Home Mangalorean News Kannada News ಕಾರವಾರ: ಹೇರಳವಾಗಿ ಬಲೆಗೆ ಬಿದ್ದ ‘ಕಾರ್ಗಿಲ್’ ಮೀನು

ಕಾರವಾರ: ಹೇರಳವಾಗಿ ಬಲೆಗೆ ಬಿದ್ದ ‘ಕಾರ್ಗಿಲ್’ ಮೀನು

Spread the love

ಕಾರವಾರ: ಹೇರಳವಾಗಿ ಬಲೆಗೆ ಬಿದ್ದ ‘ಕಾರ್ಗಿಲ್’ ಮೀನು

ಕಾರವಾರ (ಪ್ರಜಾವಾಣಿ ವಾರ್ತೆ): ಮೀನುಗಾರಿಕೆಗೆ ಇಲ್ಲಿನ ಬೈತಖೋಲ್‌ ಬಂದರಿನಿಂದ ತೆರಳಿದ್ದ ಸುಮಾರು 15 ದೋಣಿಗಳಿಗೆ, ತಿನ್ನಲು ಯೋಗ್ಯವಲ್ಲದ ‘ಕಾರ್ಗಿಲ್’ (ಕಡಬು) ಮೀನು ಹೇರಳವಾಗಿ ಬಲೆಗೆ ಬಿದ್ದಿದೆ.

ಪ್ರತಿ ದೋಣಿಯಲ್ಲಿ ಐದರಿಂದ ಆರು ಟನ್‌ಗಳಷ್ಟು ಮೀನು ಸಿಕ್ಕಿದೆ. ಇದು ವಿಪರೀತ ವಾಸನೆ ಹೊಂದಿದ್ದು, ಕಪ್ಪು ಬಣ್ಣದ್ದಾಗಿದೆ. ಈ ಮೀನುಗಳನ್ನು ಬೇರೆ ಮೀನುಗಳ ಜೊತೆಗೆ ಸೇರಿಸಿ ತಂದರೆ, ಬೇರೆ ಮೀನುಗಳ ಬಣ್ಣ ಹಾಗೂ ರುಚಿ ಕಳೆದುಕೊಳ್ಳುತ್ತವೆ. ದುಬಾರಿ ಡೀಸೆಲ್‌ ವೆಚ್ಚ ಮಾಡಿಕೊಂಡು ಮೀನುಗಾರಿಕೆಗೆ ಹೋದವರು, ಖಾಲಿ ದೋಣಿಯಲ್ಲಿ ವಾಪಸ್ ಬರಬಾರದೆಂದು ಬಲೆಗೆ ಸಿಕ್ಕ ಈ ಮೀನನ್ನು ಜತೆಗೆ ಬಂದರಿಗೆ ತಂದಿದ್ದಾರೆ.

ಫಿಶ್‌ಮಿಲ್‌ಗೆ ಸಾಗಾಟ: ‘ಈ ಮೀನನ್ನು ಯಾರೂ ತಿನ್ನುವುದಿಲ್ಲ. ಹೀಗಾಗಿ ಇವುಗಳನ್ನು ಫಿಶ್‌ಮಿಲ್‌ಗೆ ಕಳುಹಿಸಿಕೊಡಲಾಗುತ್ತದೆ. ನಮ್ಮಲ್ಲಿ ಫಿಶ್‌ಮಿಲ್‌ ಇಲ್ಲದ ಕಾರಣ, ಉಡುಪಿ, ಕುಂದಾಪುರ, ಗೋವಾದ ಕಾನಕೋಣ, ಮಹಾರಾಷ್ಟ್ರದ ರತ್ನಗಿರಿಗೆ ಸಾಗಾಟ ಮಾಡುತ್ತೇವೆ. ಅಲ್ಲಿಯೂ ಹೆಚ್ಚಿನ ದರವಿರುವುದಿಲ್ಲ. ಕಿಲೋಗೆ
₹10ರಿಂದ ₹ 15ರಷ್ಟು ಇದ್ದು, ನಷ್ಟದಲ್ಲಿ ರುವ ಮೀನುಗಾರರಿಗೆ ಸದ್ಯ ಇದೇ ಆದಾಯವಾಗಿದೆ’ ಎನ್ನುತ್ತಾರೆ ಮೀನುಗಾರ ವಿನಾಯಕ ಹರಿಕಂತ್ರ.

‘ಎರಡು ವರ್ಷಗಳ ಹಿಂದೆ ಈ ಮೀನು ಇಲ್ಲಿನ ಮೀನುಗಾರರಿಗೆ ದೊರೆತಿತ್ತು. ಆದರೆ, ಇಷ್ಟು ಪ್ರಮಾಣ ದಲ್ಲಿ ಸಿಕ್ಕಿರಲಿಲ್ಲ. ಈ ಬಾರಿ ಒಟ್ಟು 80 ಟನ್‌ನಷ್ಟು ಬೈತಖೋಲ್‌ ಬಂದರಿಗೆ ಬಂದಿದೆ. ಇದು ಈ ವರ್ಷ ಮೀನುಗಾರಿಕೆಗೆ ಹಿನ್ನಡೆಯ ಸೂಚನೆ’ ಎಂಬ ಆತಂಕ ಅವರದ್ದು.

ಮೀನುಗಳು ದೊರೆಯದಿರಲು ಕಾರಣವೇ ಇವು: ‘ಕಾರ್ಗಿಲ್’ ಮೀನು ಹೆಚ್ಚಾಗಿ ಹವಳದ ದಿಬ್ಬಗಳು ಇರುವಲ್ಲಿ, ಲಕ್ಷದ್ವೀಪದಂಥ ಪ್ರದೇಶಗಳಲ್ಲಿ ಇರುತ್ತವೆ. ಕಳೆದ ತಿಂಗಳು ಮುಂಬೈನಲ್ಲಿ ಈ ಮೀನು ಅಪಾರವಾಗಿ ದೊರೆತಿತ್ತು ಎನ್ನುತ್ತಾರೆ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ.

ಅದನ್ನು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಅವರ ಪ್ರಕಾರ, ಸಮುದ್ರದಲ್ಲಿ ನೀರಿನ ಚಲನೆ ಬದಲಾಗುತ್ತಿದೆ. ಹೀಗಾಗಿ ಈ ಮೀನು ಹಿಂಡು ಹಿಂಡಾಗಿ ಉತ್ತರ ದಿಕ್ಕಿನಲ್ಲಿ ಚಲಿಸುತ್ತಿವೆ. ಇವುಗಳಿಗೆ ಮನುಷ್ಯರಂತೆ ಹಲ್ಲುಗಳಿದ್ದು, ಇತರ ಮೀನುಗಳನ್ನು ತಿನ್ನುತ್ತವೆ. ಇದರಿಂದ ಮೀನುಗಾರಿಕೆಗೆ ಹಿನ್ನಡೆ ಉಂಟಾಗುತ್ತದೆ. ಸೌಂದಳೆ ಹಾಗೂ ಬಂಗುಡೆಯಂಥ ಮೀನುಗಳು ಇತ್ತೀಚಿಗೆ ಹೆಚ್ಚಿನ ಪ್ರಮಾಣದಲ್ಲಿ ದೊರೆಯದಿರುವುದಕ್ಕೆ ಕಾರಣವೇ ಈ ಮೀನುಗಳು ಎಂದು ಮಾಹಿತಿ ನೀಡಿದರು.


Spread the love

Exit mobile version