Home Mangalorean News Kannada News ಕನಕದಾಸರ ಸಂದೇಶಗಳು ಮನುಕುಲಕ್ಕೆ ಮಾರ್ಗದರ್ಶಕ- ಶೀಲಾ ಶೆಟ್ಟಿ

ಕನಕದಾಸರ ಸಂದೇಶಗಳು ಮನುಕುಲಕ್ಕೆ ಮಾರ್ಗದರ್ಶಕ- ಶೀಲಾ ಶೆಟ್ಟಿ

Spread the love

ಕನಕದಾಸರ ಸಂದೇಶಗಳು ಮನುಕುಲಕ್ಕೆ ಮಾರ್ಗದರ್ಶಕ- ಶೀಲಾ ಶೆಟ್ಟಿ

ಉಡುಪಿ: ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ನೀಡಿರುವ ಸಂದೇಶಗಳು ಇಡೀ ಮನುಕುಲಕ್ಕೆ ಸರ್ವಕಾಲಕ್ಕೂ ಮಾರ್ಗದರ್ಶಕವಾಗಿವೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಹೇಳಿದ್ದಾರೆ.

ಅವರು ಭಾನುವಾರ ಉಡುಪಿ ಬೋರ್ಡ್ ಹೈಸ್ಕೂಲ್ ನಲ್ಲಿ , ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನಕದಾಸರು ಕವಿ, ದಾರ್ಶನಿಕ , ಸಂತರಾಗಿದ್ದು ಅವರು ತಮ್ಮ ಕೀರ್ತನೆಗಳ ಮೂಲಕ ಜಾತಿ ಮತ ಭೇಧವಿಲ್ಲದೇ ಮನುಜ ಕುಲವೆಲ್ಲಾ ಒಂದೇ ಎಂಬ ಸಂದೇಶ ನೀಡಿದ್ದಾರೆ ಅವರ ರಚನೆಯ ಎಲ್ಲಾ ಕೀರ್ತನೆಗಳು ಮನುಕುಲಕ್ಕೆ ಸದಾ ಕಾಲ ಮಾರ್ಗದರ್ಶನ ನೀಡಲಿದ್ದು, ತಪ್ಪುಹಾದಿಯಲ್ಲಿ ನಡೆಯವವರಿಗೆ ಸರಿಯಾದ ದಾರಿಯಲ್ಲಿ ನಡೆಯಲು ಪ್ರೇರೇಪಣೆ ನೀಡಲಿವೆ, ಕನಕದಾಸರು, ಪುರಂದರ ದಾಸರಂತಹ ದಾರ್ಶನಿಕರ ಬಗ್ಗೆ ಯುವ ಸಮುದಾಯಕ್ಕೆ ತಿಳುವಳಿಕೆ ನೀಡಬೇಕಿದೆ ಎಂದು ಶೀಲಾ ಶೆಟ್ಟಿ ಹೇಳಿದರು.

ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದ, ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ಮಾತನಾಡಿ, ಇಂದಿನ ಯುವ ಜನಾಂಗದ ಹಲವು ಸಮಸ್ಯೆಗಳಿಗೆ ಕನಕದಾಸರ ಚಿಂತನೆಗಳು ಪರಿಹಾರ ನೀಡಬಲ್ಲವಾಗಿದ್ದು, ಯುವ ಜನಾಂಗದಲ್ಲಿ ಪ್ರಶ್ನಿಸುವ ಮನೋಭಾವ, ವೈಚಾರಿಕ ಚಿಂತನೆ ಮತ್ತು ಅವರಲ್ಲಿನ ಅಹಂ ನಿರಸನ ಮಾಡುವಲ್ಲಿ ಕನಕದಾಸರು ಇಂದಿಗೂ ಪ್ರಸ್ತುತವಾಗುತ್ತಾರೆ ತಲ್ಲಣಿಸದಿರು ಕಾಣು ಮನವೆ ಎಂಬ ಕೀರ್ತನೆ , ಕ್ಷುಲ್ಲಕ ಕಾರಣಗಳಿಂದ ಅಪಾಯಕಾರಿ ನಿರ್ಧಾರ ಕೈಗೊಳ್ಳುವ ಯುವ ಜನಾಂಗಕ್ಕೆ ದಾರಿದೀಪವಾಗಬೇಕು, ಸಮಾಜದಲ್ಲಿ ಜಾತಿ ಪದ್ದತಿ ನಿರ್ಮೂಲನೆ, ಬಡವ ಶ್ರೀಮಂತ ಎನ್ನುವ ಅಂತರಗಳನ್ನು ನಿರಸನಗೊಳಿಸಿ ಸಾಮರಸ್ಯದ ಬದುಕು ಸಾಗಿಸಲು ಕನಕದಾಸರ ಸಾಹಿತ್ಯ ತಿಳಿಯಬೇಕು, ಅನಕ್ಷರಸ್ಥರಿಗೂ ತಿಳಿಯುವಂತೆ ಸರಳ ಭಾಷೆಯಲ್ಲಿ ರಚಿಸಿರುವ ಕೀರ್ತನೆಗಳು ಸಮಾಜದಲ್ಲಿ ಮಾನವೀಯತೆ ಹಾಗೂ ಶಾಂತಿ ನೆಲೆಸಲು ಸಹಕಾರಿಯಾಗಲಿವೆ ಎಂದು ಹೇಳಿದರು.

ಕನಕದಾಸರ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ದೇಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು , ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್,ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧು ಬಿ ರೂಪೇಶ್, ಡಿವೈಎಸ್ಪಿ ಜೈ ಶಂಕರ್, ಉಡುಪಿ ಜಿಲ್ಲಾ ಶ್ರೀ ಕನಕದಾಸ ಸೇವಾ ಸಂಘದ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ, ಅಧ್ಯಕ್ಷ ಹನುಮಂತ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಸ್ವಾಗತಿಸಿದರು, ಹಿರಿಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ನಿರೂಪಿಸಿ, ವಂದಿಸಿದರು.


Spread the love

Exit mobile version