ಕಮಲಶಿಲೆ ಬ್ರಾಹ್ಮಿ ದುರ್ಗೆಯ ಪಾದ ತೊಳೆದ ಕುಬ್ಜೆ!
- ದೇವಿಗೆ ನೈಸರ್ಗಿಕ ಪುಣ್ಯ ಸ್ನಾನ. ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಬಂದ ಕುಬ್ಜಾ ನದಿ ನೀರು
- ಶ್ರೀದೇವಿಯೊಂದಿಗೆ ಪುಣ್ಯ ಸ್ನಾನ ಮಾಡಿ ಪುಳಕೀತರಾದ ಭಕ್ತರು.
ಕುಂದಾಪುರ: ಬುಧವಾರ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಇತಿಹಾಸ ಪ್ರಸಿದ್ದ ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಬ್ಜಾ ನದಿಯ ನೀರು ನುಗ್ಗಿದೆ. ಪ್ರತಿ ಬಾರಿಯ ಮಳೆಗಾಲದಲ್ಲಿ ಉಕ್ಕೇರುವ ಕುಬ್ಜಾ ನದಿಯ ನೀರು ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಪ್ರವೇಶಿಸಿ, ಗರ್ಭಗುಡಿಯವರೆಗೂ ಸಾಗಿ, ಬ್ರಾಹ್ಮೀ ದುರ್ಗೆಯನ್ನು ತೋಯಿಸುವುದು ವಾಡಿಕೆ. ಈ ಬಾರಿಯೂ ಬುಧವಾರ ತಡರಾತ್ರಿ ಸುಮಾರು 1.30 ರ ವೇಳೆಯಲ್ಲಿ ಕುಬ್ಜೆ ಉಕ್ಕಿ ಬಂದು ತಾಯಿ ದುರ್ಗೆಯನ್ನು ತೋಯಿಸಿದ್ದಾಳೆ.
ಪ್ರತಿ ವರ್ಷದ ವಾಡಿಕೆಯಂತೆ ಕುಬ್ಜೆಯ ಆಗಮನಕ್ಕಾಗಿ ಕೆಲ ದಿನಗಳಿಂದ ಕ್ಷಣಗಣನೆ ಮಾಡುತ್ತಿದ್ದ ದೇಗುಲದ ಆಡಳಿತ ಮಂಡಳಿ, ಅರ್ಚಕರು ಹಾಗೂ ಭಕ್ತರು, ಬುಧವಾರ ರಾತ್ರಿಯವರೆಗೂ ಕುಬ್ಜಾ ನದಿಯ ಮಟ್ಟವನ್ನು ಗಮನಿಸಿಕೊಂಡೇ ಮನೆಗೆ ಹೋಗಿದ್ದರು. ತಡರಾತ್ರಿ ಸುರಿದ ಮಳೆಯಿಂದಾಗಿ ನದಿಯ ನೀರುವ ದೇಗುಲದ ಪ್ರಾಂಗಣವನ್ನು ದಾಟಿದ ಬಳಿಕ ಗರ್ಭಗುಡಿಯನ್ನು ಪ್ರವೇಶಿಸಿ ಬ್ರಾಹ್ಮೀ ದುರ್ಗಾಪರಮೇಶ್ವರಿಗೆ ಪುಣ್ಯ ಸ್ನಾನದ ಅಭಿಷೇಕವನ್ನು ನೆರವೇರಿಸಿದೆ.
ದೇವಸ್ಥಾನಕ್ಕೆ ನೀರು ಬಂತು ಎನ್ನುವ ಮಾಹಿತಿ ಪಡೆದುಕೊಂಡ ಆಸು-ಪಾಸಿನ ನೂರಾರು ಭಕ್ತರು ತಡರಾತ್ರಿಯಲ್ಲಿಯೇ ದೇಗುಲಕ್ಕೆ ಆಗಮಿಸಿ, ಜಗನ್ಮಾತೆಯೊಂದಿಗೆ ಪುಣ್ಯ ಸ್ನಾನದ ಧನ್ಯತೆಯನ್ನು ಅನುಭವಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣಾನಂದ ಐತಾಳ್ ಅವರು ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿ ಆಡಳಿತ ಮೊಕ್ತೇಸರರಾದ ಎಸ್.ಸಚ್ಚಿದಾನಂದ ಚಾತ್ರ ಅವರಿಗೆ ಪ್ರಸಾದ ವಿತರಿಸಿದರು. ಜೊತೆ ಮೊಕ್ತೇಸರರಾದ ಚಂದ್ರಶೇಖರ ಶೆಟ್ಟಿ ಹೆನ್ನಬೈಲ್ ಇದ್ದರು.
ಘಟ್ಟದ ಮೇಲೆ ಮಳೆಯ ಪ್ರಭಾವ ಹೆಚ್ಚಾದಲ್ಲಿ ಹಾಗೂ ಯಡಮೊಗೆ ಭಾಗದಲ್ಲಿ ಮಳೆಯ ಪ್ರಮಾಣ ತೀವೃವಾದಾಗ ಉಕ್ಕೇರುವ ಕುಬ್ಜಾ ನದಿಯ ನೀರು ದೇವಸ್ಥಾನದ ಪ್ರಾಂಗಣವನ್ನು ದಾಟಿ , ಗರ್ಭಗುಡಿಯನ್ನು ಪ್ರವೇಶಿಸಿ ಬ್ರಾಹ್ಮೀ ದುರ್ಗೆಯ ಪಾದ ತೋಯಿಸುವ ಅಮೃತ ಘಳಿಗೆಗಾಗಿ ಕಾಯುತ್ತಿರುವ ಆಸು-ಪಾಸಿನ ಊರಿನವರು ಹಾಗೂ ಕ್ಷೇತ್ರದ ಭಕ್ತರು ಮಾಹಿತಿಯನ್ನು ಪಡೆದುಕೊಂಡು ದೇವಸ್ಥಾನಕ್ಕೆ ದೌಡಾಯಿಸುತ್ತಾರೆ ಹಾಗೂ ತುಂಬಿದ ಕುಬ್ಜೆಯ ನೀರಿನಲ್ಲಿ ಭಕ್ತಿಯಿಂದ ಮಿಂದೇಳುತ್ತಾರೆ. ಕಮಲಶಿಲೆ, ಹಳ್ಳಿಹೊಳೆ, ಆಜ್ರಿ, ಸಿದ್ದಾಪುರ, ಅಂಪಾರು, ಶಾನ್ಕಟ್ಟು ಪರಿಸರದ ಗ್ರಾಮಸ್ಥರಲ್ಲದೆ, ಕುಂದಾಪುರ ಭಾಗದಿಂದಲೂ ದೊಡ್ಡ ಸಂಖ್ಯೆಯ ಭಕ್ತರು ಆಗಮಿಸಿ ಈ ಪುಣ್ಯ ಕ್ಷಣದಲ್ಲಿ ಭಾಗಿಯಾಗುತ್ತಾರೆ.