ಕಾವಲುಗಾರನ ಪತ್ನಿ, ಮಗುವಿಗೆ ಹಲ್ಲೆ; ತನ್ನ ಹೆಸರು ಕೆಡಿಸಲು ಬಿಜೆಪಿಯವರ ಕೈವಾಡ ; ಮೇಯರ್ ಕವಿತಾ ಸನೀಲ್
ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಕವಿತಾ ಸನೀಲ್ ಅವರು ತನ್ನ ಅಪಾರ್ಟ್ ಮೆಂಟಿನ ಕಾವಲುಗಾರನ ಮಗು ಹಾಗೂ ಪತ್ನಿಗೆ ಹೊಡೆದಿರುವುದಾಗಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು ಇದರ ಹಿಂದೆ ಬಿಜೆಪಿ ಸದಸ್ಯರ ಕೈವಾಡ ಇದೆ ಎಂದು ಕವಿತಾ ಸನೀಲ್ ಆರೋಪಿಸಿದ್ದಾರೆ.
ಈ ಕುರಿತು ನಗರದ ಹೋಟೇಲ್ ಒಂದರಲ್ಲಿ ಸುದ್ದಿಗೋಷ್ಠಿ ನಡೆಸಿ ಘಟನೆಯ ಕುರಿತು ಸ್ಪಷ್ಟನೆ ನೀಡಿದ ಸನೀಲ್ ಅಕ್ಟೋಬರ್ 20 ರಂದು ತನ್ನ ಮಗಳು ಹಾಗೂ ಇತರ ಇಬ್ಬರು ಗೆಳೆಯರು ಅಪಾರ್ಟ್ ಮೆಂಟಿನಲ್ಲಿ ಪಟಾಕಿ ಸಿಡಿಸುತ್ತಿರುವ ಸಮಯದಲ್ಲಿ ವಾಚ್ ಮೆನ್ ಹೆಂಡತಿ ನನ್ನ ಮಗಳನ್ನು ಅಟ್ಟಿಸಿಕೊಂಡು ಬಂದಿದ್ದು ಆಕೆ ಹೆದರಿ ಪಕ್ಕದ ಬಿಲ್ಡಿಂಗಿಗೆ ಹೋಗಿದ್ದಾಳೆ. ರಾತ್ರಿ 9 ಗಂಟೆಯ ಸಮಯದಲ್ಲಿ ಒರ್ವ ಮಹಿಳೆ ತನ್ನ ಮಗಳನ್ನು ಅಟ್ಟಿಸಿಕೊಂಡು ಬಂದಿರುವುದು ಸರಿಯಲ್ಲ ಹಾಗೆ ಅಟ್ಟಿಸಿಕೊಂಡು ಹೋಗುವಾಗ ಏನಾದರೂ ಹೆಚ್ಚು ಕಡಿಮೆ ಆದಲ್ಲಿ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು.
ಘಟನೆ ನಡೆಯುವ ಸಂದರ್ಭದಲ್ಲಿ ತಾನು ಊರಿನಲ್ಲಿ ಇರಲಿಲ್ಲ ಆದರೆ ತಾನು ಬೆಂಗಳೂರಿನಿಂದ ವಾಪಾಸು ಬರುವಾಗ ತನಗೆ ಘಟನೆಯ ಮಾಹಿತಿ ಸಿಕ್ಕಿದ್ದು, ಅಕ್ಟೋಬರ್ 26 ರ ಸಂಜೆ 4 ಗಂಟೆಗೆ ನಾನು ನನ್ನ ಕಚೇರಿಗೆ ಬರುವ ಮೊದಲು ವಾಚ್ ಮೆನ್ ಮನೆಗೆ ಹೋಗಿ ಘಟನೆಯ ಕುರಿತು ಕೇಳಿದ್ದು, ಪೋಲಿಸ್ ಠಾಣೆಗೆ ದೂರು ನೀಡುವುದಾಗಿ ಹೇಳಿದ್ದೆ ಆದರೆ ವಾಚ್ ಮೆನ್ ಪತ್ನಿ ಕ್ಷಮೆಯಾಚಿಸಿದ್ದು ದೂರು ನೀಡದಂತೆ ವಿನಂತಿಸಿದ್ದರು. ನಾನು ಕೇವಲ ಆಕೆಯೊಂದಿಗೆ 4 ನಿಮಿಷ ಮಾತ್ರ ಮಾತನಾಡಿದ್ದು, ಆದರೆ ವಾಚ್ ಮೆನ್ ಪತ್ನಿ ನಾನು ಆಕೆಯ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ ಮಗುವಿನ ಮೇಲೆ ಕೂಡ ಹಲ್ಲೆ ನಡೆಸಿದ್ದೇನೆ ಎಂದು ಸುಳ್ಳು ದೂರು ನೀಡಿದ್ದಾಳೆ. ಒಂದು ವೇಳೆ ನಾನು ಹಲ್ಲೆ ನಡೆಸಿದ್ದೇ ಆದರೆ ಆಕೆಗೆ ಗಾಯವಾಗಬೇಕಿತ್ತು ಎಂದರು. ನಿಜವಾದ ಘಟನೆಯೇ ಬೇರೆ ಆಗಿದ್ದು ಕಳೆದ ತಿಂಗಳು ಅಪಾರ್ಟ್ ಮೆಂಟ್ ಸಮಿತಿಯ ಸಭೆಯಲ್ಲಿ ವಾಚ್ ಮೆನ್ ನನ್ನು ಕೆಲಸದಿಂದ ತೆಗೆಯುವ ಕುರಿತು ನಿರ್ಧಾರವಾಗಿತ್ತು ಆದರೆ ಅತ ಬೇರೆ ಕೆಲಸ ನೋಡಲು ಸಮಯ ಕೇಳಿದ್ದ ಅದರಂತೆ ಸಮಯ ಕೂಡ ನೀಡಲಾಗಿತ್ತು ಎಂದರು.
ಆದರೆ ಶುಕ್ರವಾರ ಕೆಲವೊಂದು ಮಾಧ್ಯಮಗಳಲ್ಲಿ ತನ್ನ ಹೆಸರನ್ನು ಕೆಡಿಸುವ ಸಲುವಾಗಿ ಸುಳ್ಳು ಸುದ್ದಿಗಳು ಪ್ರಕಟವಾಗಿದ್ದು ಇದರ ಹಿಂದೆ ಯಾರದ್ದೋ ಕೈವಾಡ ಇರಬೇಕು ಎನ್ನುವ ಅನುಮಾನದ ಮೇಲೆ ನನ್ನ ಅಪಾರ್ಟ್ ಮೆಂಟಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರೀಶಿಲಿಸಿದೆ. ಅದನ್ನು ಪರಿಶೀಲಿಸಿದಾಗ ಬಿಜೆಪಿಯ ಕಾರ್ಪೋರೇಟರ್ ರೂಪಾ ಡಿ ಬಂಗೇರಾ ಮತ್ತು ಪೂಜಾ ಪೈ ವಾಚ್ ಮೆನ್ ಮತ್ತು ಆತನ ಪತ್ನಿಯ ವಿರುದ್ದ ಸುಮಾರು 25 ನಿಮಿಷಗಳ ಕಾಲ ಮಾತನಾಡುತ್ತಿರುವ ದೃಶ್ಯಗಳು ದಾಖಲಾಗಿದೆ. ಬಿಜೆಪಿಗರಿಗೆ ನಾನು ಮಾಡುವ ಒಳ್ಳೆಯ ಕೆಲಸಗಳನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಅದಕ್ಕಾಗಿ ಕಾವಲುಗಾರ ಮತ್ತು ಆತನ ಪತ್ನಿಯನ್ನು ಬಳಸಿಕೊಂಡು ನನ್ನ ಹೆಸರನ್ನು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ನಾನು ಕೂಡ ಈಗ ಕಾವಲುಗಾರ ಹಾಗೂ ಆತನ ಪತ್ನಿಯ ವಿರುದ್ದ ನನ್ನ ಮೇಲೆ ಸುಳ್ಳು ದೂರು ನೀಡಿದ್ದಕ್ಕಾಗಿ ದೂರು ನೀಡುತ್ತೇನೆ. ಕಾವಲುಗಾರನ ಪತ್ನಿ ಟಿವಿಗಳಿಗೆ ಪ್ರತಿಕ್ರಿಯಿಸುವಾಗ ತಾನು ಆಕೆಯ ಮಗುವನ್ನು ಎಸೆದಿರುವುದಾಗಿ ಹೇಳಿದ್ದಾಳೆ ಆದರೆ ತಾನು ಈಗ ಸಂಪೂರ್ಣ ದಾಖಲೆಯೊಂದಿಗೆ ಬಂದಿದ್ದು, ನನ್ನಲ್ಲಿ ಸಿಸಿಟಿವಿ ದೃಶ್ಯಾವಳಿಗಳು ಇವೆ. ನಾನು ಆಕೆಯ ಮಗುವಿಗೆ ಯಾವುದೇ ರೀತಿಯಲ್ಲಿ ತೊಂದರೆ ಮಾಡಿಲ್ಲ ಆಕೆಯ ವಿರುದ್ದ ದೂರು ನೀಡುವುದಾಗಿ ಹೇಳಿದರು.
ನನ್ನ ಪ್ರಶ್ನೆ ಏನೆಂದರೆ ಬಿಜೆಪಿ ಕಾರ್ಪೋರೇಟರ್ ರೂಪ ಡಿ ಬಂಗೇರ ಮತ್ತು ಸುರತ್ಕಲ್ ಬಿಜೆಪಿ ಬ್ಲಾಕ್ ಅಧ್ಯಕ್ಷೆ ಪೂಜಾ ಪೈ ಅವರಿಗೆ ನಮ್ಮ ಅಪಾರ್ಟ್ ಮೆಂಟಿನಲ್ಲಿ ಕಾವಲುಗಾರನನ್ನು ಮತ್ತು ಆತನ ಪತ್ನಿಯನ್ನು ಭೇಟಿ ಮಾಡಿದ ಕಾರಣವೇನು. ರೂಪ ನನ್ನಂತೆಯೇ ಕಾರ್ಪೋರೇಟರ್ ಆಗಿದ್ದು ಆಕೆಗೆ ನನ್ನ ಅಪಾರ್ಟ್ ಮೆಂಟಿಗೆ ಬಂದವರು ನನ್ನ ಮನೆಗೆ ಬರಬಹುದಿತ್ತು. ಇಬ್ಬರೂ ಕೂಡ ರಾತ್ರಿ 8.41 ರವೇಳೆಗೆ ಬರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. ಬಿಜೆಪಿಯವರ ಕುಮ್ಮಕ್ಕು ಇಲ್ಲದೆ ಕಾವಲುಗಾರ ಮತ್ತು ಆತನ ಪತ್ನಿ ಇಂತಹ ಕೃತ್ಯಕ್ಕೆ ಮುಂದಾಗಲು ಸಾಧ್ಯವೇ ಇಲ್ಲ ಎಂದರು.