ಕಾಂಗ್ರೆಸ್ ಪಟ್ಟಿ ಬಿಡುಗಡೆ;ಮಧ್ವರಾಜ್, ಸೊರಕೆ, ಗೋಪಾಲ ಪೂಜಾರಿ, ಮಲ್ಲಿ ಮತ್ತು ಭಂಡಾರಿಗೆ ಟಿಕೆಟ್

Spread the love

ಕಾಂಗ್ರೆಸ್ ಪಟ್ಟಿ ಬಿಡುಗಡೆ;ಮಧ್ವರಾಜ್, ಸೊರಕೆ, ಗೋಪಾಲ ಪೂಜಾರಿ, ಮಲ್ಲಿ ಮತ್ತು ಭಂಡಾರಿಗೆ ಟಿಕೆಟ್

ಉಡುಪಿ: ಹಲವು ರೀತಿಯಿಲ್ಲಿ ಅಳೆದು ತೂಗಿ ರಾಜ್ಯ ವಿಧಾನಸಭೆಗೆ ಕಾಂಗ್ರೆಸ್ ಪಕ್ಷ ಭಾನುವಾರ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಉಡುಪಿ ಜಿಲ್ಲೆಯ 5 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಘೋಷಣೆ ಮಾಡಿದೆ.

ಮಧ್ಯಾಹ್ನ ಮೂರು ಗಂಟೆಗೆ ಬಿಡುಗಡೆ ಮಾಡುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದರು ಕೊನೆಯದಾಗಿ ಹಲವು ಸುತ್ತಿನ ಮಾತುಕತೆಯ ಬಳಿಕ ರಾತ್ರಿ 9 ಗಂಟೆಯ ಬಳಿಕ ಪಟ್ಟಿ ಬಿಡುಗಡೆ ಮಾಡಿದೆ.

ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಳೆದ ಬಾರಿ ಕಾಂಗ್ರೆಸ್ ಪಕ್ಷ ಗೆದ್ದಿದ್ದು ಅದರಂತೆ ಹಾಲಿ ಶಾಸಕರಿಗೆ ಟಿಕೇಟ್ ನೀಡಲಾಗಿದೆ. ಬೈಂದೂರು ಕ್ಷೇತ್ರದಿಂದ ಹಾಲಿ ಶಾಸಕ ಗೋಪಾಲ ಪೂಜಾರಿ, ಉಡುಪಿ ಕ್ಷೇತ್ರದಿಂದ ಸಚಿವ ಹಾಗೂ ಹಾಲಿ ಶಾಸಕ ಪ್ರಮೋದ್ ಮಧ್ವರಾಜ್ ಮತ್ತು ಕಾಪು ಕ್ಷೇತ್ರದಲ್ಲಿ ಮಾಜಿ ಸಚಿವ ಹಾಲಿ ಶಾಸಕ ವಿನಯ್ ಕುಮಾರ್ ಸೊರಕೆಗೆ ಪಕ್ಷ ಟಿಕೇಟ್ ನೀಡಿದೆ.

ಬಹಳ ಕುತೂಹಲ ಕೆರಳಿಸಿದ ಕಾರ್ಕಳ ಕ್ಷೇತ್ರದಲ್ಲಿ ಉದ್ಯಮಿ ಮುನಿಯಾಲು ಉದಯ್ ಶೆಟ್ಟಿ ಮತ್ತು ಮಾಜಿ ಶಾಸಕ ಗೋಪಾಲ ಭಂಡಾರಿ ನಡುವೆ ತೀವ್ರ ಪೈಪೋಟಿ ಇತ್ತು. ಕೊನೆಯ ಕ್ಷಣದ ವರೆಗೂ ಉದಯ್ ಶೆಟ್ಟಿ ಬಣ ತನ್ನ ನಾಯಕನಿಗೆ ಟಿಕೇಟ್ ನೀಡಲೇ ಬೇಕು ಎಂಬ ಒತ್ತಡ ನೀಡಿತ್ತು ಅಲ್ಲದೆ ಒಂದೊಮ್ಮೆ ಉದಯ್ ಶೆಟ್ಟಿಯವರಿಗೆ ಟಿಕೇಟ್ ನೀಡದೆ ಹೋದಲ್ಲಿ ಚುನಾವಣೆಯಲ್ಲಿ ತಟಸ್ಥ ಧೋರಣೆ ಅನುಸರಿಸುವುದಾಗಿ ಬೆದರಿಕೆ ಹಾಕಿತ್ತು. ಇವ್ಯಾವುದನ್ನು ಗಮನಕ್ಕೆ ತೆಗೆದುಕೊಳ್ಳದ ಹೈಕಮಾಂಡ್ ಮಾಜಿ ಮುಖ್ಯಮಂತ್ರಿಯ ಕಟ್ಟಾ ಬೆಂಬಲಿಗ ಎರಡು ಬಾರಿಯ ಮಾಜಿ ಶಾಸಕ ಗೋಪಾಲ ಭಂಡಾರಿಗೆ ಟಿಕೇಟ್ ನೀಡಿದೆ. ಗೋಪಾಲ್ ಭಂಡಾರಿಗೆ ಟಿಕೇಟ್ ಖಾತ್ರಿಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮುನಿಯಾಲು ಉದಯ್ ಶೆಟ್ಟಿ ಬಣದ ಬೆಂಬಲಿಗರು ವೀರಪ್ಪ ಮೊಯ್ಲಿಯ ವಿರುದ್ದ ತಮ್ಮ ಸಿಟ್ಟನ್ನು ಹೊರ ಹಾಕಲು ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಇದನ್ನು ಗೋಪಾಲ ಭಂಡಾರಿ ಯಾವ ರೀತಿಯ ನಿಭಾಯಿಸುತ್ತಾರೆ ಎನ್ನುವುದು ಕಾದು ನೋಡಬೇಕು.

ಅಲ್ಲದೆ ಕುಂದಾಪುರ ಕ್ಷೇತ್ರದಿಂದ ರಾಜ್ಯ ಇಂಟಕ್ ಅಧ್ಯಕ್ಷರಾಗಿರುವ ರಾಕೇಶ್ ಮಲ್ಲಿಗೆ ಪಕ್ಷ ಟಿಕೇಟ್ ನೀಡಿದೆ. ಕಳೆದ 4-5 ತಿಂಗಳಿನಿಂದ ಕುಂದಾಪುರದಲ್ಲಿ ಮನೆಯನ್ನು ಮಾಡಿ ಕ್ಷೇತ್ರದಾದ್ಯಂತ ಸಂಚಾರ ಮಾಡಿರುವ ರಾಕೇಶ್ ಮಲ್ಲಿಯವರು ಈ ಬಾರಿ ಕುಂದಾಪುರದ ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿಯನ್ನು ಎದುರಿಸಲಿದ್ದಾರೆ.


Spread the love