ಕಾರ್ಕಳ: ಯುವತಿ ಮೇಲೆ ಲೈಂಗಿಕ ದೌರ್ಜನ್ಯ – ಓರ್ವ ಆರೋಪಿ ಸೆರೆ
ಕಾರ್ಕಳ: ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಯುವತಿಯನ್ನು ಪುಸಲಾಯಿಸಿ ಕರೆದೊಯ್ದ ಯುವಕ, ಆಕೆಗೆ ಅಮಲು ಪದಾರ್ಥ ನೀಡಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಲಾಗಿದೆ. ತೀವ್ರ ಅಸ್ವಸ್ಥಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್. ಅವರು ಘಟನೆಯನ್ನು ಖಂಡಿಸಿದ್ದು ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಠಾಣೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳ ಜೋಡುರಸ್ತೆ ನಿವಾಸಿ ಅಲ್ತಾಫ್ ಎಂಬಾತನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಕುರಿತು ಎಸ್ಪಿ ಡಾ| ಅರುಣ್ ಪ್ರತಿಕ್ರಿಯೆ
ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ ಯುವತಿಯನ್ನು ಅಪಹರಿಸಿ ಅತ್ಯಾಚಾರ ದೂರು ಬಂದಿದ್ದು, ಸಂತ್ರಸ್ತೆಗೆ ಆರೋಪಿ ಮೂರು ತಿಂಗಳಿಂದ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು ಶುಕ್ರವಾರ ಆರೋಪಿ ಅಲ್ತಾಫ್ ಕರೆ ಮಾಡಿ ಸಂತ್ರಸ್ತೆಗೆ ಬರಲು ಹೇಳಿದ್ದು ಆಕೆ ಬಂದಾಗ ಅಲ್ಲಿಂದ ಅಪಹರಿಸಿದ್ದ. ಬಳಿಕ ಮದ್ಯದಲ್ಲಿ ಏನನ್ನೊ ಬೆರೆಸಿ ಅತ್ಯಾಚಾರ ಮಾಡಿದ್ದಾಗಿ ಸಂತ್ರಸ್ತೆ ತಿಳಿಸಿದ್ದಾಳೆ. ಅದರಂತೆ ಆರೋಪಿ ಅಲ್ತಾಫ್ ನನ್ನು ಬಂಧಿಸಲಾಗಿದೆ ಅಲ್ಲದೆ ಆರೋಪಿಗೆ ಬಿಯರ್ ಬಾಟಲ್ ತಂದುಕೊಟ್ಟಿದ್ದ ಇಬ್ಬರ ಪೈಕಿ ಸುಬೇರ್ ಎಂಬಾತನನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ ವಾಹನ ಸೀಜ್ ಮಾಡಲಾಗಿದೆ. ಸಂತ್ರಸ್ತೆಗೆ ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆ ಸಂಬಂಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಯುವತಿ ಮೇಲಿನ ಅತ್ಯಾಚಾರ ಅಮಾನುಷ, ಖಂಡನೀಯ – ಮಾಜಿ ಸಚಿವ, ಶಾಸಕ ವಿ. ಸುನಿಲ್ ಕುಮಾರ್ ಆಕ್ರೋಶ
ಶ್ರಮ ಜೀವಿ ಸಮಾಜ ಭೋವಿ ಸಮುದಾಯದ ಬಡ ಯುವತಿಯೋರ್ವಳಿಗೆ ಮತ್ತು ಭರಿಸುವಂತ ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಕೃತ್ಯ ಅತ್ಯಂತ ಖಂಡನೀಯ. ಇದೊಂದು ಪೈಶಾಚಿಕ ಕೃತ್ಯ ಎಂದು ಘಟನೆಯನ್ನು ಮಾಜಿ ಸಚಿವ, ಶಾಸಕ ವಿ ಸುನಿಲ್ ಕುಮಾರ್ ಕಟು ಶಬ್ದಗಳಿಂದ ಟೀಕಿಸಿದ್ದಾರೆ. ಯುವತಿಯನ್ನು ಪುಸಲಾಯಿಸಿ ಅಮಲು ಪದಾರ್ಥದೊಂದಿಗೆ ಕಾರಿನಲ್ಲಿ ಸುಮಾರು ದೂರ ಪಳ್ಳಿ ತನಕ ಕರೆದೊಯ್ದು ಅಮಲು ಪದಾರ್ಥ ನೀಡಿ ಈ ಕೃತ್ಯ ನಡೆಸಿದ್ದಾರೆ ಎಂದರೆ ಇದನ್ನು ಊಹಿಸಲು ಅಸಾದ್ಯ. ಇದೊಂದು ಪೂರ್ವಯೋಜಿತ ಕೃತ್ಯ ಎನ್ನುವ ಸಂದೇಹ ದಟ್ಟವಾಗಿ ಕಾಣುತ್ತದೆ. ಪ್ರಕರಣ ಸಂಬಂಧ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಬೇಕು. ಈ ಮೂಲಕ ಪ್ರಕರಣ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಿ ಬೇಧಿಸಬೇಕು. ಈ ಹಿಂದೆಯೂ ಇಂತಹ ಕೃತ್ಯ ಎಸಗಿರುವ ಸಾಧ್ಯತೆ ದೃಷ್ಟಿಯಿಂದಲೂ ಸೂಕ್ತ ತನಿಖೆಯಾಗಬೇಕು. ಸಂತ್ರಸ್ಥ ಯುವತಿಯ ಆರೋಗ್ಯ ವೆಚ್ಚವನ್ನು ಸರಕಾರ ಭರಿಸಬೇಕು. ಜಿಲ್ಲಾಡಳಿತ ಯುವತಿಗೆ ಮಾನಸಿಕ ಧೈರ್ಯ ತುಂಬಿ, ಯುವತಿ ಮತ್ತು ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದವರು ಆಗ್ರಹಿಸಿದ್ದಾರೆ.