ಕರಾಳ ಕಾನೂನು ವಾಪಾಸಾಗಲಿ : ಸುಶಾಂತ್ ಶೆಟ್ಟಿ
ಮಂಗಳೂರು: ‘ಭಾರತೀಯ ನ್ಯಾಯ ಸಂಹಿತೆಯ ಎರಡನೇ ಆವೃತ್ತಿಯಲ್ಲಿ ತಂದಿರುವ ಹಿಟ್ ಆಂಡ್ ರನ್ ಕಾನೂನು ಬದಲಾವಣೆಯಿಂದ ಲಾರಿ ಚಾಲಕರಿಗೆ ಅನ್ಯಾಯವಾಗಿದೆ. ಈ ಕರಾಳ ಕಾನೂನಿನಿಂದ ಚಾಲಕರಿಗೆ 10 ಲಕ್ಷ ರೂಪಾಯಿ ದಂಡ, 10 ವರ್ಷ ಜೈಲು ಶಿಕ್ಷೆ ವಿಧಿಸಬಹುದು ಎಂದಿರುವುದರಿಂದ ಚಾಲಕರು ಸಾಮೂಹಿಕವಾಗಿ ತಮ್ಮ ವೃತ್ತಿ ತೊರೆಯುವ ಸಾಧ್ಯತೆ ಇದೆ’ ಎಂದು ದಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಸುಶಾಂತ್ ಶೆಟ್ಟಿ ಹಾಗೂ ಕಾರ್ಯದರ್ಶಿ ಸುನಿಲ್ ಡಿಸೋಜಾ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
‘ಕರಾಳ ಕಾನೂನಿನಿಂದ ಲಾರಿ ಉದ್ಯಮದ ಮೇಲೆ ದುಷ್ಪರಿಣಾಮ ಬೀರಿದ್ದು, ಸದ್ಯದಲ್ಲೇ ದೇಶದಾದ್ಯಂತ ಸರಕು ಸಾಗಣೆಯಲ್ಲಿ ವ್ಯತ್ಯಾಸ ಉಂಟಾಗಲಿದೆ. ಚಾಲಕರು ಅತಿಯಾದ ದಂಡ ಮೊತ್ತ ಹಾಗೂ ಅಧಿಕ ಶಿಕ್ಷೆಯ ಭೀತಿಯಲ್ಲಿದ್ದಾರೆ. ಅಪಘಾತಗಳಾದ ಸಂದರ್ಭ ಲಾರಿ ಚಾಲಕರ ಮೇಲೆ ಸ್ಥಳೀಯ ಉದ್ರಿಕ್ತ ಸಾರ್ವಜನಿಕರಿಂದ ಗುಂಪು ಹಲ್ಲೆಯಾಗುತ್ತದೆ. ಇದರ ವಿರುದ್ಧವೂ ಕಠಿಣ ಕಾನೂನು ಅಗತ್ಯವಿದೆ. ಚಾಲಕರ ವಿರುದ್ಧ ತಂದಿರುವ ಕೇಂದ್ರ ಸರ್ಕಾರದ ಈ ಕಾನೂನು ಕೂಡಲೇ ವಾಪಾಸು ಪಡೆಯಬೇಕು, ಇಲ್ಲವಾದರೆ ನ್ಯಾಯಯುತ ಹೋರಾಟ ನಡೆಸಲಾಗುವುದು’
‘ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ ಪಾರ್ಕಿಂಗ್ ಸೌಲಭ್ಯ, ಶೌಚಾಲಯ, ವಿಶ್ರಾಂತಿ ಕೊಠಡಿ ಎಲ್ಲಾ ಕಡೆಗಳಲ್ಲಿ ಲಭ್ಯವಿಲ್ಲ, ದೇಶದ ಜಿಡಿಪಿಯಲ್ಲಿ ಮುಖ್ಯ ಪಾತ್ರ ನಿಭಾಯಿಸುವ ಲಾರಿ ಉದ್ಯಮ ಹಾಗೂ ಅದರ ಸಿಬ್ಬಂದಿಗಳಿಗೆ ವೃತ್ರಿ ಭದ್ರತೆ ಮೊದಲೇ ಇಲ್ಲ. ಈ ನಡುವೆ ರಿಫ್ಲೆಕ್ಟರ್ ಸ್ಟಿಕ್ಕರ್, ಟೋಲ್ ಶುಲ್ಕ ಹಾಗೂ ತೆರಿಗೆ ಏರಿಕೆ ಸೇರಿದಂತೆ ನೂರಾರು ನಿಯಮಗಳನ್ನು ಪದೇ ಪದೇ ಹೇರಲಾಗುತ್ತಿದೆ. ಆರ್ಟಿಓ ಚೆಕ್ ಪೋಸ್ಟ್ ಗಳಲ್ಲಿ ಭ್ರಷ್ಟಾಚಾರ ನಿಂತಿಲ್ಲ, ಇಂತಹ ಸಂದರ್ಭದಲ್ಲಿ ಕರಾಳ ಕಾನೂನು ಜಾರಿಗೊಳಿಸಿ ಸಾರಿಗೆ ಉದ್ಯಮದ ಕತ್ತು ಹಿಸುಕಲಾಗುತ್ತಿದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿದ್ದಾರೆ.