ಕಾಂಗ್ರೆಸ್ ಪಕ್ಷದ ಹಿನ್ನಡೆ ತಾತ್ಕಾಲಿಕ – ವಿನಯ ಕುಮಾರ್ ಸೊರಕೆ

Spread the love

ಕಾಂಗ್ರೆಸ್ ಪಕ್ಷದ ಹಿನ್ನಡೆ ತಾತ್ಕಾಲಿಕ – ವಿನಯ ಕುಮಾರ್ ಸೊರಕೆ

ಉಡುಪಿ: ಕಳೆದ ವಿಧಾನಸಭಾ ಚುನಾವಣಾ ಫಲಿತಾಂಶದಿಂದ ಕಾರ್ಯಕರ್ತರು ಎದೆಗುಂದಬಾರದು ಈ ಫಲಿತಾಂಶ ತಾತ್ಕಾಲಿಕ. ಕರಾವಳಿ ಪ್ರದೇಶದಲ್ಲಿ ಚುನಾವಣಾ ಸಮಯ ಭಾವನಾತ್ಮಕ ವಿಚಾರಗಳನ್ನು ಮುನ್ನಡೆಗೆ ತಂದು ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿ ಎಂದು ಬಿಂಬಿಸಿ ಬಿಜೆಪಿ ಮತ ಗಳಿಸುವ ಷಡ್ಯಂತ್ರವನ್ನು ರೂಪಿಸುತ್ತಿದೆ. ಆದರೆ ಕಾಂಗ್ರೆಸ್ ಪಕ್ಷವು ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಶೇ. 98ರಷ್ಟು ಕಾಯಕರ್ತರು ಹಿಂದೂಗಳು ಮತ್ತು ಜಿಲ್ಲೆಯ ದೇವಸ್ಥಾನ ಹಾಗೂ ದೈವಸ್ಥಾನಗಳ ಅಭಿವೃದ್ಧಿಯಲ್ಲಿ ಪಕ್ಷಗಳ ಮುಖಂಡರು ಮುಂದಾಳುತನ ವಹಿಸಿರುವಾಗ ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಎಂಬ ಬಿಜೆಪಿಯ ಹೇಳಿಕೆ ಹಾಸ್ಯಾಸ್ಪದ ಎಂದು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡ ಉಡುಪಿ ಬ್ಲಾಕ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಹೇಳಿದರು.


ಹಿಂದಿನ ನಮ್ಮ ಸರಕಾರದಿಂದ ಅನುಷ್ಠಾನಗೊಂಡ ಯೋಜನೆಗಳು ಈ ಸಮ್ಮಿಶ್ರ ಸರಕಾರದಲ್ಲಿಯೂ ಮುಂದುವರಿಯುವುದು. ಜನಪರ ಕಾಳಜಿಯೊಂದಿಗೆ ಒಳ್ಳೆಯ ಆಡಳಿತ ನೀಡಿದಲ್ಲಿ ಜನತೆಯ ಬೆಂಬಲ ಸದಾ ಇರುತ್ತದೆ. ಸರಕಾರದಿಂದ ಅನುಷ್ಠಾನಗೊಂಡ ಯೋಜನೆಗಳನ್ನು ಜನತೆಗೆ ಮನವರಿಕೆ ಮಾಡುವ ಜವಾಬ್ದಾರಿ ಕಾರ್ಯಕರ್ತರಿಗೆ ಇದೆ ಎಂದು ವಿಧಾನ ಪರಿಷತ್ ಸದಸ್ಯರಾದ ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಸಾರ್ವತ್ರಿಕ ಚುನಾವಣೆಗಳು ಕಾಂಗ್ರೆಸ್ ಪಕ್ಷಕ್ಕೆ ಸತ್ವ ಪರೀಕ್ಷೆಯಾಗಿದ್ದು, ಕಾರ್ಯಕರ್ತರು ಈಗಿಂದೀಗಲೇ ತೊಡಗಿಸಿಕೊಂಡು ಬಿಜೆಪಿಯ ಸುಳ್ಳು ಅಪಪ್ರಚಾರಗಳಿಗೆ ತಕ್ಕ ಉತ್ತರವನ್ನು ನೀಡಬೇಕಾಗಿದೆ. ಸ್ಥಳೀಯ ಚುನಾವಣೆಗಳಲ್ಲಿ ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸಿ ಸ್ಪರ್ಧಿಸಲು ಅವಕಾಶ ನೀಡಲಾಗುವುದು. ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಎಲ್ಲಾ ಮುಖಂಡರು ಒಮ್ಮತದಿಂದ ಭಾಗವಹಿಸುವ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ ಎಲ್ಲಾ ಬ್ಲಾಕ್ ಕಾರ್ಯಕರ್ತರ ಸಭೆಗಳು ಶ್ಲಾಘನೀಯ ಎಂದು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್‍ರವರು ಹೇಳಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ದನ ತೋನ್ಸೆ, ಕೆ.ಪಿ.ಸಿ.ಸಿ. ಕಾರ್ಯದರ್ಶಿ ಮುರಳಿ ಶೆಟ್ಟಿ, ಉಡುಪಿ ಹಾಗೂ ಬ್ರಹ್ಮಾವರ ಬ್ಲಾಕ್ ಅಧ್ಯಕ್ಷರುಗಳಾದ ಸತೀಶ್ ಅಮೀನ್ ಪಡುಕರೆ ಹಾಗೂ ನಿತ್ಯಾನಂದ ಶೆಟ್ಟಿ, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸೇವಾದಳದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಹಾಗೂ ಪಕ್ಷದ ಮುಖಂಡರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಬಿ. ನರಸಿಂಹ ಮೂರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್ ಇಸ್ಮಾಯಿಲ್ ಆತ್ರಾಡಿ, ಭಾಸ್ಕರ್ ರಾವ್ ಕಿದಿಯೂರು, ಶಬ್ಬೀರ್ ಅಹಮ್ಮದ್, ಪ್ರಖ್ಯಾತ್ ಶೆಟ್ಟಿ, ಕೀರ್ತಿ ಶೆಟ್ಟಿ, ಯತೀಶ್ ಕರ್ಕೇರ, ಸದಾಶಿವ ಕಟ್ಟೆಗುಡ್ಡೆ, ಸುಜಯ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ಕಾರ್ಯಕ್ರಮ ನಿರ್ವಹಿಸಿದರು.


Spread the love