ಕಾಲಿಯಾ ರಫೀಕ್ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಮಂಗಳೂರು: ಕುಖ್ಯಾತ ರೌಡಿ ಕಾಲಿಯಾ ರಫೀಕ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಪ್ರಕರಣದಲ್ಲಿ ನೂರ್ ಅಲಿ, ರಶೀದ್ ಟಿ.ಎಸ್. ಹುಸೈನಬ್ಬ ಯಾನೆ ಹುಸೈನ್, ಮುತಾಸಿಂ ಯಾನೆ ತಸ್ಲಿಂ ಸಹಿತ ಹಲವರನ್ನು ಈ ಮೊದಲೇ ಬಂಧಿಸಲಾಗಿದ್ದು, ಕೇರಳದ ಕಾಸರಗೋಡು ಚಳಯಂಗೋಡ್ ನಿವಾಸಿ ಮುಹಮ್ಮದ್ ನಜೀಬ್ ಯಾನೆ ಕಲ್ಲಟ್ರ ನಜೀಬ್ (46) ಎಂಬಾತನನ್ನು ಗುರುವಾರ ಬಂಧಿಸಲಾಗಿದೆ.
ಪ್ರಕರಣದ ವಿವರ: ದಿನಾಂಕ. 14-2-2017 ರಂದು ರಾತ್ರಿ ಹೊತ್ತಿಗೆ ಮಹಮ್ಮದ್ ಝಾಹಿದ್ ರವರು ತನ್ನ ಸ್ನೇಹಿತ ಕಾಲಿಯಾ ರಫಿಕ್‌ನೊಂದಿಗೆ ಮುಜಿಬ್ ಹಾಗೂ ಫಿರೋಜ್ ರವರ ಜೊತೆಯಲ್ಲಿ ರಾತ್ರಿ 11-30 ಗಂಟೆಗೆ ಕೆಎಲ್-14-ಎಂ-7005 ನೇ ಮಾರುತಿ ರಿಟ್ಝ್ ಕಾರಿನಲ್ಲಿ ಹೊಸಂಗಡಿಯಿಂದ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೊರಟು ಬರುತ್ತಾ ರಾತ್ರಿ 12-00 ಗಂಟೆಗೆ ಮಂಗಳೂರು ಕೋಟೆಕಾರು ಪೆಟ್ರೋಲ್ ಪಂಪ್ ಬಳಿ ತಲುಪಿದಾಗ ರಾಂಗ್ ಸೈಡ್‌ನಿಂದ ಕೆಎಲ್-14-ಕೆ-3028 ನೇ ಟಿಪ್ಪರ್ ಲಾರಿಯನ್ನು ಆರೋಪಿಗಳ ಪೈಕಿ ಚಾಲಕ ರಶೀದ್ ನು ಮುಂಚಿತವಾಗಿ ಪ್ಲಾನ್ ಮಾಡಿದಂತೆ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಟಿಪ್ಪರ್ ನ್ನು ಏಕಾಎಕಿ ಮುಂದುಗಡೆಯಿಂದ ಬರುತ್ತಿದ್ದ ಹಾಗೂ ಆತನಿಗೆ ಸೂಚನೆ ನೀಡಿದ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು ಕಾರನ್ನು ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿದ ಸಮಯ ಕಾಲಿಯಾ ರಫೀಕ್ ನು ಪ್ರಯಾಣಿಸುತ್ತಿದ್ದ ಕಾರನ್ನು ಬೆನ್ನತ್ತಿ ಬಂದ ಎರ್ಟಿಕಾ ಕಾರಿನಲ್ಲಿದ್ದ ಆರೋಪಿಗಳು ಕಾರಿನಿಂದ ಇಳಿದು ಕಾಲಿಯಾ ರಫೀಕ್ ಸಂಚರಿಸುತ್ತಿದ್ದ ರಿಡ್ಜ್ ಕಾರಿನ ಬಳಿಗೆ ಹೋದಾಗ ಅಪಾಯವನ್ನು ಅರಿತ ಕಾಲಿಯಾ ರಫೀಕ್ ಮತ್ತು ಆ ಕಾರಿನಲ್ಲಿದ್ದವರು ಓಡಲು ಯತ್ನಿಸಿದ್ದು, ಈ ಸಮಯ ಆರೋಪಿಗಳ ಪೈಕಿ ನೂರ್ ಆಲಿ ಹಾಗೂ ಇನ್ನೋರ್ವ ಆರೋಪಿಯು ಅವರ ಕೈಯಲ್ಲಿದ್ದ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಲ್ಲದೇ ಇತರ ಆರೋಪಿಗಳು ಬೆನ್ನಟ್ಟಿ ತಲವಾರಿನಿಂದ ಕಡಿದು ಕೊಲೆ ನಡೆಸಿದ್ದರು. ಈ ಪ್ರಕರಣದಲ್ಲಿ ಭಾಗಿಯಾದ 1 ) ನೂರ್ ಆಲಿ, 2) ರಶೀದ್ ಟಿ ಎಸ್, 3) ಹುಸೈನಬ್ಬ @ ಹುಸೈನ್ @ ಸುಹೈಲ್ @ ಉಸ್ತಾದ್ 4) ಮುತಾಸಿಂ @ ತಸ್ಲಿಂ ಹಾಗೂ ಇತರರನ್ನು ಈ ಹಿಂದೆ ದಸ್ತಗಿರಿ ಮಾಡಲಾಗಿತ್ತು.
ಈ ಘಟನೆ ನಡೆದ ಸಮಯ ಮೃತ ಕಾಲಿಯಾ ರಫೀಕ್ ನೊಂದಿಗೆ ಕಾರಿನಲ್ಲಿ ಚಾಲಕನಾಗಿದ್ದ ಮೊಹಮ್ಮದ್ ನಜೀಬ್ @ ಕಲ್ಲಟ್ರ ನಜೀಬ್ ಎಂಬಾತನು ಈ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದವನು ಕೊಲೆ ಕೃತ್ಯದ ನಂತರ ತಲೆಮರೆಸಿಕೊಂಡು, ಮುಂಬೈ, ಬೆಂಗಳೂರು, ಎರ್ನಾಕುಳಂ ಮುಂತಾದ ಕಡೆ ತಿರುಗಾಡುತ್ತಿದ್ದನು. ಈತನ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮೊಹಮ್ಮದ್ ನಜೀಬ್ ಎಂಬಾತನನ್ನು ಕೇರಳದಿಂದ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ. ಈತನು ಈ ಪ್ರಕರಣದಲ್ಲಿ ಕಾಲಿಯಾ ರಫೀಕ್ ನು ಸಂಚರಿಸುತ್ತಿದ್ದ ಕಾರಿನ ಚಾಲಕನಾಗಿದ್ದು, ಈತನಿಗೆ ಪ್ರಕರಣದ ಪ್ರಮುಖ ಆರೋಪಿ ಝೀಯಾ ಹಾಗೂ ಇತರರೊಂದಿಗೆ ಸೇರಿಕೊಂಡು ಸಂಚನ್ನು ರೂಫಿಸಿ ಈ ಕೊಲೆ ಕೃತ್ಯವನ್ನು ನಡೆಸಿರುವುದಾಗಿದೆ.
ಆರೋಪಿ ಮೊಹಮ್ಮದ್ ನಜೀಬ್ @ ಕಲ್ಲಟ್ರ ನಜೀಬ್ ಎಂಬಾತನ ವಿರುದ್ಧ ಈ ಹಿಂದೆ ಕೇರಳದ ಕಾಸರಗೋಡು, ಬೇಕಲ, ನೀಲೇಶ್ವರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ, ವಂಚನೆ ಪ್ರಕರಣಗಳು ಹೀಗೆ ಒಟ್ಟು 5 ಪ್ರಕರಣಗಳು ದಾಖಲಾಗಿರುತ್ತದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಡಾ: ಪಿ.ಎಸ್ ಹರ್ಷ ರವರ ನಿರ್ದೇಶನದಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಆರ್ ನಾಯ್ಕ್, ಪಿಎಸ್ಐ ಕಬ್ಬಾಳ್ ರಾಜ್ ಹೆಚ್ ಡಿ, ಹಾಗೂ ಸಿಸಿಬಿ ಸಿಬ್ಬಂದಿಗಳು ಆರೋಪಿಯ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.