ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಶರಣ್ ಪಂಪುವೆಲ್ನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಿ : – ಎಸ್.ಡಿ.ಪಿ.ಐ
ಮಂಗಳೂರು: ರಾಜ್ಯ ಸರಕಾರ ಅಶ್ರಫ್ ಕೊಲೆ ಪ್ರಕರಣವನ್ನು ಗಂಬೀರ ಪ್ರಕರಣವೆಂದೂ ಪರಿಗಣಿಸಿ ಕೋಮು ದ್ವೇಷವನ್ನು ಕಾರುವ ಸಂಘಪರಿವಾರದ ಕಾರ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಶೇಷ ಕಾನೂನು ಪಾಲನಾ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಜ್ಯಾರಿಗೊಳಿಸಿ ಅಲ್ಪ ಸಂಖ್ಯಾತರ ರಕ್ಷಣೆಯ ಜವಾಬ್ದಾರಿಯನ್ನು ಈಡೇರಿಸಿಕೊಳ್ಳಬೇಕೆಂದು ಎಸ್.ಡಿ.ಪಿ.ಐ ಪಕ್ಷವು ಆಗ್ರಹಿಸುತ್ತದೆ. ಇಲ್ಲವಾದಲ್ಲಿ ಎಸ್.ಡಿ.ಪಿ.ಐ ಪಕ್ಷದ ವತಿಯಿಂದ ಎಲ್ಲಾ ಸಂಘ ಸಂಸ್ಥೆಗಳನ್ನು ಸೇರಿಸಿ ಜಿಲ್ಲೆಯ ಸಾಮರಸ್ಯಕ್ಕಾಗಿ ಜನತೆಯ ಒಕ್ಕೂಟ ಎಂಬ ಘೋಷಣೆಯೊಂದಿಗೆ ‘ಕಲ್ಲಡ್ಕ ಚಲೋ’ ಬೃಹತ್ ಜನಾಂದೋಲನವನ್ನು ರೂಪಿಸುವುದಾಗಿ ಹಾಗೂ ಹೆದ್ದಾರಿ ಬಂದ್ ಮತ್ತು ಜಿಲ್ಲಾದಿಕಾರಿ ಕಛೇರಿಗೆ ಮುತ್ತಿಗೆಯಂತಹ ಬೃಹತ್ ಸ್ವರೂಪದ ಪ್ರತಿಭಟನೆಗಳನ್ನು ನಡೆಸಲು ನಿರ್ಧರಿಸಿದೆ ಎಂದು ಎಸ್ ಡಿ ಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಜೂನ್ 21 ಬೆಳಿಗ್ಗೆ ಸುಮಾರು 11 ಗಂಟೆಯ ಸಮಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಕಲಾಯಿ ಖೈಬರ್ ನಗರ ನಿವಾಸಿಯಾದ ದಿ/ಶೇಕಬ್ಬ ಎಂಬವರ ಪುತ್ರ ಅಟೋ ಚಾಲಕ ವೃತ್ತಿಯ ಜೊತೆಗೆ ಸಮಾಜ ಸೇವೆಯಲ್ಲಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಮಹಮ್ಮದ್ ಅಶ್ರಫ್ (33) ಎಂಬವರನ್ನು ಸಂಘ ಪರಿವಾರದ ದುಷ್ಕರ್ಮಿಗಳು ಬೆಂಜನ ಪದವಿನ ರಾಮನಗರ ಎಂಬಲ್ಲಿ ಕೋಮು ದ್ವೇಷದಿಂದ ಕೊಲೆಗೈದಿರುತ್ತಾರೆ. ಇವರು ಎಸ್.ಡಿ.ಪಿ.ಐ ಪಕ್ಷದ ಅಮ್ಮುಂಜೆ ಪ್ರದೇಶದ ವಲಯಾಧ್ಯಕ್ಷರಾಗಿರುತ್ತಾರೆ.
ಮುಹಮ್ಮದ್ ಅಶ್ರಫ್ರವರನ್ನು ಬರ್ಬರವಾಗಿ ಹತ್ಯೆಗೈದ ಆರೋಪಿಗಳಾದ ಸಂಘಪರಿವಾರದ ಕಾರ್ಯಕರ್ತರನ್ನು ದ.ಕ ಜಿಲ್ಲಾ ಪೊಲೀಸರು ಕೇವಲ 3 ದಿನದ ಒಳಗಾಗಿ ಬಂಧಿಸಿ ತಮ್ಮ ಕರ್ತವ್ಯ ನಿಷ್ಠೆಯನ್ನು ತೋರ್ಪಡಿಸಿರುತ್ತಾರೆ. ಕೊಲೆಯ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಪವನ್ ಕುಮಾರ್ (24), ಸಂತೋಷ್ (23), ಶಿವ ಪ್ರಸಾದ್ (24), ರಂಜಿತ್ (28), ಅಭೀನ್ ರೈ (23), ದಿವ್ಯರಾಜ್ (27) ಇವೆರೆಲ್ಲರೂ ಕೂಡಾ ಸಂಘ ಪರಿವಾರದ ಅಂಗ ಸಂಸ್ಥೆಯಾದ ಬಜರಂಗ ದಳ ಮತ್ತು ವಿಶ್ವ ಹಿಂದು ಪರಿಷತ್ ನ ಕಾರ್ಯ ಕರ್ತರಾಗಿರುತ್ತಾರೆ. ಹಾಗೂ ತಲೆ ಮರೆಸಿ ಕೊಂಡಿರುವ ಭರತ್ ಕುಮಾರ್(32) ಇವನು ಕೂಡಾ ಬಜರಂಗ ದಳದ ಕಾರ್ಯಕರ್ತನಾಗಿದ್ದು ಬಂಟ್ವಾಳ ತಾಲೂಕು ಗೋ ರಕ್ಷಾ ಪ್ರಮುಖ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.
ಆದ್ದರಿಂದ ಈ ಘಟನೆಯು ಸಂಘ ಪರಿವಾರ ಪ್ರಾಯೋಜಿತ ಮತ್ತು ಪೂರ್ವ ನಿಯೋಜಿತ ಕೃತ್ಯ ಎಂಬುದು ಸ್ಪಷ್ಟವಾಗುತ್ತದೆ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಜ್ವಾಲೆಯನ್ನು ಹಬ್ಬಿಸಿ ಮತೀಯ ಸಂಘರ್ಷ ಹುಟ್ಟು ಹಾಕಿ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆದು ದ.ಕ ಜಿಲ್ಲೆಯಲ್ಲಿ ಬಿ.ಜೆ.ಪಿ ಯ ಸೀಟು ಗಳಿಕೆಯ ಪ್ರಮಾಣವನ್ನು ಹೆಚ್ಚಿಸುವ ಹುನ್ನಾರವು ಅಡಗಿರುತ್ತದೆ. ಆದ್ದರಿಂದ ಈ ಕೊಲೆಯ ಘಟನೆಯು ಬಂಧನಕ್ಕೆ ಒಳಗಾಗಿರುವ ಆರೋಪಿಗಳು ಮತ್ತು ತಲೆ ಮರೆಸಿಕೊಂಡಿರುವ ಭರತ್ ಕುಮಾರ್ ಸೇರಿಕೊಂಡು ಮಾತ್ರ ಮಾಡಿರುವ ಕೃತ್ಯ ಅಲ್ಲ ಈ ಕೊಲೆಯಲ್ಲಿ ನೇರ ಭಾಗಿಯಾಗಿರುವ ವ್ಯಕ್ತಿಗಳು ಬಂದಿತ ಆರೋಪಿಗಳಾಗಿದ್ದರೂ ಕೂಡಾ ಇವರಿಗೆ ಆರ್ಥಿಕ ಸಹಾಯ, ಕೊಲೆಯ ಮೊದಲು ಕೋಮು ದ್ವೇಷದ ಮೂಲಕ ಪ್ರಚೋದನೆ ನೀಡಿದವರು ಹೀಗೆ ಆರೋಪಿಗಳ ಸಂಖ್ಯೆಯು ಹೆಚ್ಚುತ್ತದೆ. ಆದರೆ ಪೊಲೀಸ್ ಅಧಿಕಾರಿಗಳು ದ.ಕ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮಾತ್ರ ಈ ಕೊಲೆಯ ಬಗ್ಗೆ ಆಳವಾಗಿ ತನಿಖೆಯನ್ನು ನಡೆಸುವಂತೆ ಕಾಣುತ್ತಿಲ್ಲ ಕೊಲೆ ಆರೋಪಿಗಳನ್ನು ಕೇವಲ 6ಕ್ಕೆ ಸೀಮಿತಗೊಳಿಸುವಂತೆ ಕಾಣುತ್ತದೆ ಹಾಗೂ ದುರ್ಬಲವಾದ ಎಫ್.ಐ.ಆರ್ ಮತ್ತು ಹೇಳಿಕೆಗಳನ್ನು ದಾಖಲಿಸಿರುವುದು ಪೋಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ದಾಖಲೆಯಿಂದ ತಿಳಿದು ಬರುತ್ತದೆ.
ಈ ಕೊಲೆ ಪ್ರಕರಣ ಕೇವಲ 6 ಮಂದಿ ಸೇರಿ ಚರ್ಚೆ ಮಾಡಿ ಒಂದು ಸಣ್ಣ ಅವಧಿಯಲ್ಲಿ ಅಲ್ಲ ಏಕೆಂದರೆ ಈ ಕೊಲೆ ನಡೆಯುವ 3 ತಿಂಗಳ ಮೊದಲು ಬಂಟ್ವಾಳ ಆಸು ಪಾಸಿನಲ್ಲಿ ಮುಸ್ಲಿಮರ ಮೇಲಿನ ದಾಳಿಯು ಹಲವು ಪ್ರಕರಣಗಳು ನಡೆದಿರುತ್ತದೆ. ಪುದು ಗ್ರಾಮ ಪಂಚಾಯತ್ ಮಾಜಿ ಸದಸ್ಯನಿಗೆ ಬಜರಂಗದಳ ದಿಂದ ಬೆದರಿಕೆ ಪತ್ರ ಗ್ರಾಮ ಪಂಚಾಯತ್ ನ ವಾಟರ್ ಮೆನ್ ಕರೀಂ ಎಂಬಾತನ ಕೊಲೆ ಯತ್ನ, ಕಲ್ಲಡ್ಕದಲ್ಲಿ 2 ಬಾರಿ ಚೂರಿ ಇರಿತ ಪ್ರಕರಣ, ತುಂಬೆಯಲ್ಲಿ ಚೂರಿ ಇರಿತ ಪ್ರಕರಣ ಈ ಎಲ್ಲಾ ಪ್ರಕರಣಗಳು ಕೂಡಾ ದೂರು ದಾಖಲಾಗಿದ್ದು ಪೊಲೀಸರ ನಿಷ್ಕøಯತೆ ಮತ್ತು ದ್ವಿಮುಖ ದೋರಣೆಗಳಿಂದ ಅಶ್ರಫ್ ಕೊಲೆಯೊಂದಿಗೆ ಸಂಘ ಪರಿವಾರದವರು ತಮ್ಮ ಅಜೆಂಡಾವನ್ನು ಪೂರ್ತಿ ಗೊಳಿಸಿರುತ್ತಾರೆ. ಅಂದರೆ ಈ ಕೊಲೆಯ ಹಿಂದೆ ಸಂಘ ಪರಿವಾರದ ದೊಡ್ಡ ದೊಡ್ಡ ವ್ಯಕ್ತಿಗಳು ಈ ಕೊಲೆಯ ಸೂತ್ರಧಾರಿಗಳಾಗಿರುತ್ತಾರೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
ಆದ್ದರಿಂದ ಈ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಯಾಗಿರುವ ಭರತ್ ಕುಮಾರ್ ನೊಂದಿಗೆ ದಿನಾಂಕ 15-06-2017ರಂದು ಮಂಗಳೂರಿನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ , ಶರಣ್ ಪಂಪುವೆಲ್, ಪದ್ಮನಾಭ ಕೊಟ್ಟಾರಿ ಮತ್ತು ಇತರ ನಾಯಕರು ಸೇರಿ ಪತ್ರಿಕಾ ಗೋಷ್ಠಿಯನ್ನು ನಡೆಸಿರುವುದನ್ನು ನೋಡಿದರೆ ಭರತ್ ಕುಮಾರ್ ನನ್ನು ಇದೇ ನಾಯಕರು ಸೇರಿ ಕೊಲೆ ಪ್ರಕರಣದಲ್ಲಿ ತಮ್ಮ ಬಣ್ಣ ಬಯಲಾಗಬಹುದೆಂಬ ಭಯದಿಂದ ತಲೆ ಮರೆಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುತ್ತಾರೆ ಮತ್ತು ಕೊಲೆ ಪ್ರಕರಣದಂತಹ ಗಂಬೀರ ಪ್ರಕರಣದ ಆರೋಪಿಗೆ ಆಶ್ರಯವನ್ನು ನೀಡಿರುತ್ತಾರೆ ಎಂಬುದು ಎಸ್.ಡಿ.ಪಿ.ಐ ಪಕ್ಷದ ಆರೋಪವಾಗಿರುತ್ತದೆ.
ಆದ್ದರಿಂದ ದ.ಕ ಜಿಲ್ಲೆಯ ದಕ್ಷ ಪೊಲೀಸ್ ಅಧಿಕಾರಿಗಳು ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗದೆ ಕೊಲೆ ಆರೋಪಿಯೊಂದಿಗೆ ನೇರ ಸಂಪರ್ಕ ದಲ್ಲಿದ್ದ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪುವೆಲ್ ಕೂಡಲೇ ಬಂಧಿಸಿ ವಿಚಾರಣೆ ಒಳಪಡಿಸಿ ಕೊಲೆ ಪ್ರಕರಣದ ಇವರ ಪಾತ್ರವನ್ನು ಬಹಿರಂಗ ಪಡಿಸಿ ಅಶ್ರಫ್ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕಾಗಿಯೂ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ನೆಲೆಗೊಳಿಸುವಂತೆ ಸಹಕರಿಸಬೇಕಾಗಿಯೂ ಈ ಪತ್ರಿಕಾ ಗೋಷ್ಠಿಯಲ್ಲಿ ಎಸ್.ಡಿ.ಪಿ.ಐ ಪಕ್ಷವು ಆಗ್ರಹಿಸುತ್ತದೆ ಎಂದರು.