ಕನ್ನಡವನ್ನು ಬರೆಯುವ ಮತ್ತು ಓದುವ ರೂಢಿಯನ್ನು ಹೆಚ್ಚಿಸಿ – ವಸಂತ ಶೆಟ್ಟಿ ಬೆಳ್ಳಾರೆ
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕರ್ನಾಟಕ ಸಂಘದಲ್ಲಿ ದೆಹಲಿಯ ಕೊರೆಯುವ ಚಳಿಗೆ ಜನವರಿ ತಿಂಗಳ 1ರಂದು ಪೂರ್ವಾಹ್ನ 3 ಗಂಟೆಗೆ ಸಂಘದ ಮೆಟ್ಟಿಲಲ್ಲಿ ಕುಳಿತು ಸ್ಥಳೀಯ ಕವಿಗಳು ಸ್ವರಚಿತ ಕನ್ನಡದ ಕವನಗಳನ್ನು ವಾಚಿಸಿದರು.
ಸಂಘದ ಅಂಗಳದಲ್ಲಿ” ಸ್ವರಚಿತ ಕವನ ವಾಚನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಹೊಸ ವರ್ಷದ ಸಂಘದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಸಂಘದ ಬರಹಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶ ಸಂಘದ್ದಾಗಿದೆ ಎಂದು ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹೇಳಿದರು. ಕನ್ನಡ ನಾಡಿನಿಂದ ಬಹಳಷ್ಟು ದೂರದಲ್ಲಿ ನೆಲೆನಿಂತ ನಾವು ಕನ್ನಡವನ್ನು ಬರೆಯುವ ಮತ್ತು ಓದುವ ರೂಢಿಯನ್ನು ಹೆಚ್ಚಿಸಿಕೊಳ್ಳಬೇಕು, ತಪ್ಪಾದೀತೆಂದು ಬರೆಯಲು ಹಿಂಜರಿಯದಿರಿ, ತಮಗೆ ತಿಳಿದ ಹಾಗೆ ಬರೆಯಿರಿ, ಬರೆದುದನ್ನು ಸಂಘದ ಅಂಗಳ ಕಾರ್ಯಕ್ರಮದಲ್ಲಿ ಓದಿ. ನಿರಂತರವಾಗಿ ಬರೆದಾಗ ಮಾತ್ರ ಉತ್ತಮ ಬರಹಗಾರರಾಗಲು ಸಾಧ್ಯ ಎಂದು ಈ ಸಂದರ್ಭದಲ್ಲಿ ಹೇಳಿದರು.
ದೆಹಲಿಯ ಹಿರಿಯ ಕನ್ನಡತಿ ಡಾ.ಅಹಲ್ಯಾ ಚಿಂತಾಮಣಿ ಅವರು ಮಾತನಾಡಿ ಇದೊಂದು ಒಳ್ಳೆಯ ಪ್ರಯತ್ನ, ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಹಮ್ಮಿಕೊಳ್ಳಬೇಕೆಂದರು.
ಈ ಕಾರ್ಯಕ್ರಮದಲ್ಲಿ ಕವಿಗಳಾದ ಡಾ.ಅಹಲ್ಯಾ ಚಿಂತಾಮಣಿ, ಸಖಾರಾಮ ಉಪ್ಪೂರು, ಜಯಶ್ರೀ ಬಸವರಾಜು, ಶ್ರೀಮತಿ ಸವಿತಾ ಇನಾಂದಾರ್, ವಸಂತ ಶೆಟ್ಟಿ ಬೆಳ್ಳಾರೆ, ಕೆ.ಎಸ್.ಜಿ. ಶೆಟ್ಟಿ, ಡಾ.ಎಸ್.ಎಲ್. ಭಂಡಾರಕರ್, ಶ್ರೀಮತಿ ಮಂಜುಳಾ ನಾಗರಾಜ್, ಡಾ.ವೈ.ಅವನೀಂದ್ರನಾಥ್ ರಾವ್, ಸಂಗಪ್ಪ ವಗ್ಗಾರ್ ಸ್ವರಚಿತ ಕವನ ವಾಚನ ಮಾಡಿದರು.
ಕೊನೆಯಲ್ಲಿ ಸಂಘದ ಸಾಂಸ್ಕøತಿಕ ಸಮಿತಿಯ ಅಧ್ಯಕ್ಷರಾದ ಸಖಾರಾಮ ಉಪ್ಪೂರು ಅವರು ವಂದಿಸಿದರು.