ಕರಾವಳಿಯ ಜಿಲ್ಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಪಂಚಕ್ಕೆ ಮಾದರಿ: ಆಸ್ಕರ್ ಫೆರ್ನಾಂಡಿಸ್

Spread the love

ಕರಾವಳಿಯ ಜಿಲ್ಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಪಂಚಕ್ಕೆ ಮಾದರಿ: ಆಸ್ಕರ್ ಫೆರ್ನಾಂಡಿಸ್

ಉಡುಪಿ: ಕರಾವಳಿಯ ಜಿಲ್ಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಪಂಚಕ್ಕೆ ಮಾದರಿಯಾಗಿವೆ ಎಂದು ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು. ಅವರು ಶುಕ್ರವಾರ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾನಾಡಿದರು.

ಪ್ರತಿವರ್ಷ ದೇಶ ವಿದೇಶಗಳಿಂದ ಶಿಕ್ಷಣವನ್ನು ಪಡೆಯುವ ಉದ್ದೇಶದಿಂದ ಸಾವಿರಾರು ವಿದ್ಯಾರ್ಥಿಗಳು ಉಡುಪಿ ಮತ್ತು ಮಂಗಳೂರಿಗೆ ಆಗಮಿಸುತ್ತಿದ್ದು ಅತೀ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಬ್ಯಾಸಕ್ಕೆ ಬರುವ ಜಿಲ್ಲೆಗಳಲ್ಲಿ ಮಂಚೂಣಿಯಲ್ಲಿ ಈ ಎರಡು ಜಿಲ್ಲೆಗಳಿವೆ. ದೇಶದಲ್ಲಿ ಇಂದು ನಾವು ವಿದ್ಯಾಕ್ಷೇತ್ರದಲ್ಲಿ ಇತರ ಎಲ್ಲಾ ದೇಶಗಳಿಗಿಂತ ಎತ್ತರದ ಸ್ಥಾನದಲಿದ್ದೇವೆ. ಸರಕಾರಿ ಕಾಲೇಜುಗಳು ಇಲ್ಲದ ವೇಳೆಯಲ್ಲಿ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆ ತಲೆ ಎತ್ತಿದ್ದು ಇಂದು ಸುವರ್ಣ ಮಹೋತ್ಸವದ ಹೊಸ್ತಲಲ್ಲಿ ಇರುವುದು ಅಭಿಮಾನದ ಸಂಗತಿಯಾಗಿದೆ. ದೇಶದ ಹಲವಾರು ಕಾಲೇಜುಗಳು ವಿಶ್ವವಿದ್ಯಾನಿಲಯಗಳನ್ನಾಗಿ ಪರಿವರ್ತಿಸುವತ್ತ ಪ್ರಯತ್ನಗಳು ಜರುಗುತ್ತಿದ್ದ ಅದಕ್ಕೆ ನಾವು ಪ್ರೋತ್ಸಾಹ ನೀಡಬೇಕಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಮಾತನಾಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆ ಕ್ರಾಂತಿಯನೇ ಮಾಡಿದ್ದು ಕೃಷಿಕೆಲಸಕ್ಕೆ ಹೋಗಿ ಈ ಭಾಗದ ಮಕ್ಕಳು ಶಿಕ್ಷಣವನ್ನು ಪಡೆಯಬೇಕೆಂಬ ಉದ್ದೇಶದಿಂದ ಈ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿದ್ದು ಉತ್ತಮ ಶಿಕ್ಷಣ ಅಂದಿನಿಂದ ಇಂದಿನ ತನಕ ನೀಡುತ್ತಾ ಬಂದಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ನಮ್ಮ ಸರ್ಕಾರ ಸದಾ ಬೆಂಬಲ ನೀಡುತ್ತಿದ್ದು, ಕಾಲೇಜಿಗೆ ಬರುವ ರಸ್ತೆಯನ್ನು ಸಂತೆಕಟ್ಟೆಯಿಂದ ಕಲ್ಯಾಣಪುರದ ವರೆಗೆ ರೂ 50 ಲಕ್ಷ ಮತ್ತು ಕಾಲೇಜಿಗೆ ಸಂಪರ್ಕಿಸುವ ರಸ್ತೆಯನ್ನು ರೂ 17 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು.

ಕಾರ್ಯಕಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಅವರು ಮಿಲಾಗ್ರಿಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣವನ್ನು ಮಾತ್ರ ನೀಡದೆ ದೇಶದ ಸಭ್ಯ ನಾಗರಿಕರಾಗಿ ಬದುಕವಂತ ಕೆಲಸವನ್ನು ಮಾಡಿದೆ. ಮಾನವೀಯ ಮೌಲ್ಯಗಳೊಂದಿದೆ ದೇಶದ ನಾಯಕರಾಗಿ ವಿದ್ಯಾರ್ಥಿಗಳು ಇನ್ನಷ್ಟು ಹೊರಹೊಮ್ಮುವಂತಾಗಲಿ ಎಂದು ಶುಭ ಹಾರೈಸಿದರು.

ಪದವಿ ಕಾಲೇಜಿನ ವರದಿಯನ್ನು ಪ್ರಾಂಶುಪಾಲ ಡಾ ಜೆರಾಲ್ಡ್ ಪಿಂಟೊ, ಪಿಯು ಕಾಲೇಜಿನ ವರದಿಯನ್ನು ಪ್ರಾಂಶುಪಾಲೆ ಸವಿತಾ ಕುಮಾರಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿಯ ವರದಿಯನ್ನು ಹೇಲ್ಮಾ ಪೀಕಾರ್ಡೊ, ಸುವರ್ಣ ಮಹೋತ್ಸವದ ವರಿದಿಯನ್ನು ಪ್ರೋ. ಅರ್ಚನಾ ಕೆ ದಾಬ್ಡೆ ವಾಚಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜು ಸ್ಥಾಪಕರನ್ನು, ಮಾಜಿ ಸಂಚಾಲಕರು, ಮಾಜಿ ಪ್ರಾಂಶುಪಾಲರು, ಹಾಗೂ ನಿವೃತ್ತ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬಂದಿಗಳನ್ನು, ಕ್ರೀಡೆ ಹಾಗೂ ಶೈಕ್ಷಣಿಕ ಸಾಧಕರನ್ನು ಸನ್ಮಾನಿಸಲಾಯಿತು.

ಕಾಲೇಜಿನ ವಾರ್ತಾ ಪತ್ರಿಕೆ “ವಾಯ್ಸ್ ಆಫ್ ಮಿಲಾಗ್ರಿಸ್”ನ್ನು ಸಚಿವ ಪ್ರಮೋದ್ ಮಧ್ವರಾಜ್, ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಧರ್ಮಾಧ್ಯಕ್ಷರು ಬಿಡುಗಡೆಗೊಳಿಸಿದರು.

ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ ಮೊನ್ಸಿಂಜ್ಞೋರ್ ಬ್ಯಾಪ್ಟಿಸ್ಟ್ ಮಿನೇಜಸ್, ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಶಿಕ್ಷಣ ಸೊಸೈಟಿ ಇದರ ಕಾರ್ಯದರ್ಶಿ ವಂ ಲೊರೆನ್ಸ್ ಡಿ’ಸೋಜ, ಜಿಪಂ ಸದಸ್ಯ ಜನಾರ್ದನ ತೋನ್ಸೆ, ತಾಪಂ ಸದಸ್ಯ ಧನಂಜಯ ಕುಂದರ್, ಹಳೆ ವಿದ್ಯಾರ್ಥಿ ಆಲ್ಫ್ರೇಡ್ ಕ್ರಾಸ್ಟೊ, ಕ್ಯಾಂಪಸ್ ಡೈರೆಕ್ಟರ್ ವಂ ಡಾ ಪ್ರಕಾಶ್ ಅನಿಲ್ ಕ್ಯಾಸ್ತಲಿನೊ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರವಿಚಂದ್ರ ನಾಯಕ್ ಮತ್ತು ವಿಶ್ಣುಪ್ರಸಾದ್, ಹಳೆ ವಿದ್ಯಾರ್ಥಿ ಸಂಘದ ಅಲನ್ ವಿನಯ್ ಲೂವಿಸ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ರೊಸಾಲಿಯಾ ಕಾರ್ಡೊಜಾ, ಮತ್ತು ಜೋಯ್ಸ್ ಡಿಸೋಜಾ, ಬ್ಲಾಸಂ ಫೆರ್ನಾಂಡಿಸ್, ಪಾಲನ ಮಂಡಳಿಯ ಉಪಾಧ್ಯಕ್ಷ ಡಾ ನೇರಿ ಕರ್ನೆಲಿಯೊ, ಕಾಲೇಜು ಅಭಿವೃದ್ಧಿ ಸಮಿತಿಯ ಮೆಲ್ವಿನ್ ಸಿಕ್ವೇರಾ, ಲೆಸ್ಲಿ ಲೂವಿಸ್ ಹಾಗೂ ಇತರರು ಉಪಸ್ಥಿತರಿದ್ದರು.
ಕಾಲೇಜಿನ ಸಂಚಾಲ ವಂ ಸ್ಟ್ಯಾನಿ ಬಿ ಲೋಬೊ ಸ್ವಾಗತಿಸಿ, ಮೆಟಿಲ್ಡಾ ಲೂವಿಸ್ ವಂದಿಸಿದರು.


Spread the love