಹ ಆಟಗಳು ಪೂರಕವಾಗಿವೆ. ಯುವಜನತೆ ನಮ್ಮ ದೇಶದ ಸಂಪತ್ತಾಗಿದ್ದು ಅವರಿಗೆ ಸದಾ ಬೆಂಬಲ ನೀಡುವ ಕೆಲಸ ನಡೆಯಬೇಕು. ಕೃಷಿಯಿಂದ ದೂರ ಹೋಗುತ್ತಿರುವ ಯುವ ಜನತೆಗೆ ಇಂತಹ ಆಟಗಳ ಮೂಲಕ ಸಂಸ್ಕøತಿಯ ಪರಿಚಯ ನೀಡುವುದರೊಂದಗೆ ಒಗ್ಗಟ್ಟು ಪ್ರದರ್ಶಿಸಲು ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ಉದ್ಘಾಟನೆಯ ಬಳಿಕ ಗದ್ದೆಯ ಕೆಸರಿನಲ್ಲಿ ಯುವಜನರು ಹುಚ್ಚೆದ ಕುಣಿದ ಯುವಜನರು ವಾಲಿಬಾಲ್, ತ್ರೋಬಾಲ್, ಓಟ, ಹೆಗಲ ಮೇಲೆ ಇನ್ನೊಬ್ಬರನ್ನು ಹೊತ್ತೊಯ್ಯುವುದು, ಪಿರಮಿಡ್, ರಿಲೆ, ಮೂರು ಕಾಲಿನ ಓಟ, ಹಗ್ಗ ಜಗ್ಗಾಟ ಕ್ರೀಡೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದರು. ಕೆಲವರು ಕೆಸರಿನಲ್ಲಿ ಬಿದ್ದು, ಎದ್ದು ಓಡಿ ಗೆಲುವು ಸಾಧಿಸಿದರೆ, ಮತ್ತೆ ಕೆಲವರು ಗೆಲುವು ಮುಖ್ಯವಲ್ಲ ಸ್ಪರ್ಧಿಸೋದು ಮುಖ್ಯ ಎನ್ನುವ ರೀತಿಯಲ್ಲಿ ಭಾಗವಹಿಸಿ ಮನರಂಜಿಸಿದರು. ಸದಾ ಕಾಲೇಜು, ಓದು, ಟ್ಯೂಷನ್ ಎಂದು ಗೊಣಗುತ್ತಲೇ ದಿನಕಳೆಯುವ ಯುವಜನರು ಕೆಸರುಗದ್ದೆಯಲ್ಲಿ ಸ್ವಚ್ಚಂದವಾಗಿ ಆಡಿದರು. ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ಸುಮಾರು 750 ಕ್ಕೂ ಅಧಿಕ ಮಂದಿ ಯುವಜನತೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ವಹಿಸಿ ಮಾತಾನಾಡಿ ಪ್ರತಿಯೊಬ್ಬರಿಗೂ ಮಣ್ಣಿನೊಂದಿಗೆ ಅವಿನಾಭಾವ ಸಂಭಂಧವನ್ನು ಹೊಂದಿರುವ ಕರಾವಳಿಗರಾದ ನಾವು ನಮಗೆ ಅಗತ್ಯವಿರುವ ಅನ್ನವನ್ನು ನಾವೇ ಕೃಷಿ ಕೆಲಸದ ಮೂಲಕ ತಯಾರಿಸಿ ಉಣ್ಣುತ್ತೆವೆ. ತುಳುನಾಡಿನ ರೈತರ ಸಂಪೂರ್ಣ ಜೀವನ ಮಣ್ಣಿನೊಂದಿಗೆ ಅಂದರೆ ಗದ್ದೆಯ ಸುತ್ತ ಇರುವುದರಿಂದ ಇದರ ಪರಿಚಯ ಇಂದಿನ ಯುವಜನತೆಗೆ ಅತೀ ಅಗತ್ಯವಾಗಿ ಆಗಬೇಕಾಗಿದೆ ಅದರೊಂದಿಗೆ ಇಂತಹ ಕಾರ್ಯಕ್ರಮಗಳು ನಮ್ಮೊಂದಿಗಿನ ಒಗ್ಗಟ್ಟು ಪ್ರದರ್ಶಿಸಲು ಕೂಡ ಸಹಕಾರಿಯಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ಹಾಗೂ ಉಡುಪಿ ವಲಯದ ಪ್ರಧಾನ ಗುರುಗಳಾದ ವಂ. ವಲೇರಿಯನ್ ಮೆಂಡೊನ್ಸಾ, ಮತ್ತು ಕರ್ನಾಟಕ ಸರಕಾರದ ಕ್ರೈಸ್ತ ಅಭಿವೃದ್ಧಿ ಸಮಿತಿಯ ಸದಸ್ಯರಾದ ಪ್ರಶಾಂತ್ ಜತ್ತನ್ನ ಮುಖ್ಯಅತಿಥಿಗಳಾಗಿ ಉಪಸ್ಥಿತಿರದ್ದರು. ಕಟಪಾಡಿ ಚರ್ಚಿನ ಧರ್ಮಗುರು ವಂ. ರೋನ್ಸನ್ ಡಿಸೋಜಾ, ಐಸಿವೈಎಮ್ ಅಧ್ಯಕ್ಷ ಲೈನಲ್ ಪಿರೇರಾ, ಸಚೇತಕರಾದ ವಿಲ್ಫ್ರೇಡ್ ಲೂವಿಸ್ ಹಾಗೂ ಇತರರು ಉಪಸ್ಥಿತರಿದ್ದರು.
ಕಲ್ಯಾನ್ಪುರ ವಲಯದ ಐಸಿವೈಎಮ್ ಕೊಳಲಗಿರಿ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಕಾರ್ಕಳ ಅತ್ತೂರು ತಂಡ ಮತ್ತು ಶಿರ್ವ ವಲಯದ ಶಂಕರಪುರ ಘಟಕಗಳು ದ್ವಿತೀಯ ಸ್ಥಾನವನ್ನು ಹಂಚಿಕೊಂಡವು.
ತಂಡ ವಿಭಾಗದ ಫಲಿತಾಂಶ: ಹಗ್ಗಜಗ್ಗಾಟ : ಕಣಜಾರು ಪ್ರಥಮ, ಅತ್ತೂರು ಕಾರ್ಕಳ ದ್ವಿತೀಯ, ರಿಲೆ: ಮೂಡುಬೆಳ್ಳೆ ಪ್ರಥಮ, ಮಣಿಪಾಲ ದ್ವೀತಿಯ, ತ್ರೋಬಾಲ್ ಕುಂತಲನಗರ ಪ್ರಥಮ, ಪೆರಂಪಳ್ಳಿ ದ್ವಿತೀಯ, ವಾಲಿಬಾಲ್ : ನಕ್ರೆ ಪ್ರಥಮ, ಗಂಗೊಳ್ಳಿ ದ್ವೀತಿಯ ಸ್ಥಾನ ಪಡೆದವು.