Home Mangalorean News Kannada News ಕಲೆಯ ಅಭಿವೃದ್ಧಿಗೆ ವೇದಿಕೆ ಅಗತ್ಯ

ಕಲೆಯ ಅಭಿವೃದ್ಧಿಗೆ ವೇದಿಕೆ ಅಗತ್ಯ

Spread the love

ಕಲೆಯ ಅಭಿವೃದ್ಧಿಗೆ ವೇದಿಕೆ ಅಗತ್ಯ

ಹಚ್ಚ ಹಸಿರ ಪ್ರಕೃತಿ ಮಡಿಲಲ್ಲಿ ಹಕ್ಕಿಗಳ ಚಿಲಿಪಿಲಿ ನಾದದೊಂದಿಗೆ ಕೊರಗರ ಡೋಲಿನ ನಾದ ಪ್ರತಿಧ್ವನಿಸುತ್ತಿತ್ತು. ಇದಕ್ಕೆ ಕಾರಣ, ಗುರುವಾರ ಪ್ರಾಚಿ ಫೌಂಡೇಶನ್ ಹಾಗೂ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ಕಾರ್ಕಳದ ಮಣ್ಣಪಾಪು ಮನೆಯಲ್ಲಿ ಮೂರು ದಿನಗಳ ಕಾಲ ನಡೆದ ತಳ- ತಾಳ ಕಾರ್ಯಕ್ರಮದ ಸಮಾರೋಪ ಸಮಾರಂಭ.

ನಶಿಸುತ್ತಿರುವ ಕೊರಗ ಸಮುದಾಯದ ಕಲಾ ಪ್ರಕಾರಗಳನ್ನು ಮುಂದಿನ ಪೀಳಿಗೆಗೆ ದಾಖಲಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೊರಗ ಸಮುದಾಯದ ಭಾಷೆ, ಕಲೆ ನಶಿಸುತ್ತಿರುವ ಇಂತಹ ಸಂದರ್ಭದಲ್ಲಿ ಉತ್ತಮ ವೇದಿಕೆ ಸಿಕ್ಕರೆ ಕೊರಗ ಸಮುದಾಯದ ಕಲಾ ಪ್ರಕಾರ ಇತರ ಕಲಾ ಪ್ರಕಾರಗಳ ಜೊತೆಗೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬಹುದು ಎಂಬುದು ನೆರೆದಿದ್ದವರ ಒಕ್ಕೊರಳಿನ ಅಭಿಪ್ರಾಯವಾಗಿತ್ತು.

ಕೊರಗರು ತಮ್ಮದೇ ಆದ ತಂಡಗಳನ್ನು ರಚಿಸಿ, ಹಿರಿಯರಿಂದ ಬಂದ ಕಲಾ ಪ್ರಕಾರಗಳನ್ನು ಉಳಿಸಿ, ಬೆಳೆಸಿಕೊಳ್ಳುತ್ತಿದ್ದು, ಮೂಲ ಕಲೆಗೆ ಯಾವುದೇ ಧಕ್ಕೆ ಬಾರದಂತೆ ಚೌಕಟ್ಟನ್ನು ರಚಿಸಿ , ಮುಂದಿನ ಪೀಳಿಗೆಗೆ ದಾಖಲಿಸುವ ಪ್ರಯತ್ನ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಭೆಗಳು ಬೆಳಕಿಗೆ ಬಂದು ತಮ್ಮ ಸಮುದಾಯದ ಕಲಾ ಪ್ರಕಾರಗಳನ್ನು ಹೆಮ್ಮೆಯಿಂದ ತಮ್ಮದಾಗಿಸಿಕೊಳ್ಳುವಂತಾಗಬೇಕು. ಈ ಮೂಲಕ ಕೊರಗರ ಡೋಲು ಕೇವಲ ದೇವಸ್ಥಾನದ ಹೊರಗೆ ಮಾತ್ರ ಪ್ರದರ್ಶಿಸಲು ಅಲ್ಲ, ಅದನ್ನು ಇತರ ಕಲೆಗಳಂತೆ ವೇದಿಕೆಯಲ್ಲಿ ಪ್ರದರ್ಶಿಸಲು ಸಾಧ್ಯ ಎಂಬುದನ್ನು ಹೊರ ಜಗತ್ತಿಗೆ ತೋರಿಸಿಕೊಡುವಂತಾಗಬೇಕು.

3 ದಿನಗಳ ಕಾಲ ನಡೆದ ತರಬೇತಿಯಲ್ಲಿ ಸಂಗೀತ ಸಂಯೋಜಕ ಪ್ರವೀಣ್ ಡಿ ರಾವ್ 15 ಕೊರಗ ಯುವಕರಿಗೆ ತರಬೇತಿ ನೀಡಿದ್ದು, ಪಾರಂಪರಿಕ ಕಲೆಗೆ ಒಂದು ಚೌಕಟ್ಟು ರಚಿಸಿ, ಕಲಿಸುವ ಪ್ರಯತ್ನ ನಡೆಸಲಾಯಿತು. ಇತರ ಕಲಾ ಪ್ರಕಾರಗಳಂತೆ ವೇದಿಕೆಯಲ್ಲಿ ಕೊರಗ ಡೋಲು ನಾದ ಪ್ರದರ್ಶಿಸಲು ಅವಕಾಶ ಸಿಗುವಂತಾಗಬೇಕು ಎಂಬುದು ಕೊರಗ ಸಮುದಾಯದ ಆಶಯ. ಕೊರಗರ ಡೋಲು ನಾದದ ನುಡಿಸಾಣಿಕೆಯಲ್ಲಿ ಕಠಿಣತೆ ಇದ್ದು ಪ್ರಬುದ್ಧತೆಯನ್ನು ಹೊಂದಿದೆ. ಈ ಕಲೆಯನ್ನು ಭದ್ರ ಪಡಿಸಬೇಕು. ಈ ಮೂಲಕ ಕೊರಗ ಡೋಲು ಹೊರ ಜಗತ್ತಿಗೆ ಪರಿಚಯಿಸಲು ಸಾಧ್ಯವಾಗುತ್ತದೆ ಎಂಬುದು ಹಲವರ ಅಭಿಪ್ರಾಯ.

ಈ ತರಬೇತಿಯು ಕೊರಗ ಸಮುದಾಯದ ಸಾಂಸ್ಕøತಿಕ ಕಲಾ ಪ್ರಕಾರಗಳ ದಾಖಲಿಸುವಿಕೆಗೆ ಮುನ್ನುಡಿ ಬರೆದಿದ್ದು, ಗುರುವಾರ ಮಣ್ಣಪಾಪುವಿನಲ್ಲಿ ಪ್ರತಿಧ್ವಿನಿಸಿದ ಡೋಲು ನಾದ ಕಾರ್ಯಕ್ರಮದ ಸಾರ್ಥಕತೆಯನ್ನು ತೋರುತ್ತಿತ್ತು.

ಕಾರ್ಯಕ್ರಮ ಸಂಯೋಜಕರಾದ ಪ್ರಾಚಿ ಫೌಂಡೇಶನ್ನ ಪುರುಷೋತ್ತಮ ಅಡ್ವೆ, ಸಂಗೀತ ತಜ್ಞರಾದ ವಾರಿಜಶ್ರೀ, ಪ್ರಮತ್ ಕಿರಣ್, ಐಟಿಡಿಪಿಯ ವ್ಯವಸ್ಥಾಪಕ ವಿಶ್ವನಾಥ್, ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಅರುಣ್ ಕುಮಾರ್, ಕೊರಗ ಸಮುದಾಯದ ಗಣೇಶ್ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.


Spread the love

Exit mobile version