ಕಾಂಗ್ರೆಸ್ ಸರಕಾರದಿಂದ 40000 ಕುಟುಂಬಗಳ ಪಡಿತರ ಚೀಟಿ ರದ್ದತಿ ದುರದೃಷ್ಠಕರ – ಗುರ್ಮೆ ಸುರೇಶ್ ಶೆಟ್ಟಿ

Spread the love

ಕಾಂಗ್ರೆಸ್ ಸರಕಾರದಿಂದ 40000 ಕುಟುಂಬಗಳ ಪಡಿತರ ಚೀಟಿ ರದ್ದತಿ ದುರದೃಷ್ಠಕರ – ಗುರ್ಮೆ ಸುರೇಶ್ ಶೆಟ್ಟಿ

ಉಡುಪಿ: ಕಾಂಗ್ರೇಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪಂಚ ಗ್ಯಾರಂಟಿಗಳನ್ನು ನೀಡುವುದಾಗಿ ಜನರಿಗೆ ಭರವಸೆ ನೀಡಿ ಸರಕಾರ ರಚನೆಯಾದ ನಂತರ ಪ್ರಾರಂಭಿಕ ಹಂತದಲ್ಲಿ ಕಠಿಣ ಮಾರ್ಗಸೂಚಿಗಳೊಂದಿಗೆ ತುರಾತುರಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಜನರ ಮುಂಗೈಗೆ ತುಪ್ಪ ಸವರುವ ಕೆಲಸ ಮಾಡಿದೆ. ಇದು ಪ್ರಜಾಪ್ರಭುತ್ವದ ಹಗಲು ಕಗೊಲೆಯಾಗಿರುತ್ತದೆ. ಪ್ರಾರಂಭಿಕ ಹಂತದಲ್ಲಿ ಬಿ.ಪಿ.ಎಲ್ ಪಡಿತರ ಚೀಟಿಯನ್ನು ಪಡೆದ ಕುಟುಂಬಗಳ ಬಗ್ಗೆ ಪರಿಶೀಲನೆ ನಡೆಸದೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಈಗ ಪೇಚಿಗೆ ಸಿಕ್ಕಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಹೋರಿಯ ಹುಣ್ಣಿಗೆ ಎತ್ತಿಗೆ ಬರೆ ಎಳೆದಂತಾಗಿರುತ್ತದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ

ಪಂಚ ಗ್ಯಾರಂಟೆಗಳ ಅನುಷ್ಠಾನಕ್ಕೆ ಸರಕಾರದ ಬೊಕ್ಕಸದಲ್ಲಿ ಅನುದಾನದ ಕೊರತೆಯಿಂದಾಗಿ ಅನರ್ಹತೆಯ ನೆಪವೊಡ್ಡಿ ಉಡುಪಿ ಜಿಲ್ಲೆಯಲ್ಲಿ ಸುಮಾರು 40000 ಕುಟುಂಬಗಳ ಪಡಿತರ ಚೀಟಿಯನ್ನು ಯಾವುದೇ ಪರಿಶೀಲನೆ ಮತ್ತು ಸರ್ವೆಯನ್ನು ನಡೆಸದೇ ಸ್ಥಳೀಯ ಪಡಿತರ ಅಂಗಡಿಗಳಿಗೆ ರೇಷನ್ ನೀಡಬಾರದೆಂದು ತಾಕೀತು ಮಾಡಿರುವುದರಿಂದ ಸಣ್ಣ ರೈತರ, ಕೂಲಿ ಕಾರ್ಮಿಕರ, ಕಡುಬಡವರ, ಜೀವನವನ್ನು ಶೋಚನೀಯ ಸ್ಥಿತಿಗೆ ತಳ್ಳಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಇದು ಕಾಂಗ್ರೇಸ್ ಸರಕಾರ ಜನರಿಗೆ ನೀಡಿದ ಎಷ್ಟನೆ ಗ್ಯಾರಂಟಿ..?

ಕಾಪು ತಾಲೂಕಿನಲ್ಲಿ 4550 ಹಾಗೂ ಉಡುಪಿ ತಾಲೂಕಿನಲ್ಲಿ 11280 ಬಿ.ಪಿ.ಎಲ್ ಪಡಿತರ ಚೀಟಿಯನ್ನು ರದ್ದತಿಗೆ ಕ್ರಮ ಕೈಗೊಂಡಿರುವುದು ಬೇಲಿಯೇ ಎದ್ದು ಹೊಲ ಮೆಯ್ದಂತಿದೆ. ಸರಕಾರವು ಈ ಬಗ್ಗೆ ಅನರ್ಹ ಪಡಿತರ ಚೀಟಿಯನ್ನು ಹೊಂದಿದವರ ದಾಖಲೆಗಳ ನೈಜತೆಯ ಪರಿಶೀಲನೆಯನ್ನು ನಡೆಸಿದ ನಂತರ ರದ್ದತಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯ ವ್ಯಾಪಿ ಹೋರಾಟ ನಡೆಸಲಾಗುವುದು.

ಕಾಂಗ್ರೇಸ್ ಸರಕಾರವು ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರಾವರಿ ಸೌಲಭ್ಯ, ಆರೋಗ್ಯ, ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸುತ್ತಿರುವುದು ಶೋಚನೀಯ. ಅಂಗನವಾಡಿ ಸಹಾಯಕಿ ಹಾಗೂ ಕಾರ್ಯಕರ್ತೆ ಇವರನ್ನು ಪಂಚ ಗ್ಯಾರಂಟಿಗಳ ಅನುಷ್ಠಾನದ ಸರ್ವೆ ಕಾರ್ಯಗಳಿಗೆ ಬಳಸಿಕೊಂಡು ಮೂರು ತಿಂಗಳ ವರೆಗೆ ವೇತನವನ್ನು ನೀಡದೇ ಇರುವುದು ಹಾಗೂ ಸರಕಾರಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಎಂ.ಆರ್.ಐ ಸ್ಕ್ಯಾನಿಂಗ್, ಡಯಾಲಿಸಿಸ್ ಮೆಶಿನ್ ಗಳನ್ನು ಸಮರ್ಪಕ ನಿರ್ವಹಣೆಗೆ ತಾಂತ್ರಿಕ ಸಿಬ್ಬಂದಿಗಳೊಂದಿಗೆ ನಿರ್ವಹಣಾ ಅನುದಾನವನ್ನು ನೀಡದೇ ಇರುವುದು, ಶಾಲಾ-ಕಾಲೇಜು ಸರಕಾರಿ ಕಟ್ಟಡಗಳಿಗೆ ತೆರಿಗೆ ವಸೂಲಾತಿಯ ನೆಪವೊಡ್ಡಿ ವಿದ್ಯುತ್ ಸಂಪರ್ಕ ಕಡಿತ ಮಾಡಿರುವುದು. ವಾಲ್ಮೀಕಿ ನಿಗಮದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿರುವುದು ಸರಕಾರದ ಆರ್ಥಿಕ ದಿವಾಳಿಗೆ ಹಿಡಿದ ಕೈಗನ್ನಡಿಯಂತಿದೆ.

ಕಾಂಗ್ರೇಸ್ ಪಕ್ಷ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡುವ ಭರವಸೆಯನ್ನು ನೀಡಿ ಸರಕಾರವನ್ನು ರಚಿಸಿ ಸಾರ್ವಜನಿಕರಿಗೆ ಆಡಳಿತಾತ್ಮಕ ವಿಷಯದಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿರುವುದು ಖೇದಕರ ಸಂಗತಿಯಾಗಿರುತ್ತದೆ. ಈ ಹಿಂದೆ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಸ್ಥಳೀಯ ಯೋಜನಾ ಪ್ರದೇಶದ ಹೊರಭಾಗದಲ್ಲಿ 1 ಎಕ್ರೆ ಗಿಂತ ಕಡಿಮೆ ಇರುವ ಭೂ ಪ್ರದೇಶದ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಯ ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಗಳಿಗೆ ಅವಕಾಶ ನೀಡಿದ್ದರಿಂದ ಜನರ ಕೆಲಸ ಕಾರ್ಯಗಳು ಸುಗಮವಾಗುತ್ತಿದ್ದು, ಈಗ ಪ್ರಸ್ತುತ ನದ್ದಿ ಅಧಿಕಾರವನ್ನು ನಗರ ಪ್ರಾಧಿಕಾರಕ್ಕೆ ನೀಡಿರುವುದರಿಂದ ಕಡತಗಳು ವಿಲೇವಾರಿ ಆಗದೇ ಇದ್ದು, ಸಾಮಾನ್ಯ ಜನರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸರಕಾರ ನೇರ ಹೊಣೆಗಾರವಾಗಿರುತ್ತದೆ. ಜನರಿಗೆ 94 ಸಿ ಹಾಗೂ 94 ಸಿಸಿ ಯಲ್ಲಿ ಹಕ್ಕು ಪತ್ರಗಳನ್ನು ನೀಡುವ ಬಗ್ಗೆ ಡೀಮ್ಡ್ ಫಾರೆಸ್ಟ್ ವಿರಹಿತ ಪ್ರದೇಶವನ್ನು ಜಂಟಿ ಸರ್ವೆಯ ಮೂಲಕ ಕಂದಾಯ ಇಲಾಖೆಗೆ ಹಸ್ತಾಂತರ ಮಾಡದೇ ಬಹು ವರ್ಷಗಳಿಂದ ಸರಕಾರಿ ಜಾಗದಲ್ಲಿ ವಾಸ್ತವ್ಯ ಮನೆ ನಿರ್ಮಿಸಿಕೊಂಡವರಿಗೆ ಅಧಿಕೃತ ಹಕ್ಕು ಪತ್ರವನ್ನು ಕೊಡವಲ್ಲಿ ಸರಕಾರದ ದಿವ್ಯ ನಿರ್ಲಕ್ಷ ಎದ್ದು ಕಾಣುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ಹಕ್ಕು ಪತ್ರವನ್ನು ನೀಡುವಲ್ಲಿ ಕ್ರಮವಹಿಸಬೇಕಾಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಂದಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ 5 ಕ್ಷೇತ್ರದ ಶಾಸಕರು ಈ ಬಗ್ಗೆ ಉಗ್ರ ಹೋರಾಟ ನಡೆಸುವುದರಲ್ಲಿ ಬೇರೆ ಮಾತಿಲ್ಲ. ರಾಜ್ಯ ಮಟ್ಟದಲ್ಲಿ ಗ್ರಾಮಾಡಳಿತ ಅಧಿಕಾರಿಯವರು ಹಾಗೂ ಪಂಚಾಯತ್ ರಾಜ್ ನೌಕರರು ಅನಿರ್ಧಿಷ್ಟಾವಧಿಯ ಮುಷ್ಕರವನ್ನು ನಡೆಸುತ್ತಿರುವುದು ಸರಕಾರದ ಆಡಳಿತಾತ್ಮಕ ನ್ಯೂನತೆಯನ್ನು ಎತ್ತಿ ಹಿಡಿಯುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments