Home Mangalorean News Kannada News ಕರಾವಳಿಯಲ್ಲಿ ಆಕರ್ಷಿಸುತ್ತಿರುವ ಹೋಂಸ್ಟೇ:ಪ್ರವಾಸೋದ್ಯಮ ಇಲಾಖೆಯಿಂದ ಲೈಸನ್ಸ್

ಕರಾವಳಿಯಲ್ಲಿ ಆಕರ್ಷಿಸುತ್ತಿರುವ ಹೋಂಸ್ಟೇ:ಪ್ರವಾಸೋದ್ಯಮ ಇಲಾಖೆಯಿಂದ ಲೈಸನ್ಸ್

Spread the love

ಕರಾವಳಿಯಲ್ಲಿ ಆಕರ್ಷಿಸುತ್ತಿರುವ ಹೋಂಸ್ಟೇ:ಪ್ರವಾಸೋದ್ಯಮ ಇಲಾಖೆಯಿಂದ ಲೈಸನ್ಸ್

ಮ0ಗಳೂರು :ರಾಜ್ಯದಲ್ಲಿ ಕೈಗಾರಿಕೆ, ಐಟಿ-ಬಿಟಿ ವೇಗಗತಿಯಲ್ಲಿ ಅಭಿವೃದ್ಧಿಯಾಗುತ್ತಿದ್ದಂತೆ ಪ್ರವಾಸೋದ್ಯಮಕ್ಕೂ ವಿಶೇಷ ಒತ್ತು ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೋಂಸ್ಟೇಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆಯಿಂದಲೇ ಪರವಾನಗಿ ನೀಡಲು ಸರಕಾರ ನಿರ್ಧರಿಸಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇನ್ನು ಮುಂದೆ ಹೋಂಸ್ಟೇಗೆ ಪ್ರವಾಸೋದ್ಯಮ ಇಲಾಖೆ ಪರವಾನಗಿ ಪಡೆಯುವುದು ಕಡ್ಡಾಯವಾಗಲಿದೆ. ಇದರಿಂದ ವ್ಯಾಪಾರ ಲೈಸೆನ್ಸ್ ಸೇರಿದಂತೆ ಇತರ ಯಾವುದೇ ಪರವಾನಗಿಯ ಅಗತ್ಯವಿರುವುದಿಲ್ಲ.

ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹೋಂ ಸ್ಟೇ ಯೋಜನೆಯನ್ನು ಆರಂಭಿಸಿದ್ದು, ಸ್ವಂತ ನಿವಾಸ ಹೊಂದಿದ ಯಾರು ಕೂಡಾ ಇದನ್ನು ಸದುಪಯೋಗಪಡಿಸಿಕೊಳ್ಳಬಹುದು. ಮನೆಯಲ್ಲಿ ಗರಿಷ್ಠ 5 ಕೊಠಡಿಗಳಿದ್ದರೆ ಹೋಂ ಸ್ಟೇ ಆರಂಭಿಸಲು ಅವಕಾಶವಿದೆ.

ಹೋಂ ಸ್ಟೇ ಎಂದರೆ ಪ್ರವಾಸಿಗರಿಗೆ ಮತ್ತು ಜಿಲ್ಲೆಗೆ ನಾನಾ ಕಾರಣಕ್ಕೆ ಭೇಟಿ ನೀಡುವವರಿಗೆ ಬಾಡಿಗೆ ಆಧಾರದ ಮೇಲೆ ವಸತಿ ಸೌಲಭ್ಯ ನೀಡುವ ಖಾಸಗಿ ಮನೆ. 3 ವರ್ಷಗಳಿಗೆ ನೊಂದಣಿ ಶುಲ್ಕ ರೂ. 500 ಎಂದು ನಿಗದಿಪಡಿಸಲಾಗಿದೆ. ಹೋಂಸ್ಟೇ ಕೊಠಡಿ ಶುಲ್ಕವು ದಿನಕ್ಕೆ ರೂ.5 ಸಾವಿರಕ್ಕಿಂತ ಕಡಿಮೆಯಿದ್ದಲ್ಲಿ ವಿಲಾಸಿ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗುತ್ತದೆ. ವಿದ್ಯುಚ್ಛಕ್ತಿ ಮತ್ತು ನೀರಿನ ಶುಲ್ಕಗಳನ್ನು ಗೃಹ ಬಳಕೆಯ ದರದಲ್ಲಿ ನೀಡಲಾಗುತ್ತದೆ. ವಸತಿ ಉದ್ದೇಶಗಳಿಗೆ ನಿರ್ದಿಷ್ಟಪಡಿಸಿರುವಂತೆ ಆಸ್ತಿ ತೆರಿಗೆ ದರಗಳನ್ನು ಪಾವತಿಸಬೇಕು. ಹೋಂಸ್ಟೇ ಮಾಲೀಕರು ಅತಿಥಿಗಳು ಪಾವತಿಸಬೇಕಾದ ದರಪಟ್ಟಿಯನ್ನು ನಿಖರವಾಗಿ ವಿವರಿಸಬೇಕು.

ಪಾರಂಪರಿಕ ಮನೆಗಳಿಗೆ ಬೇಡಿಕೆ: ಕರಾವಳಿ ಪ್ರಾಕೃತಿಕ ಪ್ರವಾಸಿ ತಾಣವಾಗಿರುವುದರಿಂದ ಇಲ್ಲಿಗೆ ಪ್ರವಾಸ ಬರುವವರು ಹೆಚ್ಚಾಗಿ ಗುತ್ತಿನ ಮನೆ, ಗ್ರಾಮೀಣ ಶೈಲಿಯ ಹೋಂಸ್ಟೇಗೆ ಹೆಚ್ಚು ಬೇಡಿಕೆ ಇಡುತ್ತಿದ್ದಾರೆ. ಈ ವಿನ್ಯಾಸದಲ್ಲಿ ನಿರ್ಮಾಣ ಮಾಡಿದರೆ ಒಳ್ಳೆಯ ಬೇಡಿಕೆ ಸಾಧ್ಯವಿದೆ. ವಿನ್ಯಾಸ ಮತ್ತು ಅನುಕೂಲತೆಗೆ ಅನುಗುಣವಾಗಿ ಹೋಂಸ್ಟೇಗಳ ದರವೂ ವ್ಯತ್ಯಾಯವಾಗಲಿದೆ.

ಹೋಂ ಸ್ಟೇ ಯೋಜನೆಯನ್ನು ಆರಂಭಿಸಲು ಆಸಕ್ತಿಯಿರುವವರು ಕರ್ನಾಟಕ ಸರ್ಕಾರದ ವೆಬ್‍ಸೈಟ್  ನೇರವಾಗಿ ನೊಂದಣಿ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಜಿಲ್ಲೆಗೆ ಬರುವ ಪ್ರವಾಸಿಗರು ಹೋಮ್‍ಸ್ಟೇಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಸಂಬಂಧಪಟ್ಟವರನ್ನು ಸಂಪರ್ಕಿಸಿ ತಮಗೆ ಬೇಕಾದ ಹೋಂ ಸ್ಟೇಗಳನ್ನು ಮೊದಲೇ ಬುಕ್ ಮಾಡಿಕೊಳ್ಳಬಹುದು.

ಹೋಂಸ್ಟೇ ನಿಯಮಗಳೇನು? ಅರ್ಜಿ ಸಲ್ಲಿಸಿದ ವ್ಯಕ್ತಿ ನಿವಾಸದ ಮಾಲೀಕನಾಗಿರಬೇಕು ಮತ್ತು ಅದೇ ನಿವಾಸದಲ್ಲಿ ವಾಸವಿರಬೇಕು. ಮನೆಯ ಕಂಪೌಂಡ್ ಮತ್ತು ಮುಖ್ಯದ್ವಾರಕ್ಕೆ ಒಟ್ಟು 2 ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿರಬೇಕು. ವರ್ಷಕ್ಕೊಮ್ಮೆ ಪೆÇಲೀಸರಿಂದ ನಿರಕ್ಷೇಪಣಾ ಪತ್ರ ಪಡೆದು, ಪರವಾನಗಿ ನವೀಕರಣ ಮಾಡಬೇಕು. ಗುಣಮಟ್ಟದ ಮನೆ ಹೊಂದಿದ್ದು, ಶೌಚಾಲಯ ಹಾಗೂ ಇತರ ಮೂಲ ಸೌಕರ್ಯಗಳನ್ನು ಹೊಂದಿರಬೇಕು. ಹೋಂ ಸ್ಟೇ ಅತಿಥಿಗಳ ವಿವರದ ಬಗ್ಗೆ ನೊಂದಣಿ ಪುಸ್ತಕವನ್ನು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಗಣಕೀಕರಣ ಮಾಡಿಸಬೇಕು.

ಹೋಂಸ್ಟೇ ಆರಂಭಿಸಲು ಸಲ್ಲಿಸಬೇಕಾದ ಅಗತ್ಯ ದಾಖಲೆಗಳು: ಸಂಬಂಧಪಟ್ಟ ನಗರ ಅಥವಾ ಗ್ರಾಮ ಪಂಚಾಯತ್‍ನಿಂದ ನಿರಾಕ್ಷೇಪಣಾ ಪತ್ರ. ಪೊಲೀಸ್ ಠಾಣೆಯಿಂದ ನಿರಾಕ್ಷೇಪಣಾ ಪತ್ರ. ಪಹಣಿ ಪತ್ರದ ಪ್ರತಿ, ಕಟ್ಟಡ ಪರವಾನಗಿ ಪ್ರತಿ, ಮನೆ ತೆರಿಗೆ ಪಾವತಿ ರಶೀದಿ, 9/11 ಪ್ರತಿ, ಸೇಲ್ ಡೀಡ್ ಪ್ರತಿ, ಹೋಂ ಸ್ಟೇ ಕಟ್ಟಡದ ಎದುರಿನ ಹಾಗೂ ಒಳ ಕೊಠಡಿಗಳ ಒಳಾಂಗಣ ಚಿತ್ರ –ಹೋಂ ಸ್ಟೇ ಕಟ್ಟಡದ ಶೌಚಾಲಯದ ಒಳಾಂಗಣ ಚಿತ್ರ, ಹೋಂ ಸ್ಟೇ ಮಾಲಕನ ಭಾವಚಿತ್ರ.

ಹೋಂ ಸ್ಟೇಗೆ ಅರ್ಜಿ ಸಲ್ಲಿಸುವ ವಿಧಾನ: ಸಂಬಂಧಿಸಿದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಹೋಂ ಸ್ಟೇ ಅಂತರ್‍ಜಾಲದಲ್ಲಿ ಲಾಗ್ ಇನ್ ಆಗಿ, ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್‍ಲೋಡ್ ಮಾಡಿ ನೇರವಾಗಿ ನೊಂದಾವಣಿ ಮಾಡಿಕೊಳ್ಳಬಹುದಾಗಿದೆ ಅಥವಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಗೆ ಎಲ್ಲಾ ದಾಖಲೆಗಳನ್ನು ನೀಡಿ, ಕಛೇರಿಯ ಪ್ರವಾಸೋದ್ಯಮ ಸಮಾಲೋಚಕರ ಮೂಲಕ ಆನ್‍ಲೈನ್ ನೊಂದಾವಣಿ ಮಾಡಿಸಿಕೊಳ್ಳಬಹುದು. ಹೋಂ ಸ್ಟೇಗಳಿಗೆ ನೊಂದಾವಣಿ ಮಾಡಲು ನೊಂದಾವಣಿ ಶುಲ್ಕ ರೂ. 500 ಅನ್‍ಲೈನ್ ನೆಟ್ ಬ್ಯಾಂಕಿಂಗ್ ಅಥವಾ ನಗದು ರೂಪದಲ್ಲಿ ಚಲನ್ ಫಾರ್ಮ್‍ನ್ನು ಡೌನ್‍ಲೋಡ್ ಮಾಡಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಾವತಿಸಬೇಕಾಗಿರುತ್ತದೆ.

ಹೋಂ ಸ್ಟೇಗಾಗಿ ನೊಂದಾವಣಿ ಮಾಡಿದ ಅರ್ಜಿ ದಾಖಲೆಗಳನ್ನು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪರಿಶೀಲಿಸಿ, ಬಂದಿರುವ ಅರ್ಜಿಗಳನ್ನು ತಿರಸ್ಕರಿಸಲು ಅಥವಾ ಮರು ಅರ್ಜಿ ಸಲ್ಲಿಸುವಂತೆ ಸೂಚಿಸುವ ಅವಕಾಶವಿರುತ್ತದೆ. ಬಂದಿರುವ ಅರ್ಜಿಗಳು ಎಲ್ಲಾ ದಾಖಲೆಗಳನ್ನು ಸಮರ್ಪಕವಾಗಿ ನೀಡಿದ್ದರೆ, ಅವುಗಳನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಆನ್‍ಲೈನ್ ಮೂಲಕ ಸಲ್ಲಿಸಲಾಗುವುದು.

ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರು ಪ್ರವಾಸಿಗರಿಗಾಗಿ ಉತ್ತಮ ಹೋಂ ಸ್ಟೇ ಸೌಲಭ್ಯವನ್ನು ಅಭಿವೃದ್ಧಿ ಪಡಿಸಲು ಇಚ್ಛಿಸಿದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿ, ಮಂಗಳೂರು, ಇಲ್ಲಿಯ ದೂರವಾಣಿ ಸಂಖ್ಯೆ: 0824-2453926 ಅಥವಾ ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರಾದ ಸುಧೀರ್.ಟಿ.ಗೌಡ, ಪ್ರವಾಸೋದ್ಯಮ ಇಲಾಖೆ, ಮಂಗಳೂರು ಮೊಬೈಲ್ ಸಂಖ್ಯೆ: 7411610243, ಇವರನ್ನು ಸಂಪರ್ಕಿಸಬಹುದಾಗಿದೆ.


Spread the love

Exit mobile version