ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಾರ್ಯಕ್ರಮ ರೂಪಿಸಲು ಸರಕಾರ ಚಿಂತನೆ – ಸಚಿವ ಬೊಮ್ಮಾಯಿ
ಕುಂದಾಪುರ : ರಾಜ್ಯದ ಕರಾವಳಿ ತೀರದಲ್ಲಿ ಪದೆ ಪದೆ ಕಾಡುತ್ತಿರುವ ಸಮುದ್ರ ಕೊರೆತಗಳಿಗೆ ಶಾಶ್ವತ ಪರಿಹಾರ ಕಾರ್ಯಕ್ರಮ ರೂಪಿಸಬೇಕು ಎನ್ನುವ ಚಿಂತನೆ ರಾಜ್ಯ ಸರ್ಕಾರಕ್ಕೆ ಇದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡುವ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಕುಂದಾಪುರಕ್ಕೆ ಭೇಟಿ ನೀಡಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಾಜ್ಯದ 374 ಕಿ.ಮೀ ವ್ಯಾಪ್ತಿಯ ಕಡಲು ತೀರದಲ್ಲಿ ಆಗಾಗ್ಗೆ ಕಡಲ್ಕೊರೆತಗಳು ಕಾಣಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ತುಂಡು ತುಂಡು ಕಾಮಗಾರಿಗಳನ್ನು ಮಾಡುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಶಾಶ್ವತವಾಗಿ ಪರಿಹಾರ ಕಲ್ಪಿಸಲು ಕೇಂದ್ರ ಸರ್ಕಾರದ ಜತೆಯಲ್ಲಿ ಸಮನ್ವಯತೆ ಸಾಧ್ಯಸಿಲಾಗುವುದು. ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯ ಸರ್ಕಾರದ ಸಹ ಭಾಗಿತ್ವದಲ್ಲಿ ಶಾಶ್ವತ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ. ಇದಕ್ಕೆ ಪೂರಕವಾಗಿ ಸಮಗ್ರ ವರದಿಯನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಗೌರಿ-ಗಣೇಶ ಹಬ್ಬ ಸಮೀಸುತ್ತಿರುವುದರಿಂದ ಹಬ್ಬದ ಆಚರಣೆಯ ಬಗ್ಗೆ ಶೀಘ್ರದಲ್ಲಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು. ರೈತರಿಗೆ ರಸಗೊಬ್ಬರ ಸರಬರಾಜಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಇದರಲ್ಲಿ 2 ಆಯ್ಕೆಗಳಿವೆ ಒಂದು ರಾಜ್ಯ ಮಾರ್ಕೇಟ್ ಫೇಡರೇಶನ್ಮೂಲಕ ಸೊಸೈಟಿಗಳಿಗೆ ತಲುಪಿಸಿ ರೈತರಿಗೆ ನೀಡುವುದು. ಇನ್ನೊಂದು ಕಾರ್ಯಾನೆಯಿಂದ ವಿತರಕರಿಗೆ ತಲುಪಿಸಿ ಅವರ ಮೂಲಕ ರೈತರಿಗೆ ನೀಡುವ ಬಗ್ಗೆ ಸಭೆ ನಡೆಸಿ ಸರಬರಾಜಿಗೆ ಕೊರತೆಯಾಗದಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕುಂದಾಪುರ ಸಮೀಪ ಕೋಡಿಯ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಅವರು ಸಚಿವರಿಗೆ ಕಡಲ್ಕೊರೆತ ಹಾನಿಯ ಬಗ್ಗೆ ಮನವರಿಕೆ ಮಾಡಿದರು. ಕುಂದಾಪುರದ ಕಾರ್ಯಕ್ರಮದ ಬಳಿಕ ಬೈಂದೂರು ವಿಧಾನಸಭಾ ಕ್ಷೇತ್ರದ ಕಡಲ್ಕೊರೆತ ಪ್ರದೇಶಗಳ ಹಾನಿ ಪ್ರಮಾಣದ ವೀಕ್ಷಣೆಗೆ ಸಚಿವರು ತೆರಳಿದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್.ಪಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯಿತಿ ಸಿ.ಇ.ಓ ಪ್ರೀತಿ ಗೆಹ್ಲೋಟ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಶಂಕರ್ ಅಂಕದ ಕಟ್ಟೆ, ಪುರಸಭೆಯ ಮಾಜಿ ಅಧ್ಯಕ್ಷ ಮೋಹನ್ ದಾಸ್ ಶೆಣೈ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪ ಪೈ ಇದ್ದರು.