ಕಾವ್ಯಾ ಪ್ರಕರಣ; ಮೋಹನ್ ಆಳ್ವಾರ ಪರ ಅಭಿಮಾನಿಗಳ ಸಭೆಗೆ ಉತ್ತಮ ಪ್ರತಿಕ್ರಿಯೆ
ಮೂಡಬಿದ್ರೆ: ವಿದ್ಯಾರ್ಥಿನಿ ಕಾವ್ಯಾ ಸಂಶಯಾಸ್ಪದ ರೀತಿಯ ಸಾವಿಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಮೋಹನ್ ಆಳ್ವಾರ ತೇಜೋವಧೆಯನ್ನು ಖಂಡಿಸಿ ಆಳ್ವಾರ ಅಭಿಮಾನಿಗಳು ಸ್ವರಾಜ್ ಮೈದಾನದಲ್ಲಿ ಆಯೋಜಿಸಿದ ಬೆಂಬಲ ಸಭೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ, ಸಚಿವ ಕೆ. ಅಮರನಾಥ ಶೆಟ್ಟಿ ಮಾತನಾಡಿ, ಮೂಡಬಿದ್ರೆಗೆ ಇಂದು ಇಂತಹ ಹೆಸರು ಬರಲು ಮೋಹನ್ ಆಳ್ವಾರು ಕಾರಣರಾಗಿದ್ದು, ಅವರ ಶಿಕ್ಷಣ ಸಂಸ್ಥೆಯ ಫಲವಾಗಿ ಮೂಡಬಿದ್ರೆ ಇಂದು ಇಷ್ಟೊಂದು ಅಭಿವೃದ್ಧಿಗೊಂಡಿದೆ. ಕಾವ್ಯಾಳ ಸಾವಿನ ಕುರಿತು ಕೆಲವೊಂದು ಮಾಧ್ಯಮಗಳು ತಾವೇ ತೀರ್ಪು ನೀಡಿದ್ದು, ಅಂದರೆ ನಮಗೆ ಪೋಲಿಸ್ ಮತ್ತು ನ್ಯಾಯಲಯದ ಅಗತ್ಯವೇನು? ಆಳ್ವಾರು ಸುಮಾರು 2700 ಮಕ್ಕಳನ್ನು ದತ್ತು ಪಡೆದು ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಆದರೆ ಇಂತಹ ಕೆಲಸ ಮಾಡಲು ಆಳ್ವಾರು ಬಿಟ್ಟು ಬೇರೆ ಯಾವುದೇ ಶಿಕ್ಷಣ ಸಂಸ್ಥೆ ಇದುವರೆಗೆ ಮುಂದೆ ಬಂದಿಲ್ಲ. ಡಾ ಆಳ್ವಾ ಸದಾ ನಿಘರ್ವಿ ಹಾಗೂ ತಾಳ್ಮೆಯ ವ್ಯಕ್ತಿ. ಹಲವಾರು ಮಂದಿ ನಿಜವಾದ ಸತ್ಯ ತಿಳಿಯದೆ ಇಂದು ಅವರನ್ನು ಟೀಕಿಸುತ್ತಿದ್ದಾರೆ. ಇಷ್ಟು ದೊಡ್ಡ ಶಿಕ್ಷಣ ಸಂಸ್ಥೆಯನ್ನು ನಡೆಸಲು ಆಳ್ವಾರು 24 ಗಂಟೆಯೂ ಕೆಲಸ ಮಾಡುವ ವ್ಯಕ್ತಿ ಅಂತಹ ವ್ಯಕ್ತಿ ತೇಜೋವಧೆಗೆ ಹಲವಾರು ಮಂದಿ ಯತ್ನಿಸುತ್ತಿದ್ದು, ಆಳ್ವಾ ಯಾವುದೇ ತನಿಖೆಗೂ ಸಿದ್ದ ಎಂದಿದ್ದಾರೆ ಅದು ಅವರ ನಿಜವಾದ ವ್ಯಕ್ತಿತ್ವ ಎಂದರು.
ಮೂಲ್ಕಿ ಚರ್ಚಿನ ಧರ್ಮಗುರು ವಂ ಫ್ರಾನ್ಸಿಸ್ ಝೇವಿಯರ್ ಗೋಮ್ಸ್ ಮಾತನಾಡಿ ಜುಲೈ 20 ರಂದು ಆಳ್ವಾರ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯ ಆತ್ಮಹತ್ಯೆ ಮಾಡಿಕೊಂಡ ಬಳಿಕ ಕೆಲವು ವ್ಯಕ್ತಿಗಳು ಡಾ ಮೋಹನ್ ಆಳ್ವಾರನ್ನು ಗುರಿಯಾಗಿಸಿಕೊಂಡು ಟೀಕಿಸಲು ಆರಂಭಿಸಿದ್ದಾರೆ. ಪೋಲಿಸ್ ಇಲಾಖೆ ಪ್ರಕರಣದ ತನಿಖೆ ನಡೆಸುತ್ತಿದ್ದು ಸತ್ಯ ಸದ್ಯವೇ ಹೊರಬೀಳಲಿದೆ ಆದರೆ ಕೆಲವೊಂದು ವ್ಯಕ್ತಿಗಳು ಆಳ್ವಾರ ತೇಜೋವಧೆಗೆ ನಿಂತಿವೆ ಇದು ಖಂಡನೀಯ. ಆಳ್ವಾರು ಸಂಪೂರ್ಣ ಪಾರದರ್ಶಕರಾಗಿ ಯಾವುದೇ ತನಿಖೆಗೆ ಸಿದ್ದ ಎಂದು ಹೇಳಿದರೂ ಸಹ ಅವರನ್ನು ಗುರಿಯಾಗಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಆಳ್ವಾರು ಮತ್ತು ತಮ್ಮ ಸಂಬಂಧದ ಕುರಿತು ಪ್ರಸ್ತಾಪಿಸಿದ ವಂ ಗೋಮ್ಸ್ ಅವರು ಆಳ್ವಾರದ್ದು ಮತ್ತು ನನ್ನದು ಸುಮಾರು 35 ವರ್ಷಗಳ ಸಂಬಂಧ. ತನ್ನ ಮಕ್ಕಳಿಗಿಂತಲೂ ಹೆಚ್ಚು ತನ್ನ ಸಂಸ್ಥೆಯ ಮಕ್ಕಳನ್ನು ಪ್ರೀತಿಸುವ ವಿಶೇಷ ಗುಣವನ್ನು ಹೊಂದಿರುವ ವ್ಯಕ್ತಿ ಡಾ. ಆಳ್ವಾ. ತನ್ನ ಸಂಸ್ಥೆಯ ವಿದ್ಯಾರ್ಥಿಗಳ ಕುರಿತು ಅತೀವ ಕಾಳಜಿ ಹೊಂದಿರುವ ಆಳ್ವಾರನ್ನು ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಅವರುಗಳ ಪ್ರಯತ್ನ ಹೆಚ್ಚು ದಿನ ನಡೆಯುವುದಿಲ್ಲ ಬದಲಾಗಿ ಡಾ. ಮೋಹನ್ ಆಳ್ವಾರು ಕಳಂಕರಹಿತರಾಗಿ ಹೊರಬರಲಿದ್ದಾರೆ ಎಂದರು.
ಸಭೆಯಲ್ಲಿ ಡಾ. ಯಶೋವರ್ಮ, ಡಾ. ಎಜೆ ಶೆಟ್ಟಿ, ಡಾ. ಮಂಜುನಾಥ ಭಂಡಾರಿ, ವೈದೇಹಿ, ಕರ್ನಲ್ ಐ ಎನ್ ರೈ, ಪ್ರೋ ಎಮ್ ಬಿ ಪುರಾಣಿಕ್, ಸುಂದರ್ ಜಿ ಆಚಾರ್ಯ, ವಿಜಯನಾಥ್ ವಿಠಲ್ ಶೆಟ್ಟಿ, ಸಹನಾ ಪೂಜಾರಿ, ಜಯರಾಮ್ ಶೆಟ್ಟಿ, ಸಬಿತಾ ಮೋನಿಸ್, ಯಶವಂತ್ ಮೆಂಡನ್, ಹಾಗೂ ಇತರರ ನಾಯಕರು ಪಾಲ್ಗೊಂಡಿದ್ದಾರೆ.