ಕರಾವಳಿಗೆ ಪ್ರತ್ಯೇಕ ಗಣಿ ನೀತಿ ಜಾರಿಯಾಗಲಿ – ಕೆ. ವಿಕಾಸ್ ಹೆಗ್ಡೆ
ಕುಂದಾಪುರ: ಗಣಿಗಾರಿಕೆಗೆ ಸಂಬಂಧಿಸಿದಂತೆ ಕರಾವಳಿಗೆ ಪ್ರತ್ಯೇಕ ಗಣಿ ನೀತಿ ಜಾರಿಯಾಗಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.
ಶಾಸಕಾಂಗ ರೂಪಿಸಿದ ಕಾನೂನಿನ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿಯವರನ್ನು ರೋಬೋಟ್ ಗೆ ಹೋಲಿಸಿದ್ದು ಬೈಂದೂರು ಶಾಸಕರು ಪರೋಕ್ಷವಾಗಿ ಪೊಲೀಸ್ ವರಿಷ್ಟಾಧಿಕಾರಿಯವರಿಂದ ಕಾನೂನು ಮೀರಿ ಕೆಲಸ ಮಾಡಿಸುವ ನಿಲುವಾಗಿದೆ. ಉಡುಪಿ ಜಿಲ್ಲೆಗೆ ಕೆ. ಅರುಣ್ ರವರು ಪೊಲೀಸ್ ವರಿಷ್ಟಾಧಿಕಾರಿಯಾಗಿ ಬಂದ ಮೇಲೆ ಕಾನೂನು ಸುವ್ಯವಸ್ಥೆ ಅತ್ಯಂತ ಉತ್ತಮವಾಗಿದೆ, ರಾಜಕೀಯ ಲಾಭಕ್ಕಾಗಿ ಕೋಮುದಳ್ಳುರಿಗೆ ಸಿಕ್ಕಿದ್ದ ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಯಾವುದೇ ಕೋಮುಗಲಭೆ ಇಲ್ಲವಾಗಿದೆ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ, ಇವತ್ತು ಅಕ್ರಮ ಗಾಣಿಗಾರಿಕೆ ತಡೆಯ ಬೇಕಾದದ್ದು ಪೊಲೀಸ್ ವರಿಷ್ಟಾಧಿಕಾರಿಯವರ ಕೆಲಸ, ಗಣಿಗಾರಿಕೆಯ ವಿಚಾರದಲ್ಲಿ ಶಾಸಕಾಂಗ ರೂಪಿಸಿದ ನೀತಿ, ನಿಯಮಗಳನ್ನು ಪಾಲನೆ ಮಾಡುವುದು ಪೊಲೀಸ್ ಇಲಾಖೆಯ ಕೆಲಸ ಹಾಗೂ ಪೊಲೀಸ್ ವರಿಷ್ಟಾಧಿಕಾರಿ ಅದನ್ನೇ ಮಾಡುತ್ತಿದ್ದಾರೆ. ಶಾಸನ ಸಭೆಯ ಗೌರವಾನ್ವಿತ ಸದಸ್ಯರಾದ ಬೈಂದೂರು ಶಾಸಕರು ಕರಾವಳಿಗೆ ಪ್ರತ್ಯೇಕ ಗಣಿ ನೀತಿ ತರುವಲ್ಲಿ ಪ್ರಯತ್ನಿಸುವುದನ್ನು ಬಿಟ್ಟು ಕಾನೂನು ಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿಗಳನ್ನು ರೋಬೋಟ್ ಗೆ ಹೋಲಿಸುವುದಲ್ಲಾ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿರುತ್ತಾರೆ.