ಕುಂದಾಪುರದಲ್ಲಿ ಮೂವರು ಪೊಲೀಸರಿಗೆ ಕೊರೋನಾ ಪಾಸಿಟಿವ್
ಕುಂದಾಪುರ : ಇಲ್ಲಿನ ಪೊಲೀಸ್ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರ ಕಚೇರಿ ಸಿಬ್ಬಂದಿಯೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಉಪವಿಭಾಗದ ಕಚೇರಿಯನ್ನು ತಾತ್ಕಾಲಿಕವಾಗಿ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಗೆ ಸ್ಥಳಾಂತರಿಸಲಾಗಿದೆ ಹಾಗೂ ಸಿಬ್ಬಂದಿಗಳಿನ್ನು ಕ್ವಾರಂಟೈನ್ ಮಾಡಲಾಗಿದೆ.
ಕಳೆದ 2 ದಿನಗಳ ಹಿಂದೆ ಸಿಬ್ಬಂದಿಯೊರ್ವರಲ್ಲಿ ಜ್ವರ ಕಂಡು ಬಂದಿದ್ದರಿಂದ ಅವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ಸೋಂಕು ದೃಢವಾಗಿರುವುದರಿಂದ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಉಪವಿಭಾಗ ಕಚೇರಿಯನ್ನು ಸ್ಯಾನಿಟೈಸ್ ಮಾಡಿಸಲಾಗುತ್ತಿದೆ. ಕುಂದಾಪುರ ಪೊಲೀಸ್ ಉಪವಿಭಾಗದ ಹೆಚ್ಚುವರಿ ಹೊಣೆಯನ್ನು ಉಡುಪಿ ಡಿವೈಎಸ್ಪಿ ಅವರಿಗೆ ವಹಿಸಲಾಗಿದೆ.
ಕುಂದಾಪುರ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯ ಹೈವೇ ಪಟ್ರೋಲ್ ನಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ಹಾಗೂ ಚಾಲಕ ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಸಿಬ್ಬಂದಿಗಳು ಈಗಾಗಲೇ ಕ್ವಾರಂಟೈನಲ್ಲಿ ಇದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕುಂದಾಪುರ ಟ್ರಾಫಿಕ್ ಠಾಣೆ ಮಾಮೂಲಿಯಂತೆ ನಡೆಯಲಿದೆ ಎಂದು ಕಚೇರಿ ಮೂಲಗಳು ತಿಳಿಸಿದೆ.
–