ಕಾರವಾರ: ಸಮುದ್ರದಲ್ಲಿ ಸಿಲುಕಿದ್ದ 18 ಮೀನುಗಾರರ ರಕ್ಷಣೆ
ಕಾರವಾರ: ಎಂಜಿನ್ ವೈಫಲ್ಯದಿಂದ ಇಲ್ಲಿನ ಕೂರ್ಮಗಡ ನಡುಗಡ್ಡೆ ಬಳಿ ಸಮುದ್ರದಲ್ಲಿ ಬಾಕಿಯಾಗಿದ್ದ ಮೀನುಗಾರಿಕಾ ದೋಣಿಯಲ್ಲಿದ್ದ ಮೀನುಗಾರರನ್ನು ಭಾರತೀಯ ನೌಕಾದಳ ಮತ್ತು ಕೋಸ್ಟ್ ಗಾರ್ಡ್ ಸಿಬಂದಿ ಶನಿವಾರ ರಕ್ಷಣೆ ಮಾಡಿದ್ದಾರೆ.
ದೋಣಿಯು ಶುಕ್ರವಾರ ಸಂಜೆ ಪ್ರಕ್ಷುಬ್ದ ಸಮುದ್ರದಲ್ಲಿ ಸಿಲುಕಿಕೊಂಡಿತ್ತು, ಮಲ್ಪೆಯಿಂದ ಹೊರಟಿದ್ದ ರಾಜಕಿರಣ್ ಮತ್ತು ಮಂಗಳೂರಿನ ಮಹೀಲ್ ಹೆಸರಿನ ದೋಣಿಯಲ್ಲಿದ್ದ ಒಟ್ಟು 18 ಮಂದಿಯನ್ನು ರಕ್ಷಿಸಲಾಗಿದ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ರಾಜ್ಯ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಕಾರವಾರ ಜಿಲ್ಲಾಧಿಕಾರಿಯವರಿಗೆ ತುರ್ತು ಸೂಚನೆ ನೀಡಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರ ಮೂಲಕ ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನು ಸಂಪರ್ಕಿಸಿ, ಕರ್ನಾಟಕದ ಮೀನುಗಾರರಿಗೆ ನಿಯಮದ ಹೆಸರಿನಲ್ಲಿ ಕಿರುಕುಳವಾಗದಂತೆ ಮತ್ತು ಸಂಕಷ್ಟದಲ್ಲಿರುವ ಮೀನುಗಾರರ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ, ಅಗತ್ಯ ವಿದ್ದರೆ ಹೆಲಿಕಾಪ್ಟರ್ ಸೇವೆ ಬಳಸಿಕೋಳ್ಳಲು ಸಚಿವರು ಸೂಚಿಸಿದ್ದರು.
ಇದೀಗ ಎರಡು ಬೋಟ್ ನಲ್ಲಿ ಇದ್ದ ಎಲ್ಲಾ 18 ಮೀನುಗಾರರನ್ನು ರಕ್ಷಿಸಿ ಮಂಗಳೂರು ಮತ್ತು ಮಲ್ಪೆಗೆ ಕರೆತರಲಾಗುತ್ತಿದೆ.
ನಿನ್ನೆಯಿಂದ ನಿರಂತರವಾಗಿ ಕಾರವಾರ ಜಿಲ್ಲಾಧಿಕಾರಿ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಸಂಪರ್ಕದಲ್ಲಿದ್ದು, ಮೀನುಗಾರರ ರಕ್ಷಣೆಗೆ ತಕ್ಷಣ ಸ್ಪಂದಿಸಿದ ರಾಜ್ಯ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಮೀನುಗಾರರು ಅಭಿನಂದಿಸಿದ್ದಾರೆ.