ಕಣ್ಣೂರು- ಕನ್ನಗುಡ್ಡೆ ರಸ್ತೆ ನಿರ್ಮಣಕ್ಕೆ 10 ಕೋಟಿ ರೂಪಾಯಿ: ಶಾಸಕ ಜೆ.ಆರ್.ಲೋಬೊ
ಮಂಗಳೂರು: ಕಣ್ಣೂರು- ಕನ್ನಗುಡ್ಡ ರಸ್ತೆ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.
ಅವರು ಮಲ್ಲಿಕಟ್ಟೆ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಿದ್ದರು. ಇಲ್ಲಿ 7.5 ಮೀಟರ್ ಅಗಲದ ರಸ್ತೆ ಮಾಡಲಾಗುವುದು. ಸುಮಾರು 5 ಕಿ.ಮೀ ಉದ್ದಕ್ಕೆ ಈ ರಸ್ತೆ ಬರುತ್ತದೆ ಎಂದರು.
ಶುಕ್ರವಾರ ಎಲ್ಲಾ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸಬೇಕು ಎಂದು ಹೇಳಿದ ಶಾಸಕ ಜೆ.ಆರ್.ಲೋಬೊ ಅವರು ಜಂಟಿ ನಿರ್ದೇಶಕರು, ಟಿಪಿಒ ಮತ್ತು ಸರ್ವೇಯರಗಳು ಜಂಟಿಯಾಗಿ ಕೆಲಸ ಮಾಡಬೇಕು. ಇಲ್ಲವಾದರೆ ಇದು ವೇಗವಾಗುವುದಿಲ್ಲ ಎಂದರು.
ಶಾಸಕ ಜೆ.ಆರ್.ಲೋಬೊ ಅವರು ಕಂಕನಾಡಿ ರೈಲ್ವೇ ರಸ್ತೆಯ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡು ಮುಗಿಸುವಂತೆ ಹೇಳಿದ ಅವರು ಜನವರಿ 30ರ ಒಳಗೆ ಈ ಕಾಮಗಾರಿ ಮುಗಿಯಬೇಕು. ಅದಕ್ಕೆ ಬೇಕಾದ ತಯಾರಿಯನ್ನು ಮಾಡುವಂತೆಯೂ ಸೂಚಿಸಿದರು.
ಅಧಿಕಾರಿಗಳ ನಡುವೆ ಹೊಂದಾಣಿಕೆ ಮುಖ್ಯ. ಎಲ್ಲರೂ ಒಂದೇ ದೃಷ್ಟಿಯಿಂದ ಕೆಲಸ ಮಾಡಿದರೆ ಮಾತ್ರ ಈ ಕಾಮಗಾರಿ ಮುಗಿಯುತ್ತದೆ ಹೊರತು ಇಲ್ಲವಾದರೆ ವ್ಯರ್ಥವಾಗುತ್ತದೆ ಎಂದರು.
ಈ ಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆ, ಲೋಕೋಪಯೋಗಿ ಇಲಾಖೆ, ಟಿಪಿಒ ಮತ್ತು ಸರ್ವೇ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
11 ಕೋಟಿ ರೂಪಾಯಿ ವೆಚ್ಚದ ಕೋರ್ಟ್ ರಸ್ತೆ ವಿಳಂಭಕ್ಕೆ ಶಾಸಕ ಜೆ.ಆರ್.ಲೋಬೊ ಅಸಮಾಧಾನ
ಮಂಗಳೂರು: ಮಂಗಳೂರು ಕೋರ್ಟ್ ರಸ್ತೆಯ ನಿರ್ಮಾಣಕ್ಕೆ 11 ಕೋಟಿ ರೂಪಾಯಿ ವೆಚ್ಚಮಾಡಲಾಗುತ್ತಿದ್ದು ಈ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ನಡೆಯದಿರುವುದಕ್ಕೆ ಶಾಸಕ ಜೆ.ಆರ್.ಲೋಬೊ ಅವರು ತೀವೃ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಮಲ್ಲಿಕಟ್ಟೆ ಕಚೇರಿಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಕರೆಸಿ ಮಾತನಾಡುತ್ತಿದ್ದರು.
ಈ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದಕ್ಕೆ ನನಗೆ ಅತೀವ ಗತಿಯಲ್ಲಿ ನೋವಾಗಿದೆ. ಇದು ಇಷ್ಟೊತ್ತಿಗೆ ಮುಗಿಯಬೇಕಿತ್ತು. ಕಾರಣವೇನೆಂದು ತಿಳಿಸಬೇಕು ಎಂದರು.
ಲೋಕೋಪಯೋಗಿ ಇಲಾಖೆ ಮತ್ತು ಗುತ್ತಿಗೆದಾರರ ನಡುವೆ ಹೊಂದಾಣಿಕೆ ಕೊರತೆ ಇರುವುದನ್ನು ಪ್ರಸ್ತಾಪಿಸಿದ ಶಾಸಕ ಜೆ.ಆರ್.ಲೋಬೊ ಅವರು ಏನೇ ಸಮಸ್ಯೆ ಇದ್ದರೂ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬೇಕು ಹೊರತು ಕಾಮಗಾರಿಯನ್ನು ವಿಳಂಭ ಮಾಡಿದರೆ ಜನರು ಪ್ರಶ್ನೆ ಮಾಡುತ್ತಾರೆ ಎಂದರು.
ತಾಂತ್ರಿಕ ತೊಂದರೆ ಇರುವುದನ್ನು ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಿಳಿಸಿದಾಗ ಈ ಬಗ್ಗೆ ಅವರು ಖುದ್ದು ಕಾಂತರಾಜು ಅವರನ್ನು ಸಂಪರ್ಕಿಸಿ ಈ ವಿವಾದವನ್ನು ಬಗೆಹರಿಸುವಂತೆ ಹೇಳಿದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಾವು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿಯೂ, ಮುಂದಿನ ದಿನಗಳಲ್ಲಿ ಯಾವುದೇ ವಿಳಂಭವಾಗದಂತೆ ಕಾಮಗಾರಿಯನ್ನು ಮುಗಿಸುವುದಾಗಿ ಭರವಸೆ ನೀಡಿದರು.