Home Mangalorean News Kannada News ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ‘ನಾಟಕ ಪರ್ಬ’ ಉದ್ಘಾಟನೆ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ‘ನಾಟಕ ಪರ್ಬ’ ಉದ್ಘಾಟನೆ

Spread the love

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ‘ನಾಟಕ ಪರ್ಬ’ ಉದ್ಘಾಟನೆ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಆಶ್ರಯದಲ್ಲಿ ಶ್ರೀ ಪ್ರಾಪ್ತಿ ತೆಲಿಕೆದ ಕಲಾವಿದೆರ್ ಕುಡ್ಲ ಮತ್ತು ತುಳುವ ಬೊಳ್ಳಿ ಪ್ರತಿಷ್ಠಾನ ಇದರ ಸಹಭಾಗಿತ್ವದಲ್ಲಿ ನಮ್ಮ ಟಿವಿ ಅರ್ಪಿಸುವ ‘’ನಾಟಕ ಪರ್ಬ’’ ಇದರ ಉದ್ಘಾಟನೆಯು ತುಳುಭವನದ ಸಿರಿಚಾವಡಿಯಲ್ಲಿ ನಡೆಯಿತು.

‘’ಸಮಾಜದ ದೌರ್ಬಲ್ಯಕ್ಕೆ ಜಾಗೃತ ದರ್ಪಣ ಈ ‘’ನಾಟಕ ಪರ್ಬ’’ ಹೃದಯ ಸ್ಪರ್ಶಿ ಕಥಾ ಹಂದರದೊಂದಿಗೆ ನವರಸಾಭಿನಯದ ಮುಖೇನ ನಿತ್ಯ ಬದುಕಿನ ಓರೆಕೋರೆಗಳಿಗೆ ಬೆಳಕು ಚೆಲ್ಲಿ ವಾಸ್ತವವನ್ನು ತೋರಿಸುವ ದರ್ಪಣ’’ ನಾಟಕ ಪರ್ಬ’’, ಕೊರೋನಾದ ಕತ್ತಲೆ ಕಲಾವಿದರಿಗೆ ಕವಿದಾಗ ಕಲಾಶ್ರಯದ ಬೆಳಕು ಹರಿಸಿದೆ, ಹೊಸ ಚೈತನ್ಯ ಕಲಾವಿದರಿಗೆ, ಕಲಾಭಿಮಾನಿಗಳಿಗೆ ತುಳು ಸಾಹಿತ್ಯ ಅಕಾಡೆಮಿ ತುಂಬಿಸಿದೆ’’ ಎಂದು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆಯವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ನಡೆಯುವ ಏಳು ದಿನಗಳ ನಾಟಕ ಪರ್ಬವನ್ನು ಉದ್ಘಾಟಿಸಿ, ಮಾತನಾಡಿ ಅಭಿನಂದಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಮುಖ್ಯ ಅತಿಥಿ ಹಿರಿಯ ರಂಗಕರ್ಮಿ, ಸಮಾಜ ಸೇವಕ ರಾಮಚಂದ್ರ ಬೈಕಂಪಾಡಿ ‘’ರಂಗಭೂಮಿ ಉಗಮದ ಹಾಗೂ ನಡೆದು ಬಂದ ಹಾದಿಯ ಬಗ್ಗೆ ಮಾತನಾಡಿ ಪಂಚ ದ್ರಾವಿಡ ಭಾಷೆಗಳಲ್ಲೊಂದಾದ ತುಳು ನಾಟಕ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆಯನ್ನು ಕೊಟ್ಟಿದೆ. ರಂಗ ಕಲಾವಿದರು ಈ ನೆಲದ ಸೊಗಡನ್ನು ಎಲ್ಲೆಡೆ ಪಸರಿಸುವಲ್ಲಿ ಅಪಾರ ಕೊಡುಗೆಯನ್ನು ನೀಡಿದೆ’’ ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕಲಾಪೋಷಕ ಜೆರಾಲ್ಡ್ ಡಿಸಿಲ್ವ ಅವರು ‘’ಕೊರೋನದ ಕ್ಲಿಷ್ಟಕರ ಪರಿಸ್ಥಿಯಲ್ಲಿ ರಂಗಭೂಮಿ ಕಲಾವಿದರ ಬಗ್ಗೆ ಸರಕಾರ ಗಮನ ಹರಿಸಲಿಲ್ಲ ಎಂದು ಕೊರೋನಾದಿಂದ ಸದ್ಯ ನಾಟಕ ತಂಡದ ಪರಿಸ್ಥಿತಿ ಬಗ್ಗೆ ಖೇದ ವ್ಯಕ್ತಪಡಿಸಿದರು’’. ಹಾಗೂ ನಾಟಕ ಪರ್ಬಕ್ಕೆ ಸಹಕರಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯನ್ನು ಅಭಿನಂದಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್ಸಾರ್ ಅವರು ‘’ಕಲಾವಿದರೆಲ್ಲರೂ ಗುಂಪುಗಳಾಗಿ ಹಂಚಿ ಬೇರ್ಪಡದೆ ಒಗ್ಗಟ್ಟಾಗಿ ಇದ್ದರೆ ಸರಕಾರದ ಸವಲತ್ತುಗಳನ್ನು ಪಡೆಯುವಲ್ಲಿ ಸಹಾಯವಾಗುತ್ತದೆ. ಈ ಮಣ್ಣಿನ ಸಂಸ್ಕøತಿಯ ಕಂಪನ್ನು ದೇಶ ವಿದೇಶದಲ್ಲಿ ಪಸರಿಸಿದ ಕೀರ್ತಿ ಕಲಾವಿದರಿಗೆ ಸಲ್ಲತಕ್ಕದ್ದು, ತುಳು ಅಕಾಡೆಮಿಯು ಕಲೆ ಕಲಾವಿದರಿಗಾಗಿ ಅವಿರತವಾಗಿ ದುಡಿಯುವುದು’’ ಎಂದು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ನಮ್ಮ ಟಿವಿ ನಿರೂಪಕರಾದ ನವೀನ್ ಶೆಟ್ಟಿ ಎಡ್ಮೆಮಾರ್, ರೋಶನ್ ಉಪಸ್ಥಿತರಿದ್ದರು ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ನಾಗೇಶ್ ಕುಲಾಲ್, ಚೇತಕ್ ಪೂಜಾರಿ, ನಿಟ್ಟೆ ಶಶಿಧರ್ ಶೆಟ್ಟಿ ಭಾಗವಹಿಸಿದ್ದರು. ಅಕಾಡೆಮಿ ಸದಸ್ಯ ಕಡಬ ದಿನೇಶ್ ರೈ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಕಲಾಪೋಷಕ ಜೆರಾಲ್ಡ್ ಡಿಸಿಲ್ವರನ್ನು ಹಾಗೂ ರಂಗಭೂಮಿ, ಯಕ್ಷಗಾನ ಕಲಾವಿದ ಪ್ರಶಾಂತ್ ಸಿ.ಕೆ ಇವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಸಿಂಧೂರ ಕಲಾವಿದೆರ್ ಕಾರ್ಲ ಇವರಿಂದ ‘’ಪನೊಡಿತ್ತ್ಂಡ್ ಸ್ಸಾರಿ’’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಿತು.


Spread the love

Exit mobile version