Home Mangalorean News Kannada News ಕಾರಂತರು ಸಾಹಿತ್ಯ ಕ್ಷೇತ್ರದಲ್ಲಿ ಪ್ರಭಾವಿಸಿದ ಪರಿ ಭಿನ್ನ : ಡಾ. ಮೋಹನ್ ಆಳ್ವ

ಕಾರಂತರು ಸಾಹಿತ್ಯ ಕ್ಷೇತ್ರದಲ್ಲಿ ಪ್ರಭಾವಿಸಿದ ಪರಿ ಭಿನ್ನ : ಡಾ. ಮೋಹನ್ ಆಳ್ವ

Spread the love

ಕಾರಂತರು ಸಾಹಿತ್ಯ ಕ್ಷೇತ್ರದಲ್ಲಿ ಪ್ರಭಾವಿಸಿದ ಪರಿ ಭಿನ್ನ : ಡಾ. ಮೋಹನ್ ಆಳ್ವ

ವಿದ್ಯಾಗಿರಿ : ಬದುಕಿಗೆ ವಿಮುಖವಾಗಿ ಕಾರಂತರು ಇದ್ದವರಲ್ಲ. ಕಾರಂತರನ್ನು ಚಿರಸ್ಥಾಯಿಯನ್ನಾಗಿ ಉಳಿಸಿಕೊಳ್ಳುವುದಕ್ಕೆ ಸಂಘ ಸಂಸ್ಥೆಗಳನ್ನು ಕಟ್ಟುವ ಅಗತ್ಯವಿಲ್ಲ. ಅವರ ಸಾಹಿತ್ಯ ಕೃತಿಗಳೇ ಅವರನ್ನು ಚಿರಾಯುವಾಗಿ ಉಳಿಸುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಮ್ ಮೋಹನ್ ಆಳ್ವ ಹೇಳಿದರು.

ಆಳ್ವಾಸ್ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಶಿವರಾಮ ಕಾರಂತ ಪ್ರತಿಷ್ಠಾನ, ಮೂಡುಬಿದಿರೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಡೆದ ಶಿವರಾಮ ಕಾರಂತ ಪ್ರಶಸ್ತಿ, ಶಿವರಾಮ ಕಾರಂತ ಪುರಸ್ಕಾರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಕೋಟ ಶಿವರಾಮ ಕಾರಂತರು ಸಾಹಿತ್ಯ ಕ್ಷೇತ್ರದಲ್ಲಿ ಪ್ರಭಾವಿಸಿದ ಪರಿ ದೊಡ್ಡದು. ವಿಚಾರ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದವರು ಕಾರಂತರು. ಅವರದ್ದು ಅಂಕುಶವಿಲ್ಲದ ವೈಚಾರಿಕ ಪ್ರಜ್ಞೆ. ಎಂದಿಗೂ ಜಾತಿ, ಧರ್ಮವನ್ನು ಭಿನ್ನತೆಯನ್ನು ಬೆಂಬಲಿಸಿದವರಲ್ಲ. ಕಾರಂತರ ಚಿಂತನೆ, ಸಾಹಿತ್ಯ ಎಂದಿಗೂ ಪ್ರಸ್ತುತ. ಅವರ ಜೀವನಾದರ್ಶವೇ ನಮ್ಮ ಬದುಕಿಗೆ ಪಾಠ ಎಂದರು.

ಶಿವರಾಮ ಕಾರಂತ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ಸಾಹಿತಿ ಟಿ. ಎಂ ಸುಬ್ಬರಾಯ, ಕಾರಂತರು ಸಾಹಿತ್ಯ ಕ್ಷೇತ್ರಕ್ಕೆ ಮೇರು ಉದಾಹರಣೆ. ಅವರ ಸಾಹಿತ್ಯದಲ್ಲಿ ಪ್ರಾದೇಶಿಕತೆಯ ಸೊಗಡಿತ್ತು, ಭಾಷೆಯಿತ್ತು, ಆಚಾರ ವಿಚಾರಗಳಿತ್ತು. ಸಾಹಿತ್ಯಕ್ಕೆ ಮೂಲವೇ ಪ್ರಾದೇಶಿಕತೆ. ಪ್ರಾದೇಶಿಕತೆಯನ್ನು ಹೊರತಾಗಿ ಇರುವ ಸಾಹಿತ್ಯಕ್ಕೆ ಗಟ್ಟಿತನÀವಿರುವುದಿಲ್ಲ ಎಂದರು.

ರಾಜಾರಾಮ್ ತಲ್ಲೂರು ಅವರ ‘ತಲ್ಲೂರು ಎಲ್. ಎನ್’ ಕೃತಿಗೆ ಹಾಗೂ ಡಾ. ಪಿ. ಚಂದ್ರಿಕಾ ಅವರ ‘ಮೋದಾಳಿ’ ಕೃತಿಗೆ ದಿವಂಗತ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ಸ್ಮರಣಾರ್ಥ ಹಾಗೂ ದಿವಗಂತ ಕೆ. ಶೀನಪ್ಪ, ಮೂಡುಬಿದಿರೆ ಸ್ಮರಣಾರ್ಥ ಶಿವರಾಮ ಕಾರಂತ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭ ಮೂಡುಬಿದಿರೆ ವಲಯದ ಪ್ರೌಢ ಶಾಲಾ ಮಟ್ಟದ ‘ಶಿವರಾಮ ಕಾರಂತ ಓದು’ ಸ್ಪರ್ಧೆಯ ಪ್ರಥಮ ಬಹುಮಾನವನ್ನು ಆಳ್ವಾಸ್ ಆಂಗ್ಲ ಮಾದ್ಯಮ ಶಾಲೆಯ ಸಿದ್ದರಾಮಯ್ಯ ಎಚ್.ಕೆ, ರೋಟರಿ ಆಂಗ್ಲ ಮಾದ್ಯಮ ಶಾಲೆಯ ವೈಷ್ಣವಿ ಭಟ್‍ಗೆ ಹಾಗೂ ದ್ವಿತೀಯ ಬಹುಮಾನವನ್ನು ಆಳ್ವಾಸ್ ಕನ್ನಡ ಮಾದ್ಯಮ ಶಾಲೆಯ ಶಿವರಾಮ್ ಹಾಗೂ ಸಾಕ್ಷಿ ಆರ್.ಕೆ ಅವರಿಗೆ ವಿತರಿಸಲಾಯಿತು.

ಶಿವರಾಮ ಕಾರಂತ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ, ಮಾಜಿ ಸಚಿವ ದಿ. ಕೆ. ಅಮರನಾಥ ಶೆಟ್ಟಿಯವರಿಗೆ ಎಮ್.ಸಿ.ಎಸ್ ಬ್ಯಾಂಕ್, ಮೂಡುಬಿದಿರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಮ್. ಚಂದ್ರಶೇಖರ ನುಡಿನಮನ ಸಲ್ಲಿಸಿದರು.

ತದನಂತರ ‘ಸಾಹಿತ್ಯ ಸ್ಪಂದನ’ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಉದ್ಯಮಿ ಕೆ. ಶ್ರೀಪತಿ ಭಟ್, ಭಾನುಮತಿ ಶೀನಪ್ಪ, ಮೂಡುಬಿದಿರೆ, ಶಿವರಾಮ ಕಾರಂತ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ್ ಮಾವಿನಕುಳಿ, ಕೋಶಾಧಿಕಾರಿ ಕೆ. ಕೃಷ್ಣರಾಜ ಹೆಗ್ಡೆ, ಪ್ರತಿಷ್ಠಾನದ ಸದಸ್ಯ ರಾಜಾರಾಂ ಮೂಡುಬಿದಿರೆ, ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು.


Spread the love

Exit mobile version