Home Mangalorean News Kannada News ಕುಂದಾಪುರ: ಕೊಲ್ಲೂರು ದೇವಳದ ಚಿನ್ನ ಕಳ್ಳತನ; ಆರೋಪಿಯ ಬಂಧನ; ಮಾರ್ಚ್ 3 ರ ವರೆಗೆ ನ್ಯಾಯಾಂಗ...

ಕುಂದಾಪುರ: ಕೊಲ್ಲೂರು ದೇವಳದ ಚಿನ್ನ ಕಳ್ಳತನ; ಆರೋಪಿಯ ಬಂಧನ; ಮಾರ್ಚ್ 3 ರ ವರೆಗೆ ನ್ಯಾಯಾಂಗ ಬಂಧನ

Spread the love

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಚಿನ್ನ ಕಳ್ಳತನದ ವಿಷಯಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ದೇವಳದ ಸೇವಾ ಕೌಂಟರ್ ನಲ್ಲಿ ಭಕ್ತಾಧಿಗಳು ನೀಡಿರುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಗೆ ರಶೀಧಿ ನೀಡುವ ಸಿಬಂಧಿ ಶಿವರಾಮ್ ಬಿ ಎಂದು ಗುರುತಿಸಲಾಗಿದೆ.

20160224-kollur-temple

ಪ್ರಕರಣದ ಹಿನ್ನಲೆ: ಶಿವರಾಮ ಬಿ. ಎಂಬವರು ದೇವಳದ ಸೇವಾ ಕೌಂಟರ್ 1 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ಸೇವಾ ಕೌಂಟರ್ ನಲ್ಲಿ ಭಕ್ತಾಧಿಗಳು ನೀಡಿರುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಗೆ ರಶೀಧಿ ನೀಡಿ ತಾತ್ಕಾಲಿಕವಾಗಿ ಅವರಿಗೆ ನೀಡಲಾಗಿದ್ದ ಗೋದ್ರೇಜ್ ಆಲ್ಮೇರಾದಲ್ಲಿ ಇರಿಸಿ ವಶಕ್ಕೆ ಇಟ್ಟುಕೊಂಡು ನಂತರ ಕಾರ್ಯನಿರ್ವಹಣಾಧಿಕಾರಿಯವರ ವಶಕ್ಕೆ ಹಸ್ತಾಂತರಿಸಬೇಕಾಗಿದ್ದು, ಇವರು 2012 ಜುಲೈ 22 ರಿಂದ ಸೇವಾ ಕೌಂಟರ್ ನಲ್ಲಿ ಭಕ್ತಾಧಿಗಳು ನೀಡಿರುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಗೋದ್ರೇಜ್ ಆಲ್ಮೇರಾದಲ್ಲಿ ಇರಿಸಿಕೊಂಡು ಕೀಯನ್ನು ವಶಕ್ಕೆ ಇಟ್ಟುಕೊಂಡು, ಕಾರ್ಯನಿರ್ವಹಣಾಧಿಕಾರಿಯವರ ವಶಕ್ಕೆ ನೀಡದೇ 2016 ಫೆಬ್ರವರಿ 15 ರಿಂದ ಅನಿಧಿಕೃತ ಗೈರುಹಾಜರಾಗಿದ್ದು,  ಶಿವರಾಮನು ದೇವಳಕ್ಕೆ ಸೇರಿದ ಚಿನ್ನಾಭರಣಗಳನ್ನು ದುರುಪಯೋಗಿಸಿಕೊಂಡಿರುವ ಬಗ್ಗೆ ಅನುಮಾನ ಉಂಟಾಗಿದ್ದು, ಆತನ ವಿರುದ್ದ ಫೆಬ್ರವರಿ 22 ರಂದು ದೇವಸ್ಥಾನದ ಆಡಳಿತ ಕಾರ್ಯ ನಿರ್ವಹಣಾಧಿಕಾರಿ ಟಿ.ಆರ್ ಉಮಾ ದೂರನ್ನು ನೀಡಿದ್ದಾರೆ.

ದೂರಿನನ್ವಯ ಕೊಲ್ಲೂರು ಠಾಣ ಪೋಲಿಸರು ಶಿವರಾಮ್ ಅವರನ್ನು ಫೆಬ್ರವರಿ 23 ರಂದು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು, ನಂತರ ಕಾರ್ಯನಿರ್ವಹಣಾಧಿಕಾರಿಗಳ ಮುಂದೆ ಕರೆದುಕೊಂಡು ಹೋಗಿ  ತನ್ನ ವಶದಲ್ಲಿದ್ದ ಗೋದ್ರೇಜ್ ಕಪಾಟಿನ ಕೀಯನ್ನ ಹಾಜರುಪಡಿಸಿ ಅದರಿಂದ ಕಪಾಟಿನ ಬೀಗವನ್ನು ತೆರೆದಂತೆ ಕಾರ್ಯನಿರ್ವಹಣಾಧಿಕಾರಿರವರು ಪಂಚರ ಸಮಕ್ಷಮದಲ್ಲಿ ಕಪಾಟಿನಲ್ಲಿದ್ದ ಸೊತ್ತುಗಳನ್ನು ಅಜಮಾಯಿಸಲಾಗಿ ಅದರಲ್ಲಿ ಭಕ್ತರು ಹರಕೆ ರೂಪದಲ್ಲಿ ನೀಡಿದ 3,069 ಗ್ರಾಂ ತೂಕದ ಚಿನ್ನದ ಸೊತ್ತುಗಳ ಪೈಕಿ ಸುಮಾರು 2,423 ಗ್ರಾಂ ತೂಕದ ಸುಮಾರು 38 ಚಿನ್ನದ ಒಡವೆಗಳು ಕಾಣೆಯಾಗಿರುವುದು ಕಂಡು ಬಂದಿರುತ್ತದೆ.

ಬಳಿಕ ಶಿವರಾಮನನ್ನು ವಿಚಾರಣೆ ನಡೆಸಿದಾಗ  ಆತನು ತನಗೆ ಸಂಸಾರದಲ್ಲಿ ತೀವ್ರ ಹಣದ ಅಡಚಣೆಯಿದ್ದು ಹಾಗೂ ಸ್ನೇಹಿತರಿಂದ ಹಾಗೂ ಇತರರಿಂದ ಸಾಲವನ್ನು ಪಡೆದುಕೊಂಡು ಅದನ್ನು ತೀರಿಸಲಾಗದೇ ಸಂಕಷ್ಟದಲ್ಲಿದ್ದು ಈ ಕಾರಣದಿಂದ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ಬೇರೆ ದಾರಿ ಕಾಣದೇ ನಾನು ಸೇವಾ ಕೌಂಟರ್ ನಲ್ಲಿ ಭಕ್ತಾಧಿಗಳು ನೀಡಿರುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಗೋದ್ರೇಜ್ ಆಲ್ಮೇರಾದಲ್ಲಿ ಇರಿಸಿದ ಹಲವಾರು ಚಿನ್ನದ ಸರವನ್ನು ತಾನು ಮತ್ತು ತನ್ನ ಸ್ನೇಹಿತರಲ್ಲಿ ತನ್ನ ಸ್ವಂತ ಚಿನ್ನವೆಂದು ಹೇಳಿ ಅವರಿಂದ ಕೊಲ್ಲೂರು ಸೊಸೈಟಿಯಲ್ಲಿ, ಕೊಲ್ಲೂರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಲ್ಲಿ, ಕೊಲ್ಲೂರು ಕೃಷ್ಣ ಫೈನಾನ್ಸ್ ನಲ್ಲಿ, ಅರೆಶಿರೂರು ಸೊಸೈಟಿಯಲ್ಲಿ ಬೈಂದೂರು ಕೃಷ್ಣ ಸೊಸೈಟಿಯಲ್ಲಿ, ಬೈಂದೂರು ಮುತ್ತೂಟ್ ಫೈನಾನ್ಸ್ ನಲ್ಲಿ, ಕುಂದಾಪುರ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಲ್ಲಿ, ಕುಂದಾಪುರ ಮುತ್ತೂಟ್  ಸಂಸ್ಥೆಯಲ್ಲಿ  ಅಡವಿಟ್ಟಿದ್ದು ಅದರಿಂದ ಬಂದ ಹಣವನ್ನು ತಾನು ಸ್ನೇಹಿತರೊಂದಿಗೆ ಸೇರಿಕೊಂಡು ಮದ್ಯಪಾನಕ್ಕೆ ಹಾಗೂ ಶೋಕಿಗಾಗಿ  ಖರ್ಚು ಮಾಡಿರುತ್ತೇನೆ. ಹಾಗೂ ಚಿನ್ನದ ಮೂರು ಸೊತ್ತುಗಳನ್ನು ತನ್ನ ಮನೆಯಲ್ಲಿ ಒಂದು ಕಡೆ ಇಟ್ಟಿರುತ್ತೆನೆ. ನಾನು ವಂಚನೆ ಮಾಡಿದ ಚಿನ್ನಾಭರಣಗಳನ್ನು ಅಡವಿರಿಸಿದ ಸ್ಥಳಗಳನ್ನು ಮತ್ತು ಮನೆಯಲ್ಲಿರಿಸಿದ ಚಿನ್ನದ ಸೊತ್ತುಗಳ್ನು ತನ್ನೊಂದಿಗೆ ಬಂದರೆ ಅದನ್ನು ತೋರಿಸಿಕೊಡುತ್ತೇನೆ ಎಂದು ಹೇಳಿಕೆ ನೀಡಿದ್ದಾನೆ.

ಆಪಾದಿತನಿಂದ ರೂ 6 ಲಕ್ಷ ಮೌಲ್ಯದ 392 ಗ್ರಾಂ ತೂಕದ ಕೆಂಪು ಮತ್ತು ಹಸಿರು ಬಣ್ಣದ ಹರಳಿನ ಚಿನ್ನದ ನೆಕ್ಲೇಸ್, ರೂ 60000 ಮೌಲ್ಯದ 22 ಗ್ರಾಂ ತೂಕದ ಚಿನ್ನದ ಲಕ್ಷ್ಮೀ ದೇವಿಯ ಪೆಂಡೆಂಟ್ ಹಾಗೂ ರೂ 5.85 ಲಕ್ಷ ಮೌಲ್ಯದ 217 ಗ್ರಾಂ ತೂಕದ ಹಸಿರು ಹರಳು ಇರುವ ಚಿನ್ನದ ತಾವರೆ ತೂಕದ ಆಕೃತಿಯ ಹೂವನ್ನು ವಶಪಡಿಸಿಕೊಳ್ಳಲಾಗಿದೆ.

ಫೆಬ್ರವರಿ 24 ರಂದು ಆರೋಪಿಯನ್ನು ದಸ್ತಗಿರಿ ಕ್ರಮ ಜರುಗಿಸಿ ಮಾನ್ಯ ಎ ಸಿ ಜೆ  ಮತ್ತ ಜೆ ಎಮ್ ಎಫ್ ಸಿ ನ್ಯಾಯಾಲಯ ಕುಂದಾಪುರಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಆರೋಪಿತನ್ನು ಮಾರ್ಚ್ 3 ರವರೆಗೆ 8 ದಿನಗಳ ಕಾಲ  ಪೊಲೀಸ್ ಕಸ್ಟಡಿಗೆ ನೀಡಿರುತ್ತಾರೆ

ಸದ್ರಿ ಪ್ರಕರಣದಲ್ಲಿ ಆಪಾದಿತನು  ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದಂತೆ ಕೊಲ್ಲೂರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಲ್ಲಿ, ಕೊಲ್ಲೂರು ಕೃಷ್ಣ ಫೈನಾನ್ಸ್ ನಲ್ಲಿ, ಅರೆಶಿರೂರು ಸೊಸೈಟಿಯಲ್ಲಿ ಬೈಂದೂರು ಕೃಷ್ಣ ಸೊಸೈಟಿಯಲ್ಲಿ, ಬೈಂದೂರು ಮುತ್ತೂಟ್ ಫೈನಾನ್ಸ್ ನಲ್ಲಿ, ಕುಂದಾಪುರ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಲ್ಲಿ, ಮತ್ತು ಕುಂದಾಪುರ ಮುತ್ತೂಟ್ ಫೈನಾನ್ಸ್ ನಲ್ಲಿ  ಅಡವಿರಿಸಿದ ಹಲವಾರು ಚಿನ್ನಾಭರಣಗಳನ್ನು ಸ್ವಾದೀನಪಡಿಸಿಕೊಳ್ಳುವರೇ ಬಾಕಿಯಿರುತ್ತದೆ. ಅಲ್ಲದೇ ಈ ಕೃತ್ಯದಲ್ಲಿ ಈತನೊಂದಿಗೆ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದು ತನಿಖೆಯಲ್ಲಿ ಕಂಡುಕೊಳ್ಳಬೇಕಿರುತ್ತದೆ.


Spread the love

Exit mobile version