ಕಡಲ ಕೊರೆತ: ಜಲಸಾರಿಗೆ ಮಂಡಳಿ ಸಿಇಓ ಭೇಟಿ

Spread the love

ಕಡಲ ಕೊರೆತ: ಜಲಸಾರಿಗೆ ಮಂಡಳಿ ಸಿಇಓ ಭೇಟಿ
ಮಂಗಳೂರು:  ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ತೀವ್ರವಾಗಿದ್ದು, ಸುಮಾರು ೧೩ ಸಮುದ್ರದ ಪ್ರದೇಶಗಳಲ್ಲಿ ಕಡಲ ಕೊರತೆ ಉಂಟಾಗಿರುವ ಹಿನ್ನಲೆಯಲ್ಲಿ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್ ರಾಯ್ ಪುರ ಅವರು ಗುರುವಾರ ಭೇಟಿ ನೀಡಿದರು.

ಸಮುದ್ರ ಕಡಲ ಕೊರೆತ ಬಾಧಿತ ಪ್ರದೇಶಗಳಾದ ಉಳ್ಳಾಲ ತಾಲೂಕು ಮೊಗವೀರಪಟ್ನ, ಬಟ್ಟಪ್ಪಾಡಿ ಪ್ರದೇಶದ ಸರಪಳಿ, ಉಚ್ಚಿಲ ಪ್ರದೇಶದ ಸರಪಳಿ ಹಾಗೂ ಸೀಗ್ರೌಂಡ್ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಮೊಗವೀರಪಟ್ನ ಪ್ರದೇಶದಲ್ಲಿ ಎಡಿಬಿ ಯೋಜನೆಯಡಿ ಬರ್ಮ್ ಗಳನ್ನು ನಿರ್ಮಾಣ ಮಾಡಲಾಗಿದ್ದು, ಅಬ್ಬರ ಅಲೆಗಳಿಂದ ತಡೆಗೋಡೆಯು ಕುಸಿದಿದೆ. ಹೀಗಾಗಿ ಮತ್ತೆ ಅದಷ್ಟು ಬೇಗ ಬರ್ಮ್ ಗಳ ಮಧ್ಯೆ ತಡೆಗೋಡೆಯನ್ನು ನಿರ್ಮಾಣ ಮಾಡುವಂತೆ ಸ್ಥಳೀಯರು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಉಳ್ಳಾಲ ತಾಲೂಕು ಸೀಗ್ರೌಂಡ್ ಪ್ರದೇಶದಲ್ಲಿ ಸಮುದ್ರ ಕೊರೆತ ಉಂಟಾಗುತ್ತಿದ್ದು, ಕರ್ನಾಟಕ ಮಂಡಳಿಯ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯರು ನೀಡಿರುವ ಮಾಹಿತಿಯಂತೆ ಮುಕ್ಕಚ್ಚೇರಿ ಪ್ರದೇಶದಲ್ಲಿ ಎಡಿಬಿ ಯೋಜನೆಯಡಿಯಲ್ಲಿ ಟೇಟ್ರಾ ಪೋಡ್ ಗಳು ಕಾಂಕ್ರೀಟಿನಿಂದ ಮಾಡಿರುವ ತಡೆಗೋಡೆ ಕುಸಿದಿದ್ದು, ಇದನ್ನು ಅದಷ್ಟು ಬೇಗ ಮತ್ತೆ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಮನವಿ ಮಾಡಿದರು.

ಸೋಮೇಶ್ವರ ಪುರಸಭಾ ವ್ಯಾಪ್ತಿಯ ಬಟ್ಟಪ್ಪಾಡಿ ಸಮುದ್ರ ಕೊರತೆಯಿಂದ ರಸ್ತೆ ಸಂಪರ್ಕ ಮತ್ತಷ್ಟು ಕಡಿತಗೊಂಡಿದ್ದು, ಜೊತೆಗೆ ಇದರ ಹಿಂಭಾಗದ ೪-೫ ಮನೆಗಳು ಅಪಾಯದ ಅಂಚಿನಲ್ಲಿದೆ. ಈ ಬಗ್ಗೆ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್ ರಾಯ್ ಪುರ ಅವರು ಮಾಹಿತಿ ಪಡೆದು ಸ್ಥಳೀಯ ಅಧಿಕಾರಿಗಳಿಗೆ ಪರಿಹಾರಕಂಡುಕೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಾರವಾರ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಇಂಜಿನಿಯರ್ ಪ್ರಮೀತ್ ಬಿ.ಎಸ್, ಮಂಗಳೂರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ್ ಕುಮಾರ್ ಎ., ಮನೋಹರ್ ಆಚಾರ್ಯ ವಿ.ಕೆ, ಬ್ಲಾಕ್ ಬ್ರಿಕ್ಸ್ ಸಲಹೆಗಾರ ಸಮೀಪ್ ಜೈನ್ ಮತ್ತಿತರರು ಇದ್ದರು.


Spread the love