ಕಳಂಕಿತ ವ್ಯಕ್ತಿಯಿಂದ ನನ್ನ ಅಭಿವೃದ್ದಿ ಕೆಲಸಕ್ಕೆ ಸರ್ಟಿಫಿಕೇಟ್ ಅಗತ್ಯವಿಲ್ಲ; ಭಟ್ಟರ ಚಾರ್ಜ್ ಶೀಟಿಗೆ ಪ್ರಮೋದ್ ಉತ್ತರ

Spread the love

ಕಳಂಕಿತ ವ್ಯಕ್ತಿಯಿಂದ ನನ್ನ ಅಭಿವೃದ್ದಿ ಕೆಲಸಕ್ಕೆ ಸರ್ಟಿಫಿಕೇಟ್ ಅಗತ್ಯವಿಲ್ಲ; ಭಟ್ಟರ ಚಾರ್ಜ್ ಶೀಟಿಗೆ ಪ್ರಮೋದ್ ಉತ್ತರ

ಉಡುಪಿ: ತನಗಿಂತ ಮೊದಲು ಶಾಸಕರಾದ ರಘುಪತಿ ಭಟ್ಟರು ತಮ್ಮ ಮೇಲೆ ಹಲವಾರು ಕಳಂಕಗಳನ್ನು ಇಟ್ಟುಕೊಂಡು ಈಗ ಕಳೆದ 5 ವರ್ಷಗಳ ಅವಧಿಯಲ್ಲಿ ಭ್ರಷ್ಟಾಚಾರ ರಹಿತವಾಗಿ ಉಡುಪಿ ಜನತೆಗೆ ಸೇವೆ ನೀಡಿದ್ದು ನನ್ನ ಸೇವೆಯ ಬಗ್ಗೆ ಕಳಂಕ ಹೊಂದಿದ ರಘುಪತಿ ಭಟ್ಟರು ಆರೋಪ ಮಾಡಲು ಯಾವುದೇ ನೈತಿಕತೆ ಹೊಂದಿಲ್ಲ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿರುಗೇಟು ನೀಡಿದ್ದಾರೆ.

ಅವರು ಗುರುವಾರ ನಗರದ ಪ್ರೆಸ್ ಕ್ಲಬ್ಬಿನಲ್ಲಿ ಬಿಜೆಪಿ ಹಾಗೂ ಮಾಜಿ ಶಾಸಕ ರಘುಪತಿ ಭಟ್ ಅವರು ತನ್ನ ವಿರುದ್ದ ಬಿಡುಗಡೆ ಮಾಡಿದ್ದ ಆರೋಪ ಪಟ್ಟಿಗೆ ಉತ್ತರ ನೀಡಿ ಮಾತನಾಡಿ ನಾಣು ಶಾಸಕರಾಗಿ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಯಾಗಿ, ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವನಾಗಿ ತನ್ನ ಕ್ಷೇತ್ರಕ್ಕೆ ರೂ.2026 ಕೋಟಿಗೂ ಮಿಕ್ಕಿ ಅನುದಾನ ತಂದು ಅಭಿವೃದ್ಧಿ ಮಾಡಲು ಪ್ರಯತ್ನಿಸಿದ್ದೇನೆ. ಅಲ್ಲದೇ ಪ್ರಜಾವಾಣಿ ಮತ್ತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಸರ್ವೆಯಲ್ಲಿ ರಾಜ್ಯದಲ್ಲಿಯೇ 224 ವಿಧಾನ ಸಭಾ ಕ್ಷೇತ್ರದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಪ್ರಥಮ ಸ್ಥಾನಗಳಿಸಿದ್ದು ಇದಕ್ಕೆ ಕಾರಣ ನನ್ನ ಉಡುಪಿಯ ಜನತೆಯ ಆಶೀರ್ವಾದ ಬಿಟ್ಟರೆ ಇನ್ನೇನು ಅಲ್ಲ. ಹೀಗಿರುವಾಗ ಕಳಂಕಗಳನ್ನು ಮೈಗಂಟಿಸಿಕೊಂಡಿರುವ ರಘುಪತಿ ಭಟ್ಟರ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ ಎಂದ ಪ್ರಮೋದ್ ಅವರು ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ವಿಷನ್ 2025ರಲ್ಲಿ ಕೊಟ್ಟ ಬಹುತೇಕ ಭರವಸೆಗಳನ್ನು ಈಡೇರಿಸುವ ಪ್ರಯತ್ನ ಮಾಡಿದ್ದೇನೆ ಅಲ್ಲದೆ ನಿಜವಾಗಿ ಬಿಜೆಪಿ ನನ್ನ ಬಗ್ಗೆ 5 ವರ್ಷಗಳ ಸಾಧನೆ ಬಗ್ಗೆ ಪ್ರಶ್ನೆ ಮಾಡುವ ಬದಲು 2025 ರ ತನಕ ಕಾಯುವ ತಾಳ್ಮೆ ಹೊಂದುವ ಪ್ರಯತ್ನ ಮಾಡಲಿ ಎಂದರು.

ಉಡುಪಿ ಜಿಲ್ಲಾ ಆಸ್ಪತ್ರೆ: ಉಡುಪಿ ಜಿಲ್ಲಾ ಆಯುಷ್ ಆಸ್ಪತ್ರೆ -ರೂ132.26ಲಕ್ಷ, ಕ್ಯಾಂಟೀನ್ ಸೌಲಭ್ಯ, ಕೆ.ಎಂ.ಎಫ್ ನಂದಿನಿ ಹಾಲು ಕೇಂದ್ರ ಹಾಗೂ ಹಾಪ್ಕಾಮ್ಸ್ ಮಾರಾಟ ಮಳಿಗೆಗಳ ನಿರ್ಮಾಣ (ಸಿವಿಕ್ ಎಮನಿಟೀಸ್) -ರೂ.30.00ಲಕ್ಷ. ಟಿ.ಬಿ ವಾರ್ಡ್ ನವೀಕರಣ ಹಾಗೂ ಇನ್ನಿತರ ಕಾಮಗಾರಿ -ರೂ.15.00ಲಕ್ಷ. ಶವಾಗಾರ ನಿರ್ಮಾಣ ಕಾಮಗಾರಿ- ರೂ.85.00ಲಕ್ಷ. ನೀರು ಸರಬರಾಜು ಮತ್ತು ನೈರ್ಮಲ್ಯ ವ್ಯವಸ್ಥೆ ಹಾಗೂ ಕಟ್ಟಡದ ದುರಸ್ತಿ ಕಾಮಗಾರಿ -ರೂ.36.32ಲಕ್ಷ. ವೈದ್ಯಾಧಿಕಾರಿಗಳ ವಸತಿಗೃಹ, ಶುಶ್ರೂಶಕಿ(ನರ್ಸ್) ಹಾಗೂ ಡಿ ಗ್ರೂಪ್ ನೌಕರರ ವಸತಿಗೃಹಗಳು ನಿರ್ಮಾಣದ ಹಂತದಲ್ಲಿದೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಆಸ್ಪತ್ರೆ ಕಟ್ಟಡಗಳಿಗೆ ಒಟ್ಟು ರೂ.1354.62 ಲಕ್ಷ ವ್ಯಯಿಸಲಾಗಿದೆ.

2013 ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರಕಾರ ಅಧಿಕಾರದಲ್ಲಿತ್ತು. ಆಸ್ಕರ್ ಫೆರ್ನಾಂಡೀಸ್ರವರು ಕೇಂದ್ರದಲ್ಲಿ ಮಂತ್ರಿಯಾಗಿದ್ದ ಕಾರಣ ಕೇಂದ್ರದ ಮೇಲೆ ಪ್ರಭಾವ ಬೀರಿ ಅರ್ಥಿಕ ಸಂಪನ್ಮೂಲ ತರುವ ಯೋಜನೆ ಇತ್ತು. ನಂತರ ಬಂದ ಕೇಂದ್ರದ ಬಿ.ಜೆ.ಪಿ. ಸರಕಾರ ಯಾವುದೇ ಅನುದಾನ ನೀಡದಿದ್ದುದರಿಂದ ರೂ.500 ಕೋಟಿ ವೆಚ್ಚದ ಜಿಲ್ಲಾ ಸರಕಾರಿ ಆಸ್ಪತ್ರೆ ನಿರ್ಮಿಸಲು ಸಾಧ್ಯವಾಗಲಿಲ್ಲ.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಿಂದೆ 70 ಹಾಸಿಗೆ ಇದ್ದು, ಹೆರಿಗೆಗೆ ಬರುವ ಸ್ತ್ರೀಯರಿಗೆ ಕೆಲವೊಮ್ಮೆ ಹಾಸಿಗೆ ಕೂಡಾ ಸಿಗದ ಪರಿಸ್ಥಿತಿ ಇತ್ತು. ಇದನ್ನು ಗಮನಿಸಿದ ಸಚಿವರು ಮುಖ್ಯಮಂತ್ರಿ ಮತ್ತು ಆರೋಗ್ಯ ಮಂತ್ರಿಗಳ ಸಹಕಾರದೊಂದಿಗೆ, ಖಾಸಗಿ ಸಹಭಾಗಿತ್ವದೊಂದಿಗೆ ಬಿ.ಆರ್.ಶೆಟ್ಟಿಯವರೊಂದಿಗೆ ಮಾಡಿದ ಒಡಂಬಡಿಕೆಯ ಅನುಸಾರ ಈಗಾಗಲೇ 200 ಹಾಸಿಗೆಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸಾಹೇಬ್ರವರ ಹೆಸರಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಿದ್ದು, ಅಲ್ಲಿ ವೈದ್ಯಕೀಯ ಚಿಕಿತ್ಸೆ ಸಂಪೂರ್ಣ ಉಚಿತವಾಗಿದ್ದು, ಹೊರರೋಗಿಗಳ ವಿಭಾಗ ಪ್ರಾರಂಭಗೊಂಡಿದ್ದು, ಬರುವ ತಿಂಗಳಲ್ಲಿ ಒಳ ರೋಗಿಗಳ ದಾಖಲಾತಿ ಪ್ರಾರಂಭವಾಗಲಿದೆ. ಈ ಉಚಿತ ಸರಕಾರಿ ಆಸ್ಪತ್ರೆಯ ಆರು ಮಹಡಿಗಳು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, 6 ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಹೊಂದಿದ್ದು ದೇಶದಲ್ಲಿಯೇ ಪ್ರಥಮವಾಗಿ ಸರಕಾರಿ ಆಸ್ಪತ್ರೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳಿರುವ ಹೈಟೆಕ್ ಆಸ್ಪತ್ರೆಯಾಗಿ ನಿರ್ಮಾಣಗೊಂಡಿದೆ.

ರಸ್ತೆ ಚತುಷ್ಪಥಗೊಳಿಸುವ ಬಗ್ಗೆ ; ರಸ್ತೆ ಅಭಿವೃದ್ಧಿ ಮಾಡಲು ಭೂಸ್ವಾಧೀನ ಕಾನೂನು ಕಠಿಣವಾಗಿರುವುದರಿಂದ ಪರಿಹಾರ ನಾಲ್ಕು ಪಟ್ಟು ಹೆಚ್ಚು ಕೊಡ ಬೇಕಾಗಿರುವುದರಿಂದ; ಅಗಾಧ ಆರ್ಥಿಕ ಸಂಪನ್ಮೂಲದ ಅಗತ್ಯತೆ ಇದ್ದು ಭೂಸ್ವಾಧೀನ ತೊಡಕಾಗಿ ಪರಿಣಮಿಸಿದೆ. ಉಡುಪಿ-ಅಂಬಾಗಿಲು-ಮಣಿಪಾಲ ರಸ್ತೆ ಚತುಷ್ಪಥಗೊಳಿಸುವ ಕಾಮಗಾರಿ ಲೋಕೋಪಯೋಗಿ ಇಲಾಖೆಯ ಮುಖಾಂತರ ಈಗಾಗಲೇ ಪ್ರಥಮ ಹಂತದ ಕಿ.ಮೀ.3.00ರಿಂದ 3.90ರವರೆಗೆ ರಸ್ತೆ ಹಾಗೂ ಮೋರಿ ರಚಿಸುವ ರೂ.5.00 ಕೋಟಿ ಅಂದಾಜು ವೆಚ್ಚದ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಮಣಿಪಾಲ-ಕಲ್ಸಂಕ ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯ ರಸ್ತೆಯಾಗಿ ಮಾರ್ಪಟಾಗಿದೆ. ಅಂಬಾಗಿಲು ರಾಷ್ಟ್ರೀಯ ಹೆದ್ದಾರಿಯಿಂದ ಬಂದ ವಾಹನಗಳಿಗೆ ಉಡುಪಿ ನಗರಕ್ಕೆ ಪ್ರವೇಶಿಸದೇ ಪರ್ಯಾಯ ರಸ್ತೆಯಾಗಿ ಮಣಿಪಾಲಕ್ಕೆ ಹೋಗುವ ಮಾರ್ಗ ಸುಸಜ್ಜಿತಗೊಳ್ಳುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ. 3.90 ಕಿ.ಮೀ ರಿಂದ 5.10 ಕಿ.ಮೀಯವರೆಗೆ ಸುಮಾರು ರೂ.5.40 ಕೋಟಿ ರಸ್ತೆ ಅಭಿವೃದ್ಧಿ ಹಾಗೂ ಇಕ್ಕೆಲಗಳಲ್ಲಿ ಮೋರಿ ರಚಿಸುವ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡು, ಕಾಮಗಾರಿ ಪ್ರಾರಂಭವಾಗುವ ಹಂತದಲ್ಲಿದೆ.

ಉಡುಪಿ ನಗರಸಭೆಯ ಅಮೃತ ಮಹೋತ್ಸವದ ನಿಮಿತ್ತ ರಾಜ್ಯ ಸರಕಾರದಿಂದ ಮಂಜೂರಾದ ರೂ.25.00 ಕೋಟಿಯಲ್ಲಿ ಮಣಿಪಾಲ-ಪರ್ಕಳ ಭೂಸ್ವಾಧೀನಕ್ಕೆ ಹಣವನ್ನು ಮೀಸಲಿರಿಸಲಾಗಿತ್ತು. 2014ರ ಫೆಬ್ರವರಿ ತಿಂಗಳಲ್ಲಿ ಮಲ್ಪೆ-ಮಣಿಪಾಲ-ತೀರ್ಥಹಳ್ಳಿ ರಸ್ತೆಯು ರಾಷ್ಟ್ರೀಯ ಹೆದ್ಧಾರಿ 169ಎ ಎಂದು ಘೋಷಣೆಯಾಗಿದ್ದರಿಂದ ರಾಜ್ಯ ಸರಕಾರವು ನಗರಸಭೆಗೆ ಮೀಸಲಿರಿಸಿದ ಅನುದಾನವನ್ನು ಕಡಿತಗೊಳಿಸಿ ರೂ.21.42 ಕೋಟಿಯನ್ನು ಮಾತ್ರ ಉಡುಪಿ ನಗರಸಭೆಗೆ ಬಿಡುಗಡೆಗೊಳಿಸಿದೆ. ಕೇಂದ್ರದಲ್ಲಿ ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾದರೂ, ಪರ್ಕಳ-ಮಣಿಪಾಲ- ಮಲ್ಪೆ ರಸ್ತೆಯ ಒಂದೇ ಒಂದು ಕಿ.ಮೀ ಚತುಷ್ಪಥ ಆಗಲಿಲ್ಲ. ಇನ್ನೂ ಸಹಾ ಡಿ.ಪಿ.ಆರ್ ಹಂತದಲ್ಲಿದೆ. ಇದು ಶೋಭಾ ಕರಂದ್ಲಾಜೆಯ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದರು.

ಉಪ್ಪೂರು ಜಿ ಟಿ ಟಿ ಸಿ ಕೇಂದ್ರ: ಉಪ್ಪೂರಿನಲ್ಲಿ ಸ್ನಾತಕೋತ್ತರ ಕೇಂದ್ರಕ್ಕೆ ಮೀಸಲಿರಿಸಿದ ಜಾಗವನ್ನು ಪರಿಶೀಲಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ತಜ್ಞರ ಸಮಿತಿಯು ಉಪ್ಪೂರಿನ ಜಾಗವು ಸಮತಟ್ಟು ಅಲ್ಲದ ಉಬ್ಬುತಗ್ಗುಗಳ ಪ್ರದೇಶವಾದುದರಿಂದ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಲು ಸ್ಥಳ ಯೋಗ್ಯವಲ್ಲ ಎಂದು ವರದಿ ಕೊಟ್ಟಿರುವುದರಿಂದ ಅದರ ಅನುಸಾರ ಕಾಪುವಿನ ಬೆಳಪುವಿಗೆ ಸ್ಥಳಾಂತರಗೊಂಡಿದೆ. ಉಪ್ಪೂರಿನಲ್ಲಿ ರೂ.44.00ಕೋಟಿ ವೆಚ್ಚದ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ (ಉಖಿಖಿಅ) ಕಾಮಗಾರಿ ಪ್ರಗತಿಯಲ್ಲಿದೆ. ನಿರುದ್ಯೋಗಿಗಳಿಗೆ ಕೌಶಲ್ಯವನ್ನು ಹೆಚ್ಚಿಸಲು ನಾಲ್ಕು ವರ್ಷಗಳ ಡಿಪ್ಲೋಮಾ ಕೋರ್ಸ್ ಕೇಂದ್ರವು ಇದಾಗಿದೆ. ಸಚಿವರ ಮುತುವರ್ಜಿಯಿಂದ ಸದ್ರಿ ಕೇಂದ್ರದ ಕಾಮಗಾರಿ ನಡೆಯುತ್ತಿದೆ.

ಬ್ರಹ್ಮಾವರ ಪುರಸಭೆ ರಚನೆ: ರಾಜ್ಯದಲ್ಲಿ ಕಾಪು ಪುರಸಭೆಯಾದದ್ದು ಬಿಟ್ಟಲ್ಲಿ; ಬೇರೆಲ್ಲಿಯೂ ಆಗಲಿಲ್ಲ. ಬ್ರಹ್ಮಾವರವು ಆದ್ಯತೆಯ ಮೇರೆಗೆ ಮುಂದಿನ ದಿನಗಳಲ್ಲಿ ಪರುಸಭೆಯಾಗುತ್ತದೆ.

ಬ್ರಹ್ಮಾವರ ತಾಲೂಕು: ಹಿಂದಿನ ಬಿ.ಜೆ.ಪಿ ಸರಕಾರದ ಜಗದೀಶ ಶೆಟ್ಟರ್ರವರು ತರಾತುರಿಯಲ್ಲಿ ತಾಲೂಕು ಘೋಷಣೆ ಮಾಡಿದ್ದರು. ಪ್ರಸ್ತುತ ಸರಕಾರ ಗ್ರಾಮಗಳನ್ನು ಗುರುತಿಸುವಿಕೆ, ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಮಾಡಿದ್ದು, ತಾಲೂಕು ಘೋಷಣೆಯ ನಂತರದ ಪ್ರಕ್ರಿಯೆಗಳು ಅನುಷ್ಠಾನಗೊಳ್ಳುತ್ತವೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ಉಡುಪಿ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ಬಹುತೇಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳು ಟೆಂಡರ್ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿಗಳು ಪ್ರಾರಂಭವಾಗಲಿವೆ.

ಮರಳುಗಾರಿಕೆ: ಜಿಲ್ಲೆಯ ಕಾನೂನುಬಾಹಿರ ಮರಳುಗಾರಿಕೆಯ ಬಗ್ಗೆ ಹಸಿರು ನ್ಯಾಯ ಪೀಠದಲ್ಲಿ ದಾವೆ ಇದ್ದುದರಿಂದ ಮರಳುಗಾರಿಕೆಗೆ ನಿರ್ಬಂಧ ಇತ್ತು, ಹಸಿರು ನ್ಯಾಯಪೀಠದ ಆದೇಶದ ಹಾಗೂ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ, ಅರ್ಹರಿಗೆ ಮರಳುಗಾರಿಕೆಗೆ ಅವಕಾಶ ಮಾಡಿ ಕೊಡಲಾಗಿದೆ. ಜಿಲ್ಲೆಯ ಮರಳು ಹೊರ ಜಿಲ್ಲೆಗೆ ಹೋಗದೇ ಜಿಲ್ಲೆಯಲ್ಲಿಯೇ ಉಪಯೋಗವಾಗಬೇಕು ಎಂಬ ದೃಢ ನಿರ್ಧಾರದಿಂದ ರಾಜ್ಯದಲ್ಲಿಯೇ ಪ್ರಥಮವಾಗಿ ಹೊರ ಜಿಲ್ಲೆಗಳಿಗೆ ಮರಳು ಹೆಚ್ಚಿನ ಕ್ರಯಕ್ಕೆ ವಿಕ್ರಯವಾಗುವುದಕ್ಕೆ ಕಡಿವಾಣ ಬಿದ್ದಿದೆ. ಹಸಿರು ನ್ಯಾಯಪೀಠದ ನಿಯಮಗಳನ್ನು ಮರಳು ಗುತ್ತಿಗೆದಾರರು ಉಲ್ಲಂಘಿಸಿದಲ್ಲಿ ಜಿಲ್ಲಾಧಿಕಾರಿಯವರು ಕ್ರಮ ಕೈಗೊಂಡರೆ ನಾನು ಹೊಣೆಯಾಗುವುದಿಲ್ಲ. ನಾನ್ ಸಿ.ಆರ್.ಝಡ್ ಪ್ರದೇಶದಲ್ಲಿ ಕೇಂದ್ರದ ನಿಯಮದ ಪ್ರಕಾರ ನದಿ ನೀರಿನಲ್ಲಿ ಮರಳು ದಿಬ್ಬಗಳು ಸೃಷ್ಟಿಯಾದಲ್ಲಿ ಅದು ಕಣ್ಣಿಗೆ ತೋರುವ ಮಟ್ಟದಲ್ಲಿ ಇದ್ದಲ್ಲಿ ಮಾತ್ರ ಮರಳುಗಾರಿಕೆಗೆ ಅವಕಾಶ ಇದೆ. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು ನಾನ್ ಸಿ.ಆರ್.ಝಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಅವಕಾಶ ಕೊಡಲು ಒತ್ತಾಯಿಸಲಾಗಿದೆ. ರಘುಪತಿ ಭಟ್ಟರು ಕೇಂದ್ರಕ್ಕೆ ಪತ್ರ ಬರೆದು ನಾನ್ ಸಿ.ಆರ್.ಝಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಅವಕಾಶ ನೀಡುವಂತೆ ಕೇಂದ್ರವನ್ನು ಒತ್ತಾಯಿಸಬಹುದು.

ನಗರಸಭೆ ನೀರಿನ ಶುಲ್ಕ, ಉದ್ಯಮ ಪರವಾನಗಿ, ಮನೆ ತೆರಿಗೆ ಹೆಚ್ಚಳದ ಬಗ್ಗೆ : 2013ರಲ್ಲಿ ನಗರಸಭೆ ಚುನಾವಣೆಯಾದಾಗ ಮೂರು ವರ್ಷ ತೆರಿಗೆ ಹೆಚ್ಚಳ ಮಾಡುವುದಿಲ್ಲ್ಲ ಎಂದು ಪ್ರಣಾಳಿಕೆಯಲ್ಲಿ ಜನರಿಗೆ ಭರವಸೆ ನೀಡಿತ್ತು. ಅದೇ ಪ್ರಕಾರ ಮೂರು ವರ್ಷ ಯಾವುದೇ ಶುಲ್ಕ ಹೆಚ್ಚಿಸಲಿಲ್ಲ. ನಂತರ ಸರಕಾರದ ಆದೇಶದ ಮೇರೆಗೆ ನಗರಸಭಾ ಮಾಸಿಕ ಸಭೆಯಲ್ಲಿ ಚರ್ಚಿಸಿಯೇ ಶುಲ್ಕವನ್ನು ಹೆಚ್ಚಿಸಲಾಗಿದೆ. ರೂ.5.00 ಲಕ್ಷಕ್ಕಿಂತ ಹೆಚ್ಚಿನ ಕಾಮಗಾರಿಗಳನ್ನು ಸರಕಾರದ ಆದೇಶದಂತೆ ಇ ಪ್ರೊಕ್ಯೂರ್ಮೆಂಟ್ ಮೂಲಕ (ಕರ್ನಾಟಕ ಪಾರದರ್ಶಕ ಕಾಯಿದೆಯ ಅನುಸಾರ) ಆನ್ಲೈನ್ನಲ್ಲಿ ದಾರಿದೀಪದ ನಿರ್ವಹಣೆಯ ಬಗ್ಗೆ ಪ್ರಕಟ ಪಡಿಸಿ ಕಡಿಮೆ ಬಂದ ಟೆಂಡರ್ ಅನ್ನು ಕಾನೂನಾತ್ಮಕವಾಗಿ ಅಂಗೀಕರಿಸಿರುವುದರಿಂದ, ಟೆಂಡರಿನ ಶರತ್ತು ಹಾಗೂ ಕರಾರಿನಂತೆ ಅರ್ಹತೆ ಇರುವ ಯಾರು ಬೇಕಾದರೂ ಟೆಂಡರ್ ಹಾಕಬಹುದಾಗಿದೆ.

ಕಸ ನಿರ್ವಹಣೆಗೆ ಉಡುಪಿ ನಗರಸಭೆ ವಾರ್ಷಿಕ ಸುಮಾರು ರೂ.6.00 ಕೋಟಿ ವ್ಯಯಿಸುತ್ತಿರುವುದರಿಂದ ಅಗಾಧ ಪ್ರಮಾಣದ ಕಸ ಸಂಗ್ರಹವಾಗುವುದರಿಂದ ಈಗಾಗಲೇ ನಗರಸಭೆಯ ಎಂಟು ವಾರ್ಡ್ಗಳಲ್ಲಿ ನಗರಸಭೆಯಿಂದಲೇ ಕಸ ನಿರ್ವಹಣೆ ಮಾಡುತ್ತಿದ್ದು, ಉಳಿದೆಡೆ ಗುತ್ತಿಗೆ ಆಧಾರದಲ್ಲಿ ಕಸ ನಿರ್ವಹಣೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನಗರಸಭೆಯ 35 ವಾರ್ಡ್ಗಳಲ್ಲಿ ಸರಕಾರಿ ಜಾಗವಿರುವಲ್ಲಿ ಕಸ ವಿಂಗಡಣೆಯ ಕೇಂದ್ರಗಳನ್ನು ತೆರೆದು ಕಸವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಕಾರ್ಯ ಪ್ರಾರಂಭವಾಗಲಿದೆ. ಸಮರ್ಪಕ ಕುಡಿಯುವ ನೀರಿನ ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಕೃಷಿ ಕಾಲೇಜು: ಇತ್ತೀಚೆಗೆ ಕರ್ನಾಟಕದಲ್ಲಿ ಎಲ್ಲಿಯೂ ಹೊಸ ಕೃಷಿ ಕಾಲೇಜು ಪ್ರಾರಂಭವಾಗಿಲ್ಲ. ಕೃಷಿ ಕಾಲೇಜನ್ನು ರಾಜ್ಯದಲ್ಲಿ ಪ್ರಾರಂಭಿಸುವಾಗ ಬ್ರಹ್ಮಾವರದಲ್ಲಿಯೇ ಪ್ರಥಮವಾಗಿ ತೆರೆಯಲಾಗುವುದೆಂದು ಮಾನ್ಯ ಕೃಷಿ ಸಚಿವರಾದ ಕೃಷ್ಣ ಭೈರೇ ಗೌಡ ಭರವಸೆ ನೀಡಿದ್ದಾರೆ.

ಬೀಡಿನಗುಡ್ಡೆ ಬಯಲು ರಂಗ ಮಂದಿರ: ಬೀಡಿನಗುಡ್ಡೆಯಲ್ಲಿ ಬಯಲು ರಂಗಮಂದಿರ ಮಾತ್ರ ನಿರ್ಮಾಣವಾಗಿ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ನಾನು ನಗರಾಭಿವೃದ್ಧಿ ಪ್ರಾಧಿಕಾರದಿಂದ 1.00 ಕೋಟಿ ಅನುದಾನವನ್ನು ಒದಗಿಸಿ, ಬೃಹತ್ ಆವರಣಗೋಡೆ ನಿರ್ಮಾಣ ಗೊಂಡು ಇಂದು ಸಾರ್ವಜನಿಕ ಸೇವೆಗೆ ಅಣಿಯಾಗಿದೆ. ಬಯಲು ರಂಗ ಮಂದಿರದ ಎದುರು ಖಾಸಗಿ ಜಾಗ ಇರುವುದು ರಘುಪತಿ ಭಟ್ಟರಿಗೆ ಯಾಕೆ ತಿಳಿಯಲಿಲ್ಲ? ಒಂದು ಎಕ್ರೆ ಜಮೀನನ್ನು ಆಫೀಸರ್ಸ್ ಕ್ಲಬ್ಗೆ ನೀಡುವ ಬಗ್ಗೆ ಯಾವುದೇ ಮಾಹಿತಿ ನನಗೆ ಇರಲಿಲ್ಲ. ಆ ಪ್ರಕ್ರಿಯೆಗಳು 2013ರ ವಿಧಾನ ಸಭಾ ಚುನಾವಣೆಯ ಮೊದಲೇ ರಘುಪತಿ ಭಟ್ ಶಾಸಕರಾಗಿದ್ದಾಗಲೇ ಪ್ರಾರಂಭವಾಗಿತ್ತು. 2013 ಜೂನ್ ತಿಂಗಳಲ್ಲಿ ಆಫೀಸರ್ಸ್ ಕ್ಲಬ್ಗೆ ಜಾಗ ಮಂಜೂರಾದ ಬಗ್ಗೆ ಶಾಸಕರಿಗೆ ಯಾವುದೇ ಮಾಹಿತಿ ಇರಲಿಲ್ಲ.

ಬ್ರಹ್ಮಾವರದ ಮಿನಿ ವಿಧಾನ ಸೌಧ ಹಾಗೂ ಭವ್ಯ ಕ್ರೀಡಾಂಗಣ: ಬ್ರಹ್ಮಾವರದಲ್ಲಿ ಎಲ್ಲಾ ತಾಲೂಕು ಮಟ್ಟದ ಸರಕಾರಿ ಇಲಾಖೆಗಳನ್ನು ಒಂದೇ ಸೂರಿನಡಿ ತರುವ ಪ್ರಯತ್ನದಲ್ಲಿ ಹಳೆಯ ಐ.ಬಿ. ಪ್ರದೇಶದಲ್ಲಿ ಆರು ಎಕ್ರೆ ಸರಕಾರಿ ಭೂಮಿಯನ್ನು ಮಿನಿ ವಿಧಾನ ಸೌಧ ನಿರ್ಮಿಸುವುದಕ್ಕೆ ಮೀಸಲಿರಿಸಲಾಗಿದೆ. ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಐದುವರೆ ಎಕ್ರೆ ಸ್ಥಳದಲ್ಲಿ ಭವ್ಯ ಕ್ರೀಡಾಂಗಣ ನಿರ್ಮಿಸುವ ಕಾಮಗಾರಿ ಪ್ರಾರಂಭಗೊಂಡಿದೆ. ರೂ.75.00ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಆ ಸ್ಥಳವನ್ನು ಈ ಹಿಂದೆ ಡಿಫೆನ್ಸ್ ಇಲಾಖೆಗೆ ಸೇರಿದ ಸ್ಥಳವೆಂದು ರಘುಪತಿ ಭಟ್ಟರು ನಿರ್ಲಕ್ಷಿಸಿದ್ದರು.

ನಾಲ್ಕು ವರ್ಷ ಹತ್ತು ತಿಂಗಳಲ್ಲಿ ರೂ. 2026 ಕೋಟಿ ಅನುದಾನ : ಸಿದ್ಧರಾಮಯ್ಯನವರ ಸರಕಾರ ಯೋಜನೆಗಳಿಗೆ ಬಿಡುಗಡೆಗೊಳಿಸಿದ ಅನುದಾನವನ್ನು ನ್ಯಾಯಯುತವಾಗಿ ಲೆಕ್ಕಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೇ ಕೇಂದ್ರದಲ್ಲಿ ಯು.ಪಿ.ಎ ಸರಕಾರವಿದ್ದ ಸಂದರ್ಭದಲ್ಲಿ ಕುಂದಾಪುರದಿಂದ ಹೆಜಮಾಡಿಯವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಳಿಸಲು ಬಿಡುಗಡೆಗೊಂಡ ಅನುದಾನವನ್ನು ಹಕ್ಕಿನಲ್ಲಿ ಸೇರಿಸಲಾಗಿದೆ. ಯಾವುದೇ ಬಿ.ಜೆ.ಪಿ ಕಾರ್ಯಕರ್ತರು ಶಾಸಕರ ಕಚೇರಿಗೆ ಬಂದು ಅನುದಾನಗಳ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಬಹುದು.

ದೊಡ್ಡಣ್ಣಗುಡ್ಡೆ ಜನತಾ ವ್ಯಾಯಾಮ ಶಾಲೆ: ದೊಡ್ಡಣ್ಣಗುಡ್ಡೆ ಜನತಾ ವ್ಯಾಯಾಮ ಶಾಲೆಯ ಪರಿಸರದಲ್ಲಿ ಸರಕಾರಿ ಅಂಗನವಾಡಿಯಿದ್ದು ಆ ಸ್ಥಳ ಸರಕಾರಿ ಸ್ಥಳವಾಗಿದೆ. ಸ್ಥಳೀಯರೊಬ್ಬರು ಅಕ್ರಮವಾಗಿ ಸ್ಥಳೀಯ ಸಂಸ್ಥೆಯ ಪರವಾನಗಿ ಇಲ್ಲದೇ ಕಟ್ಟಡ ರಚನೆ ಮಾಡಿ ತನ್ನಿಷ್ಟದಂತೆ ಜನರಲ್ಲಿ ವಂತಿಗೆ ಪಡೆಯುತ್ತಿದ್ದರಿಂದ, ಸರಕಾರಿ ಸ್ಥಳದಲ್ಲಿ ಯಾವುದೇ ಅನುಮತಿ ಇಲ್ಲದೇ ರಚಿಸಿದ ಕಟ್ಟಡವನ್ನು ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು ಸ್ಥಳ ಪರಿಶೀಲನೆ ನಡೆಸಿ ಉಡುಪಿ ನಗರಸಭೆ ಸುಪರ್ದಿಗೆ ಕಟ್ಟಡ ಸಮೇತ ವಹಿಸಿರುವುದರಿಂದ ಸಾರ್ವಜನಿಕರಿಗೆ ಸಾಂಸ್ಕøತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಈಗಲೂ ಮುಕ್ತವಾಗಿದೆ. ಅಲ್ಲದೆ ವ್ಯಾಯಾಮ ಶಾಲೆಯು ಕೂಡಾ ಅಲ್ಲಿಯೇ ಇದ್ದು, ಕಾರ್ಯಚಟುವಟಿಕೆಯನ್ನು ಮಾಡುತ್ತಿದೆ.

ಕೇಂದ್ರ ಸರಕಾರದ ನಗರೋತ್ಥಾನ ಯೋಜನೆ, ಅಮೃತ ಯೋಜನೆ: 2013-14ರಲ್ಲಿ ರೂ.90 ಕೋಟಿ ಉಡುಪಿ ನಗರಸಭೆಗೆ ಕುಡಿಯುವ ನೀರು ಹಾಗೂ ಒಳಚರಂಡಿ ಯೋಜನೆಗೆ ಎ.ಡಿ.ಬಿ.ಯ ಅನುದಾನ ಮಂಜೂರಾಗಿತ್ತು. ಎ.ಡಿ.ಬಿ.ಯ ಹಿಂದಿನ ಸಾಲವನ್ನು 50% ತೀರಿಸದೇ ಹೊಸ ಸಾಲ ಕೊಡಲು ತಗಾದೆ ತೆಗೆದುದರಿಂದ ಅನುದಾನವನ್ನು ತಡೆ ಹಿಡಿಯಲಾಗಿತ್ತು. ನನ್ನ ಸತತ ಪ್ರಯತ್ನದಿಂದ 2016 ರ ವೇಳೆಗೆ ಹೆಚ್ಚಿನ ಅನುದಾನ ಸಿಗುವುದಕ್ಕೆ ಹಸಿರು ನಿಶಾನೆ ಸಿಕ್ಕಿತು. 2017ರಲ್ಲಿ ರೂ.270.00 ಕೋಟಿ ಮಂಜೂರಾಯಿತು. ಸರ್ವೆಗೆ ಆರು ತಿಂಗಳು ಹಿಡಿಯಿತು. ಯೋಜನೆಗೆ ಡಿ ಪಿ ಆರ್ ಆಗಿ ಟೆಂಡರ್ ಪ್ರಕ್ರಿಯೆಯಲ್ಲಿದೆ.

ಮೀನುಗಾರಿಕೆ: ಮೀನುಗಾರರಿಗೆ ಹಿಂದೆ ಡಿಸೇಲ್ ಮೇಲಿನ ತೆರಿಗೆ ವಿನಾಯತಿಯನ್ನು ಅವರು ಅದನ್ನು ಖರೀದಿಸುವಾಗಲೇ ಸಂದಾಯ ಮಾಡುವ ಹಳೆ ವಿಧಾನದಲ್ಲಿ ಸಾಕಷ್ಟು ಅವ್ಯವಹಾರ ಆಗುತ್ತಿರುವುದನ್ನು ಗಮನಿಸಿ ಕೇಂದ್ರ ಸರಕಾರದ ನೀತಿಯಂತೆ ಸಬ್ಸಿಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ವರ್ಗಾಯಿಸುವ ಮೂಲಕ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗಿದೆ.

ಮಲ್ಪೆ ಮೀನುಗಾರಿಕಾ ಬಂದರು ಮೂರನೇ ಹಂತದ ಕಾಮಗಾರಿಗೆ ರೂ.38.60 ಕೋಟಿ ಕೇಂದ್ರದಲ್ಲಿ ಯು.ಪಿ.ಎ ಸರಕಾರವಿದ್ದಾಗ 2010-11ರಲ್ಲಿ ಮಂಜೂರಾತಿ ನೀಡಲಾಗಿತ್ತು. ಆ ಅವಧಿಯಲ್ಲಿ ಕೇಂದ್ರ ಸರಕಾರವು 2012-13ರಲ್ಲಿ ಸದ್ರಿ ಯೋಜನೆಗೆ ರೂ.10.93 ಕೋಟಿ ಬಿಡುಗಡೆ ಮಾಡಿದೆ. ರಾಜ್ಯ ಸರಕಾರವು ರೂ.2.44 ಕೋಟಿ ಬಿಡುಗಡೆಗೊಳಿಸಿತ್ತು. 2013-14ರಿಂದ ಇಲ್ಲಿಯವರೆಗೆ ಕೇಂದ್ರ ಸರಕಾರವು ಸದ್ರಿ ಯೋಜನೆಗೆ ರೂ.16.74 ಕೋಟಿ ಹಾಗೂ ರಾಜ್ಯ ಸರಕಾರವು ರೂ.12.90 ಕೋಟಿ ಬಿಡುಗಡೆಗೊಳಿಸಿದೆ.

ಮೀನುಗಾರಿಕೆಯ ಅಭಿವೃದ್ಧಿಗೆ ಸಂಬಂಧಪಟ್ಟ ಯೋಜನೆಗಳಿಗೆ ಕೇಂದ್ರದಲ್ಲಿ ಯು ಪಿ ಎ ಸರಕಾರವಿದ್ದಾಗ ಕೇಂದ್ರದ 75% ಹಾಗೂ ರಾಜ್ಯದ 25% ಪಾಲು ಇರುತಿತ್ತು. ಈಗ ಬಿ.ಜೆ.ಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಯೋಜನೆಗಳ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ 50%-50%. ಕೆಲವೊಮ್ಮೆ ಇನ್ನು ಕಡಿಮೆ ಅನುದಾನವನ್ನು ಬಿಡುಗಡೆಗೊಳಿಸುವುದರಿಂದ ಮೀನುಗಾರಿಕೆಯ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ.

ಮೀನುಗಾರರಿಗೆ ಮೀನುಗಾರಿಕೆಗೆ ಬೋಟು ನಿರ್ಮಿಸಲು ಸಾಧ್ಯತಾ ಪತ್ರವನ್ನು ಬೇಡಿಕೆ ಇದ್ದ ಎಲ್ಲಾ ಅರ್ಜಿಗಳಿಗೆ ಯಾವುದೇ ಲಂಚ ಪಡೆಯದೇ ನೀಡಲಾಗಿದೆ. ಮೀನುಗಾರರು ವೃತ್ತಿಯಲ್ಲಿರುವಾಗ ಅಫಘಾತವಾಗಿ ಮರಣ ಹೊಂದಿದರೆ, ಅವರ ಸಮೀಪದ ಬಂಧುಗಳಿಗೆ ರಾಜ್ಯ ಸರ್ಕಾರದ ಸಂಕಷ್ಟ ಪರಿಹಾರ ನಿಧಿಯಿಂದ ಕೊಡುವ ಆರ್ಥಿಕ ನೆರವನ್ನು ರೂ.2.00 ಲಕ್ಷಗಳಿಂದ ರೂ.6.00 ಲಕ್ಷಗಳಿಗೆ ಏರಿಸಲಾಗಿದೆ. ಸೀಮೆ ಎಣ್ಣೆಯನ್ನು ಆಹಾರ ಇಲಾಖೆಯ ಮೂಲಕ ಸರಬರಾಜು ಮಾಡಲು 2018-19 ನೇ ಸಾಲಿಗೆ ರೂ.90.39 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸಲು ಈಗಾಗಲೇ ಸರಕಾರವನ್ನು ಕೋರಲಾಗಿದೆ. ಮೀನುಗಾರ ಮಹಿಳೆಯರು ಬ್ಯಾಂಕ್ ಗಳಲ್ಲಿ 2% ಬಡ್ಡಿಯಲ್ಲಿ ಪಡೆದ ಸಾಲದ ಬಡ್ಡಿಯ ಬಾಬ್ತು ರೂ.16.00 ಕೋಟಿ ರಾಜ್ಯ ಸರ್ಕಾರದಿಂದ ಸಂದಾಯವಾಗಿದೆ.

ವರಾಹಿಯಿಂದ ಉಡುಪಿ ನಗರಕ್ಕೆ ಕುಡಿಯುವ ನೀರಿನ ಯೋಜನೆ : ವರಾಹಿ ನದಿ ನೀರನ್ನು ಹಿರಿಯಡ್ಕದ ಬಜೆಗೆ 42 ಎಂ ಎಲ್ ಡಿ ನದಿ ನೀರು ತರಲು 36.50 ಕಿ.ಮೀ ಉದ್ದ, 844 ಮಿಮೀ ವ್ಯಾಸದ ಕೊಳವೆ ಹಾಕಲು ರೂ.122.25 ಕೋಟಿ ವೆಚ್ಚ. ಬಜೆಯಲ್ಲಿ ದಿನಾಲೂ 30 ಎಮ್ ಎಲ್ ಡಿ ನದಿ ನೀರನ್ನು ಶುದ್ಧೀಕರಿಸಲು, ಹೊಸ ಡಬ್ಲ್ಯೂ ಟಿ ಪಿ (ನೀರು ಶುದ್ಧೀಕರಣ ಘಟಕ) ಸುಮಾರು ರೂ.60.00 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆಯಲ್ಲಿದೆ.

ಉಡುಪಿ ಅಜ್ಜರಕಾಡಿನಲ್ಲಿ ಡಾ| ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಮೂಡನಿಡಂಬೂರು ಗ್ರಾಮದ ಸರ್ವೆ ನಂಬ್ರ: 135/1ಎನ್/1ಸಿ3ಪಿ1ರಲ್ಲಿ 0.61 ಎಕ್ರೆ ವಿಸ್ತೀರ್ಣದ ಸ್ಥಳ ಮಂಜೂರು ಮಾಡಲಾಗಿದೆ. ಯಾವುದೇ ಹೊಸ ಶಾಲೆ ಹಾಗೂ ಕಾಲೇಜು ಸ್ಥಾಪನೆಗೆ ಬೇಡಿಕೆ ಬರದಿದ್ದುದರಿಂದ ಯಾವುದೇ ಹೊಸ ವಿದ್ಯಾ ಸಂಸ್ಥೆ ಪ್ರಾರಂಭವಾಗಿಲ್ಲ. ಕೊಕ್ಕರ್ಣೆಯಲ್ಲಿ ಹೊಸ ಐ.ಟಿ.ಐಕಾಲೇಜು ಮಂಜೂರಾಗಿದೆ.

ಉಡುಪಿಯಲ್ಲಿ ಬ್ಯಾಡ್ ಮಿಂಟನ್ ಅಸೋಸೀಯೇಶನ್ ನೇತೃತ್ವದಲ್ಲಿ ನ್ಯಾಶನಲ್ ಚಾಂಪಿಯನ್ ಶಿಫ್ ಕ್ರೀಡಾಕೂಟವನ್ನು ರಘುಪತಿ ಭಟ್ರವರು ತನ್ನನ್ನು ಬಿಂಬಿಸಲು ಆಯೋಜಿಸಿದ್ದು, ಸರಕಾರಕ್ಕೆ ವ್ಯತಿರಿಕ್ತ ವರದಿಯಾಗಿದ್ದು, ಮುಖ್ಯಮಂತ್ರಿಯವರೇ ಘೋಷಣೆ ಮಾಡಿದ ಅನುದಾನವನ್ನು ತಡೆಹಿಡಿದಿದ್ದಾರೆ.

ಕ್ರೀಡಾ ಕಿಟ್ ವಿತರಣೆ : ಕ್ರೀಡಾ ಕಿಟ್ಗೆ 18% ಕೇಂದ್ರ ಸರಕಾರದ ಜಿ.ಎಸ್.ಟಿ ಇದೆ. ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ 850ಕ್ಕೂ ಮಿಕ್ಕಿ ಯುವ ಸಂಘಟನೆಗಳಿಗೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಕಿಟ್ಗಳನ್ನು ವಿತರಿಸಲಾಗಿದೆ. ಈಗಲೂ ಯುವಕರಿಂದ ಕ್ರೀಡಾ ಕಿಟ್ಗೆ ಬೇಡಿಕೆ ಇದೆ. ರಾಜ್ಯದಲ್ಲಿಯೇ 5000 ಕ್ರೀಡಾ ಕಿಟ್ಗಳನ್ನು ವಿತರಿಸುವ ಯುವ ಚೈತನ್ಯ ಯೋಜನೆಗೆ ಸರ್ವತ್ರ ಶ್ಲಾಘನೆ ವ್ಯಕ್ತವಾಗಿದೆ. ರೂ.15000/-ಕ್ಕೆ ಕಿಟ್ ದೊರೆಯುವುದಾದರೆ ಮುಂದಿನ ಸಲ ರಘುಪತಿ ಭಟ್ರವರು ಟೆಂಡರ್ ವಹಿಸಿ ಕ್ರೀಡಾ ಕಿಟ್ ವಿತರಕರಾಗಲಿ. ಮಣಿಪಾಲದಲ್ಲಿ ಅಂತರಾಷ್ಟ್ರೀಯ ಮ್ಯಾರಾಥಾನ್ ಕ್ರೀಡಾಕೂಟ ರಘುಪತಿ ಭಟ್ರವರ ವೈಯುಕ್ತಿಕ ವರ್ಚಸ್ಸು ಹೆಚ್ಚಲು, ಸ್ವಹಿತಾಸಕ್ತಿಯಲ್ಲಿ ನಡೆಯುವ ಕಾರ್ಯಕ್ರಮವಾದುದರಿಂದ ಯಾವತ್ತೂ ಆ ಕಾರ್ಯಕ್ರಮಗಳಿಗೆ ನಾನು ಭಾಗವಹಿಸಲಿಲ್ಲ. ಮಹಿಳಾ ಜಿಲ್ಲಾಧಿಕಾರಿಯವರ ಹಾಗೂ ಸಹಾಯಕ ಜಿಲ್ಲಾಧಿಕಾರಿಯವರ ಮೇಲೆ ಮರಳು ಮಾಫಿಯಾದವರಿಂದ ಹಲ್ಲೆಯಾಗಿದ್ದಾಗ ಆರೋಪಿಗಳ ಮೇಲೆ ಪೊಲೀಸರು ಕೇಸು ದಾಖಲಿಸಿ, ಸೂಕ್ತ ಕ್ರಮ ಕೈಗೊಂಡಿದ್ದೇನೆ. ಆ ಸಂದರ್ಭದಲ್ಲಿ ಮೈಸೂರಿನ ನಂಜನಗೂಡಿನಲ್ಲಿ ಚುನಾವಣಾ ಪ್ರಚಾರದಲ್ಲಿರುದ್ದುದರಿಂದ ನಾಉ ಉಡುಪಿಯಲ್ಲಿ ಇರಲಿಲ್ಲ. ಅಲ್ಲದೇ ಆ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ.

ಮಣಿಪಾಲ ಸಂಸ್ಥೆಯವರ ಅಕ್ರಮ ಕಟ್ಟಡ ವ್ಯವಹಾರಗಳು ಅಂದಿನ ಜಿಲ್ಲಾಧಿಕಾರಿಯಾಗಿದ್ದ ಡಾ|ವಿಶಾಲ್ರವರು ರೂ. 1200 ಕೋಟಿ ದಂಡ ಹಾಕಿದ್ದನ್ನು ರದ್ದುಗೊಳಿಸಿದ್ದು ಯಾರು? . ಹಾಗೂ ಭೃಷ್ಟಾಚಾರ ನಡೆದಿದೆ ಎಂದು ಹೇಳುವ ರಘುಪತಿ ಭಟ್ರವರು ಆಗಿನ ಕಂದಾಯ ಮಂತ್ರಿ ಶ್ರೀ ಶ್ರೀನಿವಾಸ ಪ್ರಸಾದ್ರವರ ಬಳಿ ಕೇಳಬೇಕು. ಅವರು ಈಗ ಬಿ.ಜೆ.ಪಿ.ಯ ನಾಯಕರಾಗಿದ್ದಾರೆ ಎಂದರು.

ಜಿಲ್ಲಾಧಿಕಾರಿಯವರ ಹಾಗೂ ಪೊಲೀಸ್ ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಬಿ.ಜೆ.ಪಿ ಸರಕಾರ ಇರುವಾಗಲೂ ಆಗಿತ್ತು. ವರ್ಗಾವಣೆ ನಿರಂತರ ಪ್ರಕ್ರಿಯೆ. ತಾಂತ್ರಿಕ ಶಿಕ್ಷಣ ಪಡೆಯದ ಶಿಕ್ಷಣ ಇಲಾಖೆಯ ಅಧಿಕಾರಿಯವರಾಗಿದ್ದ ಮಂಜುನಾಥಯ್ಯರವರನ್ನು ಮೊದಲು ತಾಲೂಕು ಪಂಚಾಯತಿಯ ಕಾರ್ಯನಿರ್ವಹಣಾಧಿಕಾರಿ (ಇ.ಒ) ಮಾಡಿದ್ದು ಶ್ರೀ ರಘುಪತಿ ಭಟ್ಟರು ಎಂದು ತಿಳಿದಿರಲಿ. ನಗರಸಭೆಯ ಪೌರಾಯುಕ್ತರಾಗಿ ಎರಡು ವರ್ಷ ಏಳು ತಿಂಗಳುಗಳಾಗಿವೆಯಷ್ಟೇ? ಏಕೆ ಐದು ವರ್ಷ ಆಗಿದೆ ಎಂದು ಸುಳ್ಳು ಹೇಳುತ್ತೀರಿ ರಘುಪತಿ ಭಟ್ಟರೇ ಎಂದು ಪ್ರಶ್ನಿಸಿದರು?

ಮೀನುಗಾರರಿಗೆ ಪಡಿತರ ಸೀಮೆ ಎಣ್ಣೆ ನೀಡುವುದರಿಂದ ಸಬ್ಸಿಡಿ ಬಗ್ಗೆ ಆಹಾರ ಇಲಾಖೆ ಹಾಗೂ ಮುಖ್ಯಮಂತ್ರಿಯವರೊಂದಿಗೆ ವ್ಯವಹರಿಸುವವರು ಶಾಸಕ ಗೋಪಾಲ ಪೂಜಾರಿಯಾದುದರಿಂದ, ಮೀನುಗಾರರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ಮಾಡಿದಾಗ, ಅವರು ಮೀನುಗಾರರ ಮನವಿಯನ್ನು ಪಡೆದುಕೊಂಡು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಸಚಿವನಾಗಿ ನಾನು ಹೋಗುವ ಅವಶ್ಯಕತೆ ಇರಲಿಲ್ಲ. ಆದುದರಿಂದ ಹೋಗಲಿಲ್ಲ.

ಮೊನೊರೈಲು-ಗ್ಯಾಸ್ ಪೈಪ್ಲೈನ್: ರಾಜ್ಯದಲ್ಲಿ ಯೂಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ ಮೊನೊರೈಲಿಗೆ ಮೀಸಲಿಟ್ಟ ರೂ.ಒಂದು ಕೋಟಿ ಎಲ್ಲಿ ಹೋಯಿತು? ಮನೆಗಳಿಗೆ ನಲ್ಲಿ ಮುಖಾಂತರ ಗ್ಯಾಸ್ ಸರಬರಾಜು ಯೋಜನೆ, ಕೇಂದ್ರದಲ್ಲಿ ಯು.ಪಿ.ಎ ಸರಕಾರವಿದ್ದಾಗ ಇಂಧನ ಮಂತ್ರಿ ವೀರಪ್ಪ ಮೊಯಿಲಿರವರು ದಾಬೋಲ್ನಿಂದ ಕೊಳವೆ ಮೂಲಕ ಅಡುಗೆ ಅನಿಲ ವಿತರಣೆ ಮಾಡುವ ಯೋಜನೆ ಪ್ರಾರಂಭಗೊಳಿಸಿದರು. 2013ರಲ್ಲಿ ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗ ಆಶ್ವಾಸನೆ ಕೊಟ್ಟಿದ್ದು ನಿಜ. ಆದರೆ ನಂತರ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದುದರಿಂದ ಸದ್ರಿ ಯೋಜನೆಯನ್ನು ಕಾರ್ಯಗತಗೊಳಿಸಲಾಗಲಿಲ್ಲ. ಮೊನೋರೈಲು ಯೋಜನೆಯೂ ಆಗಲಿಲ್ಲ.

ರಘುಪತಿ ಭಟ್ರವರು ಶಾಸಕರಾಗಿದ್ದಾಗ ಬಿಲ್ಡರ್ ಹಾಗೂ ಗುತ್ತಿಗೆದಾರರಿಂದ ಹಣ ಪಡೆದುಕೊಂಡಿರಬಹುದು. ನನ್ನ ಬಗ್ಗೆ ಆರೋಪ ಹೊರಿಸುವ ರಘುಪತಿ ಭಟ್ಟರವರು ಭೃಷ್ಟಾಚಾರದ ಬಗ್ಗೆ ನಿಖರ ದಾಖಲೆಗಳಿದ್ದಲ್ಲಿ ಬಿಡುಗಡೆಗೊಳಿಸಿ ಎಂದು ಸವಾಲೆಸೆದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ನರಸಿಂಹ ಮೂರ್ತಿ, ಜನಾರ್ದನ ಭಂಡಾರ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಉಪಸ್ಥಿತರಿದ್ದರು.


Spread the love