ಕಲ್ಮಾಡಿ ಚರ್ಚಿನ ಜಿರ್ಣೋದ್ದಾರಕ್ಕೆ ಸರಕಾರದಿಂದ ರೂ.20 ಲಕ್ಷ ಅನುದಾನ
ಉಡುಪಿ:ಉಡುಪಿ ತಾಲೂಕಿನ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಜೀರ್ಣೋದ್ಧಾರ ಹಾಗೂ ನವೀಕರಣ ಕಾಮಗಾರಿಗೆ ಕರ್ನಾಟಕ ಸರಕಾರದ ಅಲ್ಪಸಂಖ್ಯಾತ ಇಲಾಖೆಯ ಮೂಲಕ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯಿಂದ ಮಂಜೂರಾದ ರೂ 20 ಲಕ್ಷ ಅನುದಾನವನ್ನು ಉಡುಪಿಯ ವಿಧಾನಸಭಾ ಕ್ಷೇತ್ರದ ಶಾಸಕರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಮೋದ್ ಮಧ್ವರಾಜ್ ಅವರು ಉಡುಪಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಸಂಚಾಲಕರಾದ ಲೂವಿಸ್ ಲೋಬೊರವರಿಗೆ ಹಸ್ತಾಂತರಿಸಿದರು.
ವೇದಿಕೆಯಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಆಯುಕ್ತರಾದ ಮಂಜುನಾಥಯ್ಯ, ತಹಶೀಲ್ದಾರ್ ಮಹೇಶ್ಚಂದ್ರ, ಹಾಗೂ ಇತರರು ಉಪಸ್ಥಿತರಿದ್ದರು.
ಅಂದಾಜು ರೂ 5 ಕೋಟಿ ವೆಚ್ಚದಲ್ಲಿ ತಲೆ ಎತ್ತಲಿರುವ ಕರ್ನಾಟಕದ ಪ್ರಥಮ ಎನಿಸಲಿರುವ ವಿನೂತನ ಶೈಲಿಯ ಬೋಟ್ ಆಕಾರದ ಜೀರ್ಣೋದ್ಧಾರಗೊಂಡಿರುವ ದೇವಾಲಯ, ಧರ್ಮಗುರುಗಳ ನೂತನ ವಾಸದ ಮನೆ, ಆಫೀಸು, ಗಂಟಾ ಗೋಪುರ, ಹಾಗೂ ವೆಲಂಕಣಿ ಮಾತೆಯ ಗ್ರೊಟ್ಟೊ ಮುಂದಿನ ವರ್ಷದ ಜನವರಿ 6ರಂದು ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ.
ಸರಕಾರದ ಅನುದಾನ ದೊರಕಿಸಲು ಸಹಕರಿಸಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ, ಮುಖ್ಯ ಸಚೆತಕ ಐವನ್ ಡಿಸೋಜ, ಇಲಾಖೆಯ ಸರ್ವರಿಗೂ ಧರ್ಮಗುರು ವಂ ಆಲ್ಬನ್ ಡಿಸೋಜಾ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.