ಕಾರ್ಮಿಕ ವಿರೋಧಿ ಸರಕಾರಗಳ ವಿರುದ್ಧ ಹಂಚಿನ ಕೆಲಸಗಾರರು ಆಕ್ರೋಶ

Spread the love

ಕಾರ್ಮಿಕ ವಿರೋಧಿ ಸರಕಾರಗಳ ವಿರುದ್ಧ ಹಂಚಿನ ಕೆಲಸಗಾರರು ಆಕ್ರೋಶ

ಮಂಗಳೂರು: ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿದ್ದ ಕಾರ್ಮಿಕರಿಗೆ ನಿರಾಶೆಯಾಗಿದೆ. ಜನರ ಬೇಂಕ್ ಖಾತೆಗೆ ಹಣ ಜಮಾ ಮಾಡುತ್ತೇವೆಂದು ತಿಳಿಸಿ ಬೇಂಕ್‍ನಲ್ಲಿ ಜನರನ್ನು ಖಾತೆ ತೆರಸಿ ಕೋಟ್ಯಾಂತರ ರೂಪಾಯಿಗಳನ್ನು ಠೇವಣಿ ಮಾಡಿಸಿ ಬೇಂಕಿಗೆ ಲಾಭ ಮಾಡಿಕೊಡಲಾಗಿದೆಯೇ ವಿನಹ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಸುಮಾರು 42ರಷ್ಟಿದ್ದ ಕಾರ್ಮಿಕ ಕಾಯ್ದೆಗಳನ್ನು ರದ್ದುಮಾಡಿ ಸುಮಾರು ಏಳು ಸಂಹಿತೆಗಳನ್ನಾಗಿ ಮಾಲಕಪರವಾಗಿ ರೂಪಿಸಲು ಸರಕಾರ ಮುಂದಾಗಿದೆ. ಜನೋಪಯೋಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಕಾರ್ಮಿಕರ ಬದುಕು ದುಸ್ತರವಾಗಿದೆ. ಕನಿಷ್ಠ ಮಜೂರಿಯಲ್ಲಿ ಹಂಚಿನ ಕೈಗಾರಿಕೆಯಲ್ಲಿ ದುಡಿಯುತ್ತಿರುವ ಕಾರ್ಮಿಕರು ಕೆಲಸವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕಾಂಕ್ರೀಟು ಕಟ್ಟಡಗಳಿಗೆ ಹಂಚುಗಳನ್ನು ಮುಚ್ಚುವ ಬಗ್ಗೆ, ಪರಿಸರಸ್ನೇಹಿ ಮಣ್ಣಿನ ಸಲಕರಣೆಗಳ ಉಪಯೋಗದ ಬಗ್ಗೆ, ಕೈಗಾರಿಕೆಗೆ ಸಹಾಯ- ಸಬ್ಸಿಡಿಗಳನ್ನು ನೀಡಿ ಸೂಕ್ತ ಕಾನೂನು ಕಾಯ್ದೆ ರೂಪಿಸಿ ಆ ಮೂಲಕ ಪರಿಸರಸ್ನೇಹಿ ಹಂಚಿನ ಕೈಗಾರಿಕೆಯನ್ನು ಉಳಿಸಿ ಬೆಳೆಸಬೇಕೆನ್ನುವ ಕಾರ್ಮಿಕರ ಬೇಡಿಕೆಯನ್ನು ಸರಕಾರಗಳು ನಿರ್ಲಕ್ಷಿಸಿದ ಬಗ್ಗೆ ಕಾರ್ಮಿಕರು ಸರಕಾರಗಳ ವಿರುದ್ಧ ಕಿಡಿ ಕಾರಿದರು.
ನಿನ್ನೆ ಮಂಗಳೂರಿನಲ್ಲಿ ನಡೆದ ದ.ಕ ಹಂಚಿನ ಕೆಲಸಗಾರರ ಸಂಘ (ಎಐಟಿಯುಸಿ) –ಇದರ 49ನೇ ವಾರ್ಷಿಕ ಮಹಾಸಭೆಯಲ್ಲಿ ಕಾರ್ಮಿಕರ ಸರಕಾರಗಳ ವಿರುದ್ಧದ ಆಕ್ರೋಶ ಸ್ಪೋಟಗೊಂಡಿತು. ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವಿ.ಎಸ್ ಬೇರಿಂಜ ವಹಿಸಿದ್ದರು. ಕೋಶಾಧಿಕಾರಿ ವಿ. ಕುಕ್ಯಾನ್ ಮಂಡಿಸಿದ ವರದಿ ಮತ್ತು ಲೆಕ್ಕ ಪತ್ರವನ್ನು ಸಭೆ ಸರ್ವಾನುಮತದಿಂದ ಅಂಗೀಕರಿಸಿತು.
ಮುಂದಿನ ಸಾಲಿಗೆ ಈ ರೀತಿ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರು: ವಿ.ಎಸ್.ಬೇರಿಂಜ ಉಪಾಧ್ಯಕ್ಷರು: ರಾಮಯ್ಯ ಪೂಜಾರಿ, ಕಾರ್ಯದರ್ಶಿ: ಯು.ಭಾಸ್ಕರ್, ಸಹಕಾರ್ಯದರ್ಶಿ: ರಘು, ಕೋಶಾಧಿಕಾರಿ:ವಿ.ಕುಕ್ಯಾನ್ ಹಾಗೂ ಕಾರ್ಯಕಾರಿ ಸಮಿತಿಗೆ ಎಂ.ಕರುಣಾಕರ್, ಮೋನಪ್ಪ, ಧನಂಜಯಗೌಡ, ಕೆ. ಈಶ್ವರ್, ಮೆಲ್ವಿನ್ ಡಿ’ಸೊಜ, ಕೇಶವ ಅವರನ್ನು ಆಯ್ಕೆ ಮಾಡಲಾಯಿತು. ಎಂ. ಕರುಣಾಕರ್ ಸ್ವಾಗತಿಸಿ ಎಂ. ಶಿವಪ್ಪ ಕೋಟ್ಯಾನ್ ವಂದಿಸಿದರು.


Spread the love