ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವುದು ಖಚಿತ ; ಪ್ರಕಾಶ್ ರೈ ಸ್ಪಷ್ಟನೆ

Spread the love

ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವುದು ಖಚಿತ ; ಪ್ರಕಾಶ್ ರೈ ಸ್ಪಷ್ಟನೆ

ಉಡುಪಿ: ಡಾ.ಶಿವರಾಮ ಕಾರಂತ ಟ್ರಸ್ಟ್, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಹಾಗೂ ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ನೀಡಲಾಗುವ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸುದು ನಿಶ್ಚಿತ ಎಂದು ಪ್ರಶಸ್ತಿ ವಿಜೇತ ಬಹುಭಾಷಾ ನಟ ಪ್ರಕಾಶ್ ರೈ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಟಿವಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರೈ ಅವರು ಏನೇ ಆದರೂ ಸರಿ ಸಮಾರಂಭಕ್ಕೆ ಹೋಗುವುದು ನಿಶ್ಚಿತ, ಮಂಗಳೂರಿಗೆ ವಿಮಾನ ಟಿಕೇಟ್ ಕೂಡ ಕನ್ಫರ್ಮ್ ಆಗಿದೆ. ಲೈಫ್ ಇಸ್ ವೆರಿ ಸಿಂಪಲ್ ಹಾಗಾಗಿ ಏನೆ ಬಂದರೂ ಫೇಸ್ ಮಾಡಬೇಕು ಎಂದಿರುವ ಪ್ರಕಾಶ್ ರೈ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವುದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗಷ್ಟೇ, ಗೌರಿ ಲಂಕೇಶ್ ಅವರ ಹತ್ಯೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಹೇಳಿಕೆ ನೀಡುವ ಮೂಲಕ ಪ್ರಕಾಶ್ ರೈ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದ್ದರಿಂದ ವಿವಾದಾತ್ಮಕ ಹೇಳಿಕೆ ನೀಡುವವರಿಗೆ ಈ ಪ್ರಶಸ್ತಿ ಕೂಡಬಾರದೆಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತಿದ್ದು ಹಲವಾರು ಸಂಘಟನೆಗಳು ಬಹಿರಂಗವಾಗಿಯೇ ಕಾರ್ಯಕ್ರಮದ ದಿನ ಪ್ರಕಾಶ್ ರೈ ಅವರಿಗೆ ಕಪ್ಪುಬಾವುಟ ಪ್ರದರ್ಶನದ ಬೆದರಿಕೆಯನ್ನು ಹಾಕಿದ್ದಾರೆ.

ಈ ನಡುವೆ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪಡೆಯಲು ಕೋಟಕ್ಕೆ ಆಗಮಿಸುತ್ತಿರುವ ನಟ ಪ್ರಕಾಶ ರೈಯವರನ್ನು ಉಡುಪಿ ಜಿಲ್ಲೆಗೆ ಸ್ವಾಗತಿಸಲು  ಹಲವಾರು ಸಂಘಟನೆಗಳು ಇಂದು ನಡೆದ ಸಭೆಯಲ್ಲಿ ನಿರ್ದರಿಸಿವೆ. ಕೆಲವು ಸಂಘಟನೆಗಳು ಅವರ ಆಗಮನವನ್ನು ವಿರೋಧಿಸುತ್ತಿರುವುದು ದುರದೃಷ್ಟಕರ ಎಂದು ಸಂಘಟನೆಗಳು ಅಭಿಪ್ರಾಯ ಪಟ್ಟಿವೆ.

ರೈಯವರು ಕರಾವಳಿ ಜಿಲ್ಲೆಯ ಹೆಮ್ಮೆಯ ಪುತ್ರ. ಪ್ರಧಾನ ಮಂತ್ರಿಯ ಕುರಿತಾಗಿ ಮಾತನಾಡಿದ್ದಾರೆ ಎಂಬ ಮಾತ್ರಕ್ಕೆ ವಿರೋಧ ಮಾಡುವುದು ಸರಿಯಲ್ಲ ಎಂದು ಸಂಘಟನೆಗಳು ಅಭಿಪ್ರಾಯ ಪಟ್ಟಿವೆ.

ಮಂಗಳವಾರ ಮಧ್ಯಾಹ್ನ 2ರಿಂದ 3ಗಂಟೆ ನಡುವೆ ಕಲ್ಯಾಣಪುರ ಸಂತಕಟ್ಟೆ ಬಳಿ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿದೆ.

ದಲಿತ ದಮನಿತರ ಹೋರಾಟ ಸಮಿತಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಸಿಐಟಿಯು, ಡಿವೈಎಫ್ ಐ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ, ವಿಮಾ ನೌಕರರ ಸಂಘ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಕ್ರೈಸ್ತ ವೇದಿಕೆ ಮೊದಲಾದ ಸಂಘಟನೆಗಳ ಮುಖಂಡರಾದ  ಸುಂದರ ಮಾಸ್ಟರ್, ಶಾಮರಾಜ್ ಬಿರ್ತಿ, ವಿಲಿಯಮ್ ಮಾರ್ಟಿಸ್, ಹುಸೇನ್ ಬೆಂಗ್ರೆ, ಗುರುದತ್ತ, ವಿಶ್ವನಾಥ ಪೆತ್ರಿ, ಬಾಲಕೃಷ್ಣ ಶೆಟ್ಟಿ, ಕವಿರಾಜ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.


Spread the love