ಕಡಬ ಆ್ಯಸಿಡ್ ದಾಳಿ: ಸೂಕ್ತ ಕ್ರಮಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ
ಬೆಳಗಾವಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಮೂವರು ಕಾಲೇಜು ವಿದ್ಯಾರ್ಥಿನಿಯರ ಮೇಲೆ ನಡೆದ ಆ್ಯಸಿಡ್ ದಾಳಿ ಅತ್ಯಂತ ಕ್ರೂರ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳಕರ್ ಹೇಳಿದ್ದಾರೆ.
ಘಟನೆ ಕುರಿತು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದ ಸಚಿವರು, ಇದೊಂದು ಹೀನಕೃತ್ಯವಾಗಿದ್ದು, ಈಗಾಗಲೇ ದಾಳಿ ನಡೆಸಿದವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಯಾವ ಉದ್ದೇಶದಿಂದ ಮಾಡಲಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಪೊಲೀಸರು ಸಮಗ್ರವಾಗಿ ತನಿಖೆ ಮಾಡುತ್ತಿದ್ದಾರೆ. ಈ ಕುರಿತು ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಬೇರೆ ಬೇರೆ ಆಯಾಮದಲ್ಲಿ ತನಿಖೆ ಮಾಡುತ್ತಿದ್ದಾರೆ. ನಾನು ಕೂಡ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಗಾಯಾಳು ಹೆಣ್ಣುಮಕ್ಕಳು ಅಪಾಯದಿಂದ ಪಾರಾಗಲಿ ಎಂದು ಪ್ರಾರ್ಥಿಸುತ್ತೇನೆ. ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ರಾಜ್ಯ ಮಹಿಳಾ ಆಯೋಗ ತ್ವರಿತ ಕ್ರಮಕ್ಕೆ ಮುಂದಾಗಿದೆ. ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ಆಗಬೇಕು; ಇಂತಹ ಘಟನೆಗಳು ಮರುಕಳಿಸದಂತೆ ಸಾಧ್ಯವಾದಷ್ಟು ಮುನ್ನಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಕಾಲೇಜು ಆವರಣದಲ್ಲಿಯೇ ಯುವಕನೊಬ್ಬ ಆ್ಯಸಿಡ್ ಎರಚಿರುವ ಘಟನೆ ನಡೆದಿದೆ. ಈ ವೇಳೆ ವಿದ್ಯಾರ್ಥಿನಿಯ ಪಕ್ಕದಲ್ಲಿದ್ದ ಇತರ ಇಬ್ಬರು ವಿದ್ಯಾರ್ಥಿನಿಯರಿಗೂ ಆ್ಯಸಿಡ್ ತಗುಲಿ ಸಣ್ಣ ಪ್ರಮಾಣದ ಗಾಯಗಳಾಗಿವೆ. ಈಗಾಗಲೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.