ಕಲ್ಮಾಡಿ ವೆಲಂಕಣಿ ಮಾತೆಯ ಪ್ರತಿಷ್ಠಾಪನಾ ಮಹೊತ್ಸವ ನೊವೆನಾ ಪ್ರಾರ್ಥನೆಗೆ ಚಾಲನೆ
ಉಡುಪಿ: ಕಲ್ಮಾಡಿ ವೆಲಂಕಣಿ ಮಾತೆಯ ಪ್ರತಿಷ್ಠಾಪನೋತ್ಸವವು ಆಗೋಸ್ಟ್ 15 ರಂದು ವಿಜೃಂಭಣೆಯಿಂದ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಅಗೋಸ್ತ್ 6 ರಂದು ಮಂಗಳವಾರ ನೊವೆನಾ ಪ್ರಾರ್ಥನೆಗೆ ಚಾಲನೆ ನೀಡಲಾಯಿತು.
ಮಂಗಳೂರು ಸಂತ ಜೋಸೆಫ್ ಸೆಮನರಿಯ ರೆಕ್ಟರ್ ವಂ| ರೊನಾಲ್ಡ್ ಸೆರಾವೋ ಅವರು ಚರ್ಚಿನ ಆವರಣದಲ್ಲಿ ಸ್ಥಾಪಿಸಲಾದ ನೂತನ ಮಾನಸ್ಥಂಭದಲ್ಲಿ ವೆಲಂಕಣಿ ಮಾತೆಯ ಬಾವುಟವನ್ನು ಏರಿಸುವುದರ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ಮೇರಿ ಮಾತೆ ತನ್ನ ಪ್ರೀತಿ ಮತ್ತು ಸೇವಾ ಮನೋಭಾವದಿಂದ ಲೋಕಕ್ಕೆ ಮಾದರಿಯಾದವರು. ಅವರು ತಮ್ಮ ಜೀವನದಲ್ಲಿ ಸದಾ ವಿಶ್ವಾಸಯುಕ್ತ ವ್ಯಕ್ತಿಯಾಗಿ ಬದುಕಿದ್ದು ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಸದಾ ಅಳವಡಿಸುವುದರೊಂದಿಗೆ ಕುಟುಂಬಗಳನ್ನು ವಿಶ್ವಾಸದ ಬದುಕಿಗೆ ದಾರಿಯಾಗಿಸಿಕೊಳ್ಳಬೇಕು ಎಂದರು.
ಉಡುಪಿ ವಲಯದ ಪ್ರಧಾನ ಧರ್ಮಗುರು ವಂ|ವಲೇರಿಯನ್ ಮೆಂಡೊನ್ಸಾ, ಕಲ್ಮಾಡಿ ಚರ್ಚಿನ ಧರ್ಮಗುರು ವಂ| ಆಲ್ಬನ್ ಡಿಸೋಜಾ, ವಾರ್ಷಿಕ ಮಹೋತ್ಸವ ಕಾರ್ಯಕ್ರಮದ ಸಂಚಾಲಕ ವಂ| ಪ್ರವೀಣ್ ಮೊಂತೆರೋ, ಅತಿಥಿ ಧರ್ಮಗುರು ವಂ|ಚಾಲ್ರ್ಸ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೋನ್ಸಾ, 18 ಆಯೋಗಗಳ ಸಂಚಾಲಕ ಫ್ರಾನ್ಸಿಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
9 ದಿನಗಳ ನೊವೇನಾ ಸಮಯದಲ್ಲಿ ವಿಶೇಷÀ ಉದ್ಧೇಶಗಳಿಗೋಸ್ಕರ ಪ್ರಾರ್ಥನೆಗಳನ್ನು ಮಾಡಲಾಗುವುದು. ಅಗೋಸ್ಟ್ 14 ರಂದು ಮಧ್ಯಾಹ್ನ 2.45 ಕ್ಕೆ ಆದಿಉಡುಪಿ ಜಂಕ್ಷನ್ (ರೀಗಲ್ ನೆಕ್ಸ್ಟ್ ಅಪಾಟ್ಮೆಂಟ್ ಎದುರು) ನಿಂದ ಕಲ್ಮಾಡಿ ಚರ್ಚ್ ವರೆಗೆ ಮಾತೆಯ ತೇರಿನ ಮೆರವಣಿಗೆ ನಡೆಯಲಿರುವುದು. ತೇರಿನ ಮೆರವಣಿಗೆ ಚಾಲನೆ ನೀಡುವವರು ಸನ್ಮಾನ್ಯ ಶ್ರೀ ಐವನ್ ಡಿಸೋಜ, ವಿಧಾನ ಪರಿಷತ್ ಶಾಸಕರು, ಕರ್ನಾಟಕ ಸರ್ಕಾರ, ತದನಂತರ 4 ಗಂಟೆಗೆ ಪ್ರಾರ್ಥನಾ ಮತ್ತು ಬಲಿಪೂಜೆಯನ್ನು ನೆರವೇರಿಸಲಿರುವರು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಪರಮಪೂಜ್ಯ ಡಾಕ್ಟರ್ ಪೀಟರ್ ಪಾವ್ಲ್ ಸಲ್ಡಾನರವರು
ಅಗೋಸ್ತ್ 15 ರಂದು ಸಾಂಭ್ರಮಿಕ ಬಲಿಪೂಜೆ ನಡೆಯಲಿರುವುದು. ಈ ದಿನದಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ/ವಂ/ಡಾ/ ಜೆರಾಲ್ಡ್ ಐಸಾಕ್ ಲೋಬೋ ರವರು ಪಾಲ್ಗೊಳ್ಳಲಿರುವರು. ಆ ದಿನದಂದು ಬೆಳಗ್ಗೆ 8 ಗಂಟೆಗೆ ಕೊಂಕಣಿಯಲ್ಲಿ ದಿವ್ಯ ಬಲಿಪೂಜೆ ನಡೆಯಲಿದ್ದು ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವು ನಡೆಯಲಿರುವುದು. ಅದೇ ದಿನ ಮಧ್ಯಾಹ್ನ 2 ಗಂಟೆಗೆ ಕೊಂಕಣಿಯಲ್ಲಿ, ಸಂಜೆ 6 ಗಂಟೆಗೆ ಕನ್ನಡದಲ್ಲಿ ಹಾಗೂ ರಾತ್ರಿ 8 ಗಂಟೆಗೆ ಇಂಗ್ಲಿಷ್ ನಲ್ಲಿ ದಿವ್ಯ ಬಲಿಪೂಜೆಗಳು ನಡೆಯಲಿರುವುದು. ಬಲಿಪೂಜೆಯ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಲಘು ಉಪಹಾರ ವ್ಯವಸ್ಥೆಯನ್ನು ಮಾಡಲಾಗಿದೆ.