Home Mangalorean News Kannada News ಕಲ್ಲಡ್ಕ ಗಲಭೆ ಮತ್ತು ಎಸ್.ಡಿ.ಪಿ.ಐ ಕಾರ್ಯಕರ್ತನ ಅಶ್ರಫ್ ಕೊಲೆ ಡಿವೈಎಫ್ ಖಂಡನೆ

ಕಲ್ಲಡ್ಕ ಗಲಭೆ ಮತ್ತು ಎಸ್.ಡಿ.ಪಿ.ಐ ಕಾರ್ಯಕರ್ತನ ಅಶ್ರಫ್ ಕೊಲೆ ಡಿವೈಎಫ್ ಖಂಡನೆ

Spread the love

ಕಲ್ಲಡ್ಕ ಗಲಭೆ ಮತ್ತು ಎಸ್.ಡಿ.ಪಿ.ಐ ಕಾರ್ಯಕರ್ತನ ಅಶ್ರಫ್ ಕೊಲೆ ಡಿವೈಎಫ್ ಖಂಡನೆ
ಮಂಗಳೂರು: ಕಲ್ಲಡ್ಕ ಗಲಭೆಯ ಉದ್ವಿಗ್ನತೆ ಮುಂದುವರಿದಿರುವ ಸಂದರ್ಭದಲ್ಲಿಯೇ ಬೆಂಜನಪದವು ಬಳಿ ನಡೆದಿರುವ ಎಸ್.ಡಿ.ಪಿ.ಐ ಕಾರ್ಯಕರ್ತ ಅಶ್ರಫ್ ಕೊಲೆ ಆತಂಕಕಾರಿ. ಈ ಬರ್ಬರ ಕೊಲೆಯನ್ನು ಡಿವೈಎಫ್ ತೀವ್ರವಾಗಿ ಖಂಡಿಸುತ್ತದೆ. ಕೊಲೆಯ ಹಿಂದಿರುವ ಶಕ್ತಿಗಳನ್ನು ಬಯಲಿಗೆಳೆಯಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತದೆ ಎಂದು ಡಿವೈಎಫ್ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕೋಮುರಾಜಕಾರಣ, ಪ್ರತೀಕಾರದ ಸರಣಿ ಕೊಲೆಗಳನ್ನು ತಡೆಗಟ್ಟುವಲ್ಲಿ ಸರಕಾರದ ವೈಫಲ್ಯ ಜಿಲ್ಲೆಯ ಜನರು ಆತಂಕದ ನೆರಳಿನಲ್ಲಿಯೇ ಬದುಕುವಂತೆ ಮಾಡಿದೆ. ಕಳೆದ ಒಂದು ದಶಕದಲ್ಲಿ ಗುರುಪುರ, ಪೊಳಲಿ, ಮಲ್ಲೂರು, ಬೆಂಜನಪದವು ಭಾಗದಲ್ಲಿ ಕನಿಷ್ಟ ಏಳೆಂಟು ಮತೀಯ ಹಿನ್ಬಲೆಯ ಪ್ರತೀಕಾರದ ಕೊಲೆಗಳು ನಡೆದಿವೆ. ಆದರೂ ಪೊಲೀಸ್ ಇಲಾಖೆಯ ಇಚ್ಚಾಶಕ್ತಿಯ ಕೊರತೆಯಿಂದಾಗಿ ಇಂತಹ ಕೊಲೆಗಳಿಗೆ ಪೂರ್ಣವಿರಾಮ ಹಾಕಲು ಸಾಧ್ಯವಾಗಿಲ್ಲ. ಇದರಿಂದಾಗಿ ಜಿಲ್ಲೆಯ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಿದೆ. ಜನತೆ ಸದಾ ಭಯದಿಂದ ಜೀವನ ಸಾಗಿಸುವಂತಾಗಿದೆ. ಈಗಲಾದರೂ ಸರಕಾರ ಎಚ್ಚೆತ್ತುಕೊಳ್ಳಬೇಕು. ಕೋಮುಸೂಕ್ಷ್ಮತೆಯನ್ನು ನಿಭಾಯಿಸಬಲ್ಲ ವಿಶೇಷ ತರಬೇತಿ ಹೊಂದಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಜಿಲ್ಲೆಯಲ್ಲಿ ನಿಯೋಜಿಸಬೇಕು ಎಂದು ಮುನೀರ್ ಕಾಟಿಪಳ್ಳ ಸರಕಾರವನ್ನು ಒತ್ತಾಯಿಸಿದ್ದಾರೆ. ಅಶ್ರಫ್ ಕಲಾಯಿ ಕೊಲೆ ಪ್ರಕರಣದಲ್ಲಿಯೂ ಮತೀಯ ರಾಜಕಾರಣದ ಲಕ್ಷಣಗಳು ಮೇಲ್ನೋಟಕ್ಕೆ ಗೋಚರಿಸುತ್ತಿದ್ದು ಪ್ರಕರಣದ ತನಿಖೆಯನ್ನು ದಕ್ಷ ಅಧಿಕಾರಿಗಳ ತಂಡಕ್ಕೆ ಹಸ್ತಾಂತರಿಸಬೇಕು ಹಾಗೂ ಪ್ರಕರಣ ಹಿಂದಿರುವ ಎಲ್ಲಾ ಶಕ್ತಿಗಳನ್ನು ಬಯಲಿಗೆಳೆಯಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ. ಅದೇ ಸಂದರ್ಭ ಸಾರ್ವಜನಿಕರು ಗರಿಷ್ಟ ಸಂಯಮದಿಂದ ನಡೆದುಕೊಳ್ಳುವ ಮೂಲಕ ಶಾಂತಿ ಕಾಪಾಡಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜನತೆಯಲ್ಲಿ ಅವರು ಮನವಿ ಮಾಡಿದ್ದಾರೆ.


Spread the love

Exit mobile version