ಕಾವೂರು, ಕೂಳೂರಿನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸಿಪಿಐ ಆಗ್ರಹ

Spread the love

ಕಾವೂರು, ಕೂಳೂರಿನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸಿಪಿಐ ಆಗ್ರಹ

ಮಂಗಳೂರು : ನಗರದ ಹೆಚ್ಚಿನ ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆಗಳಿಲ್ಲದೆ ಜನರು ತೊಂದರೆಗೊಳಗಾಗಿದ್ದಾರೆ. ಸಾರ್ವಜನಿಕ ಸ್ಥಳಗಳು ಕೊಳಕಾಗುತ್ತಿದ್ದು ರೋಗ ರುಜಿನಗಳಿಗೆ ಕಾರಣವಾಗುತ್ತಿದೆ. ಮಾರಕ ಸಾಂಕ್ರಾಮಿಕ ರೋಗಗಳಿಂದ ಜನರು ಬಳಲುವಂತಾಗಿದೆ. ನಗರದ ಮುಖ್ಯ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕಾದದ್ದು ಮಹಾನಗರ ಪಾಲಿಕೆಯ ಜವಾಬ್ಧಾರಿಯಾಗಿದೆ. ಕಾವೂರು, ಕೂಳೂರು ಮುಂತಾದ ಪ್ರದೇಶಗಳಲ್ಲಿ ಇತರ ಜಿಲ್ಲೆಗಳಿಂದ ಬಂದು ನೆಲೆಸಿರುವ ಕಾರ್ಮಿಕರು ಹೆಚ್ಚಾಗಿ ಜೀವಿಸುತ್ತಾರೆ. ಇಂತಹವರಿಗೆ ತನ್ನ ಮಾಲಕ ಗುತ್ತಿಗೆದಾರರು ಮೂಲಭೂತ ವ್ಯವಸ್ಥೆಗಳನ್ನು ಒದಗಿಸುವಲ್ಲಿ ವಿಫಲವಾಗುತ್ತಾರೆ. ಈ ನಿಟ್ಟಿನಲ್ಲಿ ಕಾವೂರು ಹಾಗೂ ಕೂಳೂರು ಪ್ರದೇಶದಲ್ಲಿ ಪರಿಪೂರ್ಣ ವ್ಯವಸ್ಥೆಗಳುಳ್ಳ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಕಾವೂರು ಶಾಖಾ ಸಮ್ಮೇಳನ ಮಂಗಳೂರು ಮಹಾನಗರ ಪಾಲಿಕೆಯನ್ನು ಆಗ್ರಹಿಸಿದೆ.

ಕಾವೂರಿನ ಗಾಂಧಿನಗರದಲ್ಲಿ ಸರಕಾರಿ ಕಾಲೇಜು, ಪೌಢ ಶಾಲೆ, ಬಿಜಿಎಸ್ ಖಾಸಗಿ ವಿದ್ಯಾ ಸಂಸ್ಥೆಗಳಿವೆ. ಸಾವಿರಾರು ವಿದ್ಯಾರ್ಥಿಗಳು, ಕಾರ್ಮಿಕರು, ಸಾರ್ವಜನಿಕರು ಬಸ್‍ಗಾಗಿ ರಸ್ತೆಯಲ್ಲಿ ನಿಲ್ಲಬೇಕಾಗಿದೆ. ಇಲ್ಲಿ ಸೂಕ್ತ ಬಸ್ ತಂಗುದಾಣವಿಲ್ಲ. ಕಾವೂರು ಹಾಗೂ ಕೂಳೂರು ಮಧ್ಯೆ ಇರುವ ಗಾಂಧೀನಗರದಲ್ಲಿ ಸಾರ್ವಜನಿಕ ಬಸ್ ನಿಲ್ದಾಣವನ್ನು ನಿರ್ಮಿಸಬೇಕೆಂದು ಸಮ್ಮೇಳನ ವಿನಂತಿಸಿದೆ.

ಸಮ್ಮೇಳನದ ಅಧ್ಯಕ್ಷತೆಯನ್ನು ತಿಮ್ಮಪ್ಪ ಕಾವೂರು ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ತಾಲೂಕು ಕಾರ್ಯದರ್ಶಿ ವಿ. ಎಸ್. ಬೇರಿಂಜ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೃಷ್ಣಪ್ಪ ವಾಮಂಜೂರು, ಚಿತ್ರಾಕ್ಷಿ, ರೇಣುಕ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು. ನೂತನ ಶಾಖಾ ಕಾರ್ಯದರ್ಶಿಯಾಗಿ ತಿಮ್ಮಪ್ಪ ಕಾವೂರು ಆಯ್ಕೆಯಾದರು.


Spread the love