Home Mangalorean News Kannada News ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಲು ಸಿಪಿಐ ಮನವಿ

ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಲು ಸಿಪಿಐ ಮನವಿ

Spread the love

ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಲು ಸಿಪಿಐ ಮನವಿ

ಮಂಗಳೂರು:  ಸಂವಿಧಾನ, ಜಾತ್ಯಾತೀತತೆ, ಪ್ರಜಾಸತ್ತೆಯ ರಕ್ಷಣೆಗಾಗಿ ಜನಪರ  ರಾಜಕೀಯ ನೀತಿಗಳನ್ನು ಬಲಪಡಿಸಿ ರಕ್ಷಿಸುವುದೇ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ಉದ್ದೇಶ.

ದಲಿತ – ಅಲ್ಪ ಸಂಖ್ಯಾತರು ನೆಮ್ಮದಿಯಾಗಿ ಬದುಕಲು, ರೈತ – ಕಾರ್ಮಿಕ – ಆದಿವಾಸಿ – ಮಹಿಳೆ – ಯುವಜನರ ಸ್ವಾಭಿಮಾನಿ ಬದುಕನ್ನು ರಕ್ಷಿಸುವುದೇ ನಮ್ಮ ಸಂಕಲ್ಪ. ಕೇಂದ್ರದ ಬಿಜೆಪಿ ಸರಕಾದಿಂದ ಇದ್ಯಾವುದರ ಈಡೇರಿಕೆ ಖಂಡಿತಾ ಸಾಧ್ಯವಿಲ್ಲ. ತನ್ನ ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶದ ವ್ಯಾಪಾರಸ್ಥರು ಭ್ರಮನಿರಸನಗೊಂಡಿದ್ದಾರೆ. ಅಮಿತ್ ಶಾ, ನರೇಂದ್ರ ಮೋದಿ ಹಾಗೂ ಇನ್ನಿತರ ಬಿಜೆಪಿ ನಾಯಕರುಗಳು ಮಿತಿಮೀರಿ ವರ್ತಿಸಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.

ಇಂದು ಸಂಘ ಪರಿವಾರದವರು ಹಿಂದೂಪರವೆಂದು ಸೋಗಲಾಡಿತನ ಪ್ರದರ್ಶಿಸುತ್ತಾ ಹಿಂದೂಗಳನ್ನು ದತ್ತು ತೆಗೆದುಕೊಂಡಂತೆ ವರ್ತಿಸುತ್ತಿದ್ದಾರೆ. ಇವರಿಂದ ಬಹುಸಂಖ್ಯಾತ ಹಿಂದೂಗಳಿಗೂ ಬದುಕಲು ಕಷ್ಟವಾಗಿದೆ. ದೇಶದ ಜಾತ್ಯಾತೀತ ಸಂಸ್ಕøತಿಯನ್ನು ಹಾಳುಗೆಡವುತ್ತಿದ್ದಾರೆ.

 ದೇಶದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರು ಹಸಿ ಹಸಿ ಸುಳ್ಳು ಹೇಳುತ್ತಾ, ಜನರಿಗೆ ತಪ್ಪು ಮಾಹಿತಿ ನೀಡುತ್ತಾ ಪ್ರಧಾನ ಮಂತ್ರಿಯ ಸ್ಥಾನಮಾನವನ್ನು ದುರುಪಯೋಗ ಮಾಡುತ್ತಿದ್ದಾರೆ. ಇವರಿಗೆ ಅಧಿಕಾರವೊಂದೇ ಮುಖ್ಯವಾಗಿದೆ.

ಪ್ರಸ್ತುತ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಸಮರ್ಥ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಲು ಪಕ್ಷ ತೀರ್ಮಾನಿಸಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವ್ಯಾಪ್ತಿಯ ಮೂಡಬಿದಿರೆ, ಮಂಗಳೂರು ನಗರ ದಕ್ಷಿಣ. ಮಂಗಳೂರು ನಗರ ಉತ್ತರ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಅಭಯಚಂದ್ರ ಜೈನ್, ಮೊಹಿಯುದ್ದೀನ್ ಬಾವ, ಜೆ. ಆರ್. ಲೋಬೊ, ಹಾಗೂ ಯು.ಟಿ ಖಾದರ್ ರವರುಗಳಿಗೆ ಮತ ನೀಡಿ ಕಾಂಗ್ರಸ್ ಪಕ್ಷವನ್ನು ಗೆಲ್ಲಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಮಂಗಳೂರು ತಾಲೂಕು ಸಮಿತಿ ಮತದಾರರನ್ನು ವಿನಂತಿಸಿದೆ.

ಈ ಬಗ್ಗೆ ಈಗಾಗಲೇ ಪಕ್ಷದ ಸದಸ್ಯರಿಗೆ, ಕಾರ್ಯಕರ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ತಾಲೂಕು ಕಾರ್ಯದರ್ಶಿ ವಿ.ಎಸ್ ಬೇರಿಂಜ ತಿಳಿಸಿದ್ದಾರೆ.


Spread the love

Exit mobile version