Home Mangalorean News Kannada News ಕಾವ್ಯ ಸಾವಿನ ಪ್ರಕರಣದಲ್ಲಿ ಕೆಲವು ವ್ಯಕ್ತಿಗಳು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ : ಕ್ಯಾ. ಕಾರ್ಣಿಕ್

ಕಾವ್ಯ ಸಾವಿನ ಪ್ರಕರಣದಲ್ಲಿ ಕೆಲವು ವ್ಯಕ್ತಿಗಳು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ : ಕ್ಯಾ. ಕಾರ್ಣಿಕ್

Spread the love

ಕಾವ್ಯ ಸಾವಿನ ಪ್ರಕರಣದಲ್ಲಿ ಕೆಲವು ವ್ಯಕ್ತಿಗಳು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ : ಕ್ಯಾ. ಕಾರ್ಣಿಕ್

ಮಂಗಳೂರು: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯ ಅವರ ಸಾವನ್ನು ಕೆಲವೊಂದು ವ್ಯಕ್ತಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಹೇಳೀದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ  ಕುಮಾರಿ ಕಾವ್ಯ ಅತ್ಯಂತ ಪ್ರತಿಭಾನ್ವಿತ ಕ್ರೀಡಾ ಪಟುವಾಗಿ ರೂಪುಗೊಳ್ಳುತ್ತಿರುವ ಎಳೆ ವಯಸ್ಸಿನಲ್ಲಿ ನಮ್ಮೆಲ್ಲರನ್ನು ಅಗಲಿರುವುದು ಅತ್ಯಂತ ಖೇದಕರ.  ಆಕೆಯ ಅಗಲುವಿಕೆಗೆ ಸಂತಾಪವನ್ನು ವ್ಯಕ್ತಪಡಿಸುತ್ತಾ ನೊಂದು ಬೆಂದಿರುವ ಹೆತ್ತವರಿಗೆ ಸಾಂತ್ವನ ಹೇಳುವುದರೊಂದಿಗೆ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಹಾಗೂ ನಮ್ಮನಗಲಿದ ಆ ಚೇತನಕ್ಕೆ ಭಗವಂತನು ಚಿರ ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.

ಯಾವುದೇ ಅಸ್ವಾಭಾವಿಕ ಸಾವಿನ ಹಿಂದೆ ಇರುವ ಎಲ್ಲಾ ಸಂದೇಹಗಳನ್ನು ಪೋಲೀಸ್ ಇಲಾಖೆ ತನಿಖೆ ಮೂಲಕ ಹೊರ ತರುವ ತನ್ನ ಕರ್ತವ್ಯವನ್ನು ನಿಭಾಯಿಸಲು ಅನುಕೂಲವಾಗುವಂತೆ, ಕು. ಕಾವ್ಯಳ ಅಸ್ವಾಭಾವಿಕ ಸಾವನ್ನು “ಮೆಡಿಕೊ ಲೀಗಲ್ ಕೇಸ್” ಎಂದು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.  ಈ ಅಸ್ವಾಭಾವಿಕ ಸಾವಿನ ಹಿಂದೆ ಅನೇಕ ಸಂದೇಹಗಳು, ಊಹಾಪೋಹಗಳು ಹಬ್ಬುತ್ತಿದ್ದು, ತನಿಖಾಧಿಕಾರಿಗಳು ತನಿಖೆಯನ್ನು ಮುಗಿಸಿ ಎಲ್ಲಾ ಉಹಾಪೋಹಗಳಿಗೆ  ಶೀಘ್ರ ತೆರೆ ಎಳೆಯುವಂತೆ ಪೋಲೀಸ್ ಇಲಾಖೆಯನ್ನು ಆಗ್ರಹಿಸುತ್ತೇವೆ.

ಸಾಮಾಜಿಕ ಜಲಾತಾಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಅತಿರಂಜಿತವಾಗಿ ನಡೆಸಯಲ್ಪಡುತ್ತಿರುವ ಚರ್ಚೆಗಳಿಂದಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಸ್ರಾರು ವಿದ್ಯಾರ್ಥಿಗಳು, ಹೆತ್ತವರು ಹಾಗೂ ಪೋಷಕರು, ಶಿಕ್ಷಕ ಉಪನ್ಯಾಸಕ ಹಾಗೂ ಸಿಬ್ಬಂದಿ ವರ್ಗದವರು ಅತ್ಯಂತ ಆತಂಕಕ್ಕೆ ಈಡಾಗಿದ್ದಾರೆ.  ತನಿಖೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ಚರ್ಚೆ ಅನಗತ್ಯ ಗೊಂದಲ ಸೃಷ್ಠಿ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳ ಮತ್ತು ಪೋಷಕರ ಹಿತಾಸಕ್ತಿಯನ್ನು ಪರಿಗಣಿಸಿ, ಪೋಲೀಸ್ ಇಲಾಖೆಯ ತನಿಖೆಯಲ್ಲಿ ವಿಶ್ವಾಸವಿರಿಸಿ ಅಸ್ವಾಭಾವಿಕ ಸಾವಿನ ಹಿಂದಿರುವ ಸತ್ಯಾ ಸತ್ಯತೆಯನ್ನು ಹೊರತರಲು ಸಹಕರಿಸುವಂತೆ ಸಂಬಂಧಿಸಿದ ಎಲ್ಲರನ್ನೂ ವಿನಂತಿಸುತ್ತೇವೆ.

         ಈ ಸಾವನ್ನೇ ನೆಪವಾಗಿಟ್ಟುಕೊಂಡು, ಕಳೆದ 3 ದಶಕಗಳಿಂದ ನಾಡಿನ ಸಹಸ್ರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿ ನಾಡಿಗೆ ಹೆಮ್ಮೆ ತಂದಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನಾಗಲಿ, ಡಾ. ಮೋಹನ್ ಆಳ್ವರನ್ನಾಗಲಿ ಅಥವಾ ಆ ಸಂಸ್ಥೆಯ ಸಿಬ್ಬಂದಿಗಳನ್ನಾಗಲಿ ಸಂದೇಹಾಸ್ಪದ ಪ್ರಶ್ನೆಗಳನ್ನು ಹುಟ್ಟುಹಾಕಿ  ವೈಯಕ್ತಿಕವಾಗಿ ಹಾಗೂ ಸಂಸ್ಥೆಯ ತೇಜೋವಧೆ ಮಾಡುತ್ತಿರುವುದು ಸರ್ವತಾ ಅನಪೇಕ್ಷಣಿಯ.  ಕು. ಕಾವ್ಯಳ ಹೆತ್ತವರಿಗೆ ನ್ಯಾಯವನ್ನು ಒದಗಿಸುವ ಬೇಡಿಕೆ ಅತ್ಯಂತ ಸಮಂಜಸವಾಗಿದ್ದರೂ, ಶಿಕ್ಷಣ ಸಂಸ್ಥೆಯ ಹಾಗೂ ಸಂಸ್ಥೆಯ ಅಧ್ಯಕ್ಷರ ಕಳೆದ 3 ದಶಕಗಳ ಸಾಧನೆಯ ಕೊಡುಗೆಯನ್ನು ಪ್ರಶ್ನಿಸುತ್ತಿರುವ ಒಂದು ವರ್ಗ ಷಡ್ಯಂತ್ರ ನಾಗರಿಕ ಸಮಾಜವನ್ನು ಆತಂಕಕ್ಕೆ ಈಡು ಮಾಡಿದೆ.  ಇದೇ ರೀತಿಯ ಇತರ ಅಸ್ವಭಾವಿಕ ಘಟನೆಗಳು ನಡೆದಾಗ ಈ ವರ್ಗದ ಮೌನ ಇನ್ನಷ್ಟು ಸಂದೇಹಗಳನ್ನು ಸೃಷ್ಟಿ ಮಾಡಿದೆ.

ಘಟನೆ ನಡೆದ ಪ್ರಾರಂಭದಲ್ಲೆ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವರವರು ಈ ಸಾವಿನ ಹಿಂದಿರುವ ಸತ್ಯವನ್ನು ಬಯಲಿಗೆಳೆಯಲು ಅಗತ್ಯವಿರುವ ಪೂರ್ಣ ಸಹಕಾರ ನೀಡುವುದಾಗಿ ಮಾಧ್ಯಮಗಳಲ್ಲಿ ಘೋಷಣೆ ಮಾಡಿದ್ದರೂ, ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆ ಎಲ್ಲೊ ದಾರಿ ತಪ್ಪುತ್ತಿರುವಂತೆ ತೋರುತ್ತಿದ್ದು ಹಾಗೂ ತಥಾಕತಿಥ ಹೋರಾಟಗಾರರ ಮಾನಸಿಕತೆಯನ್ನು, ಬೇಜವಬ್ದಾರಿಯನ್ನು ಹಾಗೂ ಹಿಂದಿರುವ ಷಡ್ಯಂತ್ರವನ್ನು ತೋರಿಸುತ್ತಿದೆ.

ಡಾ. ಮೋಹನ್ ಆಳ್ವ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನೀಡಿದ ಅದ್ಬುತವಾದ ಕೊಡುಗೆಯನ್ನು ಅತ್ಯಂತ ಗೌರವದಿಂದ ಸ್ಮರಿಸುತ್ತಾ, ವೈಯಕ್ತಿಕವಾಗಿ ಮತ್ತು ಸಾಂಸ್ಥಿಕವಾಗಿ ಅವರ ತೇಜೋವಧೆ ಮಾಡುವ ಒಂದು ಸಣ್ಣ ವರ್ಗದ ಈ ಪ್ರಯತ್ನವನ್ನು ಅತ್ಯಂತ ಕಟುವಾಗಿ ಖಂಡಿಸುತ್ತಾ, ಪೋಲೀಸ್ ಇಲಾಖೆ ಎಚ್ಚೆತ್ತುಕೊಂಡು ಈ ಘಟನೆಯ ತನಿಖೆಯನ್ನು ಕೂಡಲೆ ಮುಗಿಸಿ ಸತ್ಯ ಸಂಗತಿಯನ್ನು ಸಾರ್ವಜನಿಕರ ಗಮನಕ್ಕೆ ಕೂಡಲೆ ತರಬೇಕೆಂದು ಆಗ್ರಹಿಸಿದ್ದಾರೆ.

 


Spread the love

Exit mobile version