ಕಾರ್ತಿಕ್ ರಾಜ್ ಕೊಲೆ ಪ್ರಕರಣದ ಆರೋಪಿಗಳ ಬಂಧನ; ಡಿವೈಎಫ್‍ಐ ಹರ್ಷ
ಮಂಗಳೂರು : ಏಳು ತಿಂಗಳ ಹಿಂದೆ ನಿಗೂಢವಾಗಿ ಕೊಲೆಯಾದ ಕಾರ್ತಿಕ್ ರಾಜ್ ಪ್ರಕರಣ ದಿನಕ್ಕೊಂದು ತಿರುವು ಪಡೆದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಸಂಘ ಪರಿವಾರ ಕೊಲೆ ಪ್ರಕರಣಕ್ಕೆ ಮತೀಯ ಬಣ್ಣ ಬಳಿದು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿತ್ತು. ಇಂತಹ ಜಟಿಲ ಪ್ರಕರಣವನ್ನು ಭೇದಿಸುವ ಮೂಲಕ ಆತಂಕಗಳಿಗೆ ಮಂಗಳೂರು ಕಮಿಷನರೆಟ್ ಪೊಲೀಸರು ತೆರೆ ಎಳೆದಿದ್ದಾರೆ. ಕಮಿಷನರ್ ಚಂದ್ರಶೇಖರ್, ವಿಶೇಷ ತನಿಖಾ ತಂಡದ ವೆಲೆಂಟೈನ್ ಡಿಸೋಜ ಸಹಿತ ಪೊಲೀಸರ ಕಾರ್ಯದಕ್ಷತೆ ಅಭಿನಂದನಾರ್ಹ ಎಂದು ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹರ್ಷ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಸಂಘ ಪರಿವಾರ ನಿರಂತರವಾಗಿ ಕೋಮು ಉದ್ವಿಗ್ನತೆಗೆ ಯತ್ನಿಸುತ್ತಿದೆ. ಜನಜೀವನದ ಜೊತೆ ಚೆಲ್ಲಾಟವಾಡುವ ಇಂತಹ ರಾಜಕಾರಣವನ್ನು ಬಿಜೆಪಿ ಇನ್ನಾದರೂ ಕೈಬಿಡಬೇಕು. ಜಲೀಲ್ ಕರೋಪಾಡಿ ಕೊಲೆ ಪ್ರಕರಣ, ಸವಣೂರು ಹಿಂದೂ ಸಮಾಜೋತ್ಸವದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಲ್ಲಿ ಪರಿವಾರದ ಕಾರ್ಯಕರ್ತರು ಪಾಲ್ಗೊಂಡಿರುವುದು ಬಯಲಾಗಿದೆ. ಈ ಹಿಂದೆ ಬಂಟ್ವಾಳ ಹರೀಶ್ ಪೂಜಾರಿ ಕೊಲೆ ಪ್ರಕರಣವನ್ನು ಮುಸ್ಲಿಂ ಸಮುದಾಯದ ತಲೆಗೆ ಕಟ್ಟಿ ರಾಜಕೀಯ ಲಾಭ ಪಡೆಯುವ ಅಪಾಯಕಾರಿ ಆಟವನ್ನು ಸಂಘ ಪರಿವಾರ ಆಡಿತ್ತು. ಕಾರ್ತಿಕ್ ರಾಜ್ ಪ್ರಕರಣದಲ್ಲಿ ವಾಸ್ತವ ಅರಿವಾಗುವ ಮುನ್ನವೇ ಹಿಂದೂ ಹಿತರಕ್ಷಣಾ ಸಮಿತಿಯನ್ನು ರಚಿಸಿ ಕೊಲೆ ಪ್ರಕರಣದ ಹಿಂದೆ ಮುಸ್ಲಿಮರು ಇದ್ದಾರೆ ಎಂದು ಪ್ರತಿಭಟನೆಯನ್ನು ನಡೆಸಲಾಗಿತ್ತು. ಪ್ರತಿಭಟನಾ ಸಭೆಯಲ್ಲಿ ನಳಿನ್ ಕಟೀಲ್ ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ ನೀಡುವ ಮೂಲಕ ತಮ್ಮ ಉದ್ದೇಶವನ್ನು ಬಹಿರಂಗಪಡಿಸಿದ್ದರು. ಜಿಲ್ಲೆಯಲ್ಲಿ ಸೌಜನ್ಯ, ವಿನಾಯಕ ಬಾಳಿಗಾ, ಹರೀಶ್ ಪೂಜಾರಿ, ಉಡುಪಿಯ ಪ್ರವೀಣ್ ಪೂಜಾರಿ ಮುಂತಾದ ಕೊಲೆ ಪ್ರಕರಣಗಳು ನಡೆದಾಗ ಕನಿಷ್ಠ ಸೌಜನ್ಯಕ್ಕಾಗಿಯೂ ಸಂತ್ರಸ್ತರ ಮನೆಗೆ ಭೇಟಿ ನೀಡದ ಬಿಜೆಪಿ ಮುಖಂಡರು ಕಾರ್ತಿಕ್ ರಾಜ್ ಮನೆಗೆ ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪನವರನ್ನು ಕರೆತಂದಿದ್ದರು, ಅವರ ಮೂಲಕ ಈ ಕೊಲೆ ಮುಸ್ಲಿಮ್ ಜಿಹಾದಿಗಳಿಂದ ನಡೆದಿದೆ ಎಂದು ಹೇಳಿಕೆ ಕೊಡಿಸಿದ್ದರು. ಈಗ ಪ್ರಕರಣದ ನೈಜತೆ ಬಯಲಾಗಿದೆ. ಯಡ್ಯೂರಪ್ಪ, ನಳಿನ್ ಕುಮಾರ್ ಕಟೀಲ್ ನಿಜಕ್ಕೂ ಪ್ರಾಮಾಣಿಕರಾಗಿದ್ದರೆ ಈಗ ತಮ್ಮ ಆರೋಪಗಳಿಗಾಗಿ ಜನತೆಯ ಕ್ಷಮೆ ಕೇಳಲಿ ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
ಜಿಲ್ಲೆಯ ಜನತೆ ಇನ್ನು ಮುಂದಾದರೂ ಇಂತಹ ಮತೀಯ ರಾಜಕಾರಣದ ಅಪಾಯಕಾರಿ ಆಟಗಳ ಬಗ್ಗೆ ಅತ್ಯಂತ ಎಚ್ಚರಿಕೆಯನ್ನು ವಹಿಸಬೇಕು, ಕೋಮು ರಾಜಕಾರಣದ ಹುನ್ನಾರಗಳನ್ನು ವಿಫಲಗೊಳಿಸಬೇಕು ಎಂದು ಅವರು ಜನತೆಯನ್ನು ವಿನಂತಿಸಿದ್ದಾರೆ.