Home Mangalorean News Kannada News ಕರಾವಳಿಗೆ ಅಮಿತ್ ಶಾ ಭೇಟಿ; ಹೊಸ ಹುರುಪಿನೊಂದಿಗೆ ಸ್ವಾಗತಕ್ಕೆ ಸಿದ್ದಗೊಂಡ ಉಡುಪಿ ಜಿಲ್ಲಾ ಬಿಜೆಪಿ

ಕರಾವಳಿಗೆ ಅಮಿತ್ ಶಾ ಭೇಟಿ; ಹೊಸ ಹುರುಪಿನೊಂದಿಗೆ ಸ್ವಾಗತಕ್ಕೆ ಸಿದ್ದಗೊಂಡ ಉಡುಪಿ ಜಿಲ್ಲಾ ಬಿಜೆಪಿ

Spread the love

ಕರಾವಳಿಗೆ ಅಮಿತ್ ಶಾ ಭೇಟಿ; ಹೊಸ ಹುರುಪಿನೊಂದಿಗೆ ಸ್ವಾಗತಕ್ಕೆ ಸಿದ್ದಗೊಂಡ ಉಡುಪಿ ಜಿಲ್ಲಾ ಬಿಜೆಪಿ

ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಫೆಬ್ರವರಿ 19 ರಿಂದ 21 ರವರೆಗೆ ಕರಾವಳಿ ಜಿಲ್ಲೆಗಳ ಪ್ರವಾಸಕ್ಕೆ ಮುಂದಾಗಿದ್ದಾರೆ. ಮೂರು ದಿನ ಬಿಡುವಿಲ್ಲದ ಕಾರ್ಯ ಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು, ಈ ಮೂಲಕ ಕರಾವಳಿಯಿಂದಲೇ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಫೆಬ್ರವರಿ 20 ರಂದು ಉಡುಪಿ ದಕ ಮತ್ತು ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಸಮಾವೇಶ ಮಲ್ಪೆಯಲ್ಲಿ ನಡೆಯಲಿದ್ದು ಅದ್ದೂರಿಯಾದ ನಡೆಯುತ್ತಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಹೇಳಿದರು.

ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಮಿತ್ ಶಾ ಭೇಟಿಯನ್ನು ಅವಿಸ್ಮರಣೀಯಗೊಳಿಸಲು ಭಾರತೀಯ ಜನತಾ ಪಕ್ಷ ಸಂಪೂರ್ಣ ಸಜ್ಜಾಗಿದ್ದು, ಸುಮಾರು 50000 ಕ್ಕೂ ಅಧಿಕ ಮೀನುಗಾರರು ಸಮಾವೇಶದಲ್ಲಿ ಪಾಲ್ಗೊಳ್ಳುವ ನೀರಿಕ್ಷೆ ಇದ್ದು, ಮೂರು ಜಿಲ್ಲೆಗಳಲ್ಲಿ ಪಕ್ಷ ಪ್ರಮುಖರು ಮತ್ತು ಮೀನುಗಾರರ ಸಮಾವೇಶದ ನಾಯಕರ ನೇತೃತ್ವದಲ್ಲಿ ಹಲವಾರು ಸಭೆಗಳನ್ನು ನಡೆಸಲಾಗಿದೆ. ಈಗಾಗಲೇ ರಾಷ್ಟ್ರೀಯ ಅಧ್ಯಕ್ಷರು ಬರುವ ದಾರಿಯುದ್ದಕ್ಕೂ ಶ್ರಂಗಾರ ಮಾಡಲಾಗಿದೆ.

ಮೀನುಗಾರರ ಸಮಾವೇಶದ ಬಳಿಕ ಅಮಿತ್ ಶಾ ಅವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದು, ಪರ್ಯಾಯ ಪಲಿಮಾರು ಮತ್ತು ಪೇಜಾವರ ಸ್ವಾಮೀಜಿಯವರನ್ನು ಭೇಟಿ ಮಾಡಲಿದ್ದಾರೆ.

ಫೆಬ್ರವರಿ 21 ರಂದು ಬೆಳಿಗ್ಗೆ 10 ಗಂಟೆಗೆ ಉಡುಪಿ ಮತ್ತು ದಕ ಜಿಲ್ಲೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪ್ರಮುಖರ ಸಂವಾದ ಕಾರ್ಯಕ್ರಮ ನಡೆಯಲಿದ್ದು ಬಳಿಕ ಶಿವಮೊಗ್ಗ ಮತ್ತು ಮಂಗಳೂರು ವಿಭಾಗಗಳ ಶಕ್ತಿಕೇಂದ್ರ ಪ್ರಮುಖರ ಸಂಘಟನಾತ್ಮಕ ವಿಚಾರಗಳ ಬಗ್ಗೆ ಸಭೆ ನಡೆಸಲಿದ್ದಾರೆ.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡ್ಯೂರಪ್ಪ ಅವರೊಂದಿಗೆ ಕೇಂದ್ರ ಸಚಿವರು, ಉಡುಪಿ, ಮಂಗಳೂರು ಮತ್ತು ಉತ್ತರಕನ್ನಡ ಸಂಸದರು ಭಾಗವಹಿಸಲಿದ್ದಾರೆ ಎಂದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ಮಾತನಾಡಿ ಅಮಿತ್ ಶಾ ಅವರು ಫೆಬ್ರವರಿ 19 ರಂದು ಸಂಜೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು ಅಲ್ಲಿಯೇ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ರಾತ್ರಿ ಅಲ್ಲಿಯೇ ತಂಗಲಿದ್ದಾರೆ. ಫೆಬ್ರವರಿ 20ರಂದು ಬೆಳಿಗ್ಗೆ ದೇವರ ದರ್ಶನ ಪಡೆದು ಬಳಿಕ ಅಲ್ಲಿಂದ ಹೊರಟು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನದ ಬಳಿಕ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಕ್ಷೇತ್ರಗಳ ನವಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸುರತ್ಕಲ್ ಕಾಟಪಳ್ಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಅವರ ಮನೆಗೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವಾನ ಹೇಳಲಿದ್ದಾರೆ. ಅನಂತರ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಅಲ್ಲಿಂದ ಉಡುಪಿಯ ಮಲ್ಪೆಯಲ್ಲಿ ನಡೆಯಲಿರುವ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಉಡುಪಿ ಜಿಲ್ಲೆಗೆ ಆಗಮಿಸುವ ಸಂದರ್ಭ ಹೆಜಮಾಡಿಯಲ್ಲಿ ಪಕ್ಷದ ವತಿಯೀಮದ ಅದ್ದೂರಿಯಾಗಿ ಸ್ವಾಗತಿಸಲಾಗುವುದು ಹಾಗೂ ಉಡುಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಬೈಕ್ ಜಾಥಾದ ಮೂಲಕ ಮಲ್ಪೆ ಮೀನುಗಾರರ ಸಮಾವೇಶಕ್ಕೆ ಬರ ಮಾಡಿಕೊಳ್ಳಲಾಗುವುದು ಎಂದರು.

ಉಡುಪಿಯ ಕಾರ್ಯಕ್ರಮಗಳನ್ನು ಮುಗಿಸಿ ಫೆಬ್ರವರಿ 21 ರಂದು ಮಧ್ಯಾಹ್ನ ಹೆಲಿಕಾಪ್ಟರ್ ಮೂಲಕ ಉತ್ತರಕನ್ನಡ ಜಿಲ್ಲೆಗೆ ತೆರಳುವ ಅಮಿತ್ ಶಾ ಅವರು ಅಲ್ಲಿ ದುಷ್ಕರ್ಮಿಗಳಿಗೆ ಬಲಿಯಾದ ಪರೇಶ್ ಮೇಸ್ತ ಮನೆಗೆ ಭೇಟಿ ನೀಡಿ, ಬಳಿಕ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸಿ ಗೋಕರ್ಣ ದೇವಸ್ಥಾನಕ್ಕೆ ಭೇಟಿ ನೀಡಿ ಹುಬ್ಬಳಿ ಮೂಲಕ ದೆಹಲಿಗೆ ವಾಪಾಸಾಗಲಿದ್ದಾರೆ ಎಂದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ವಿಕ್ರಮಾರ್ಜುನ ಹೆಗ್ಡೆ, ಕಾರ್ಕಳ ಶಾಸಕ ಸುನೀಲ್ ಕುಮಾರ್, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಮೀನುಗಾರರ ಸಮಾವೇಶದ ಸಂಚಾಲಕ ಯಶ್ಪಾಲ್ ಸುವರ್ಣ, ಜಿಪಂ. ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಮೀನುಗಾರರ ಪ್ರಕೋಷ್ಟದ ಸದಾನಂದ ಬಳ್ಕೂರು, ಜಿಲ್ಲಾ ವಕ್ತಾರ ಕಟಪಾಡಿ ಶಂಕರಪೂಜಾರಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version